ಹಿಂದುಳಿದವರ, ಕಡುಬಡವರ ಸ್ವಾವಲಂಬನೆಗೆ ಸರ್ಕಾರ ಬದ್ಧ: ಸಂಡೂರು ಶಾಸಕಿ

ಹಿಂದುಳಿದವರ, ಕಡುಬಡವರ ಸ್ವಾವಲಂಬನೆಗೆ ಸರ್ಕಾರ ಬದ್ಧ: ಸಂಡೂರು ಶಾಸಕಿ Government committed to self-reliance of the backward and the poorest: Sandur MLA

ಲೋಕದರ್ಶನ ವರದಿ

           ಬಳ್ಳಾರಿ 20:  ಸಮಾಜದ ಹಿಂದುಳಿದ ಹಾಗೂ ಬಡವರ ಸ್ವಾವಲಂಬಿ ಬದುಕಿಗೆ ಅಗತ್ಯವಿರುವ ಸೌಕರ್ಯಗಳನ್ನು ಕಲ್ಪಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ನಮ್ಮ ಸರ್ಕಾರ ನಿರಂತರವಾಗಿ ಮಾಡುತ್ತಿದೆ ಎಂದು ಸಂಡೂರು ಶಾಸಕಿ ಈ. ಅನ್ನಪೂರ್ಣ ಅವರು ಹೇಳಿದರು. 

ಭವಿಷ್ಯ ನಿಧಿ ಸಂಸ್ಥೆ ಬಳ್ಳಾರಿ ಪ್ರಾದೇಶಿಕ ಕಚೇರಿ ವತಿಯಿಂದ, ತೋರಣಗಲ್ಲು ವಿದ್ಯಾನಗರದ ಜೆಎಸ್‌ಡಬ್ಲ್ಯೂ ಟೌನ್‌ಶಿಪ್‌ನಲ್ಲಿರುವ ‘ಜೆಮ್ಯಾಕ್ಸ್‌' ಸಭಾಂಗಣದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪ್ರಧಾನ್ ಮಂತ್ರಿ ವಿಕಸಿತ್ ಭಾರತ್ ರೋಜ್‌ಗಾರ್ ಯೋಜನೆ' ಅಡಿ ಶುಕ್ರವಾರ ಹಮ್ಮಿಕೊಂಡಿದ್ದ ಬೃಹತ್ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಸಂಡೂರು ತಾಲೂಕು ಸುತ್ತಮುತ್ತ ಬೆಟ್ಟಗುಡ್ಡಗಳಿಂದ ಆವೃತವಾಗಿದ್ದು, ಬೇಸಾಯದ ಭೂಮಿ ತೀರಾ ಕಡಿಮೆಯಿದೆ. ಹೀಗಾಗಿ ಇಲ್ಲಿನ ಬಹುತೇಕ ಜನರು ಜೆಎಸ್‌ಡಬ್ಲ್ಯೂ ಸಂಸ್ಥೆಯನ್ನೇ ಆಶ್ರಯಿಸಿ ಬದುಕುತ್ತಿದ್ದಾರೆ. ಅವರ ಉದ್ಯೋಗ ಮತ್ತು ಜೀವನ ಭದ್ರತೆಗೆ ಸಂಸ್ಥೆ ಸದಾ ಒತ್ತು ನೀಡಬೇಕು ಎಂದು ತಿಳಿಸಿದರು. 

ಕೈಗಾರಿಕಾ ವಲಯದ ಸುತ್ತಮುತ್ತಲಿನ ರಾಸಾಯನಿಕ ಮಿಶ್ರಿತ ಗಾಳಿಯಿಂದಾಗಿ ಸಾರ್ವಜನಿಕರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಈ ಬಗ್ಗೆ ಜೆಎಸ್‌ಡಬ್ಲ್ಯೂ ಸಂಸ್ಥೆಯು ವಿಶೇಷ ಗಮನಹರಿಸಬೇಕು. ಇಲ್ಲಿನ ಸುತ್ತಮುತ್ತಲಿನ ಜನರೆಲ್ಲರೂ ಗಣಿ ಕಾರ್ಮಿಕರು ಹಾಗೂ ಬಡ ವರ್ಗದವರಾಗಿದ್ದಾರೆ. ಇವರ ಹಿತದೃಷ್ಟಿಯಿಂದ ತಾಲೂಕಿನಲ್ಲಿ ಸುಸಜ್ಜಿತ ಉಚಿತ ಆಸ್ಪತ್ರೆಯೊಂದನ್ನು ಸ್ಥಾಪಿಸಿಕೊಡಬೇಕು ಎಂದು ಪ್ರಸ್ತಾಪಿಸಿದರು. 

ನಮ್ಮ ಸಂಡೂರು ತಾಲೂಕಿನ ಅಸ್ಮಿತೆ ಎಂದರೆ ಅದು ಜೆಎಸ್‌ಡಬ್ಲ್ಯೂ ಸಂಸ್ಥೆ. ಹೊರಗಿನವರು ಯಾರೇ ಸಂಡೂರು ಎಲ್ಲಿದೆ ಎಂದು ಕೇಳಿದಾಗ, ಜೆಎಸ್‌ಡಬ್ಲ್ಯೂ ಸಂಸ್ಥೆ ಇರುವ ಕ್ಷೇತ್ರ ಎಂದು ಗುರುತಿಸಿದರೆ ತಕ್ಷಣವೇ ಜನ ಗುರುತಿಸುತ್ತಾರೆ. ಸಂಸ್ಥೆಯ ಸಿಎಸ್‌ಆರ್ ಯೋಜನೆಯಡಿ ತಾಲೂಕಿನ ಸವಾಂರ್ಗೀಣ ಅಭಿವೃದ್ಧಿಗೆ ಸಾಕಷ್ಟು ನೆರವು ಸಿಗುತ್ತಿದ್ದು, ಸಂಸ್ಥೆಯು ಸಮಾಜಸೇವೆಯಲ್ಲಿಯೂ ಕೈಜೋಡಿಸುತ್ತಿರುವುದು ಶ್ಲಾಘನೀಯ ಎಂದರು. 

ವಿಕಸಿತ ಭಾರತ ಯಾತ್ರೆಯಲ್ಲಿ ಹಲವು ಕೈಗಾರಿಕಾ ಸಂಸ್ಥೆಗಳೊಂದಿಗೆ ನಾವೆಲ್ಲರೂ ಸದೃಢ ಹೆಜ್ಜೆ ಇಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕೈಗಾರಿಕಾ ಸಂಸ್ಥೆಗಳು ಇನ್ನು ದೊಡ್ಡ ಮಟ್ಟದಲ್ಲಿ ಬೆಳೆದು, ದೇಶಕ್ಕೆ ಹೆಚ್ಚಿನ ಕೊಡುಗೆ ನೀಡಲಿ ಹಾಗೂ ಯುವಜನತೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿ ಎಂದು ಆಶಿಸಿದರು.