ಉತ್ತರ ಕರ್ನಾಟಕದ ಬಗ್ಗೆ ಸರ್ಕಾರದ ಮಲತಾಯಿ ಧೋರಣೆ ಸಲ್ಲದು : ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು

Government's stepmother attitude towards North Karnataka is not good: Dr. Allama Prabhu Mahaswamy

ಲೋಕದರ್ಶನ ವರದಿ 

ಉತ್ತರ ಕರ್ನಾಟಕದ ಬಗ್ಗೆ ಸರ್ಕಾರದ ಮಲತಾಯಿ ಧೋರಣೆ ಸಲ್ಲದು : ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು 

ಬೆಳಗಾವಿ 07: ಸರ್ಕಾರದ ರಾಜ್ಯಮಟ್ಟದ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ ಮಾಡಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಬೆಳಗಾವಿಯನ್ನು ಕರ್ನಾಟಕದ ಎರಡನೇ ರಾಜಧಾನಿಯಾಗಿ ಘೋಷಿಸಿ, ಇಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು. ಸರ್ಕಾರ ಉತ್ತರ ಕರ್ನಾಟಕದ ಕುರಿತು ಮಲತಾಯಿ ಧೋರಣೆ ತೋರಬಾರದು ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಸರ್ಕಾರವನ್ನು ಎಚ್ಚರಿಸಿದರು ಅವರು ಇಂದು ಕನ್ನಡನಾಡು, ನುಡಿಗಾಗಿ ಶ್ರಮಿಸಿದ ನಾಗನೂರು ರುದ್ರಾಕ್ಷಿಮಠದ ಡಾ. ಶಿವಬಸವ ಮಹಾಸ್ವಾಮಿಗಳವರ 135ನೇ ಜಯಂತಿ ಪ್ರಯುಕ್ತ "ಸಮಗ್ರ ಉತ್ತರ ಕರ್ನಾಟಕ ಅಭಿವೃದ್ಧಿಯಾಗಲಿ" ಎಂಬ ಧ್ಯೇಯವಾಕ್ಯದೊಂದಿಗೆ ಹಮ್ಮಿಕೊಂಡ ಜಾಗೃತಿ ಜಾಥಾ ಉದ್ದೇಶಿಸಿ ಮಾತನಾಡಿದರು. 

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಶೇಗುಣಸಿ ವಿರಕ್ತ ಮಠದ ಡಾ. ಮಹಂತಪ್ರಭು ಮಹಾಸ್ವಾಮಿಗಳು, ಕರ್ನಾಟಕ ವೆಂದರೆ ಕೇವಲ ದಕ್ಷಿಣ ಕರ್ನಾಟಕ ಮಾತ್ರವಲ್ಲ ಉತ್ತರ ಕರ್ನಾಟಕವೂ ಇದರ ಅವಿಭಾಜ್ಯ ಅಂಗ. ರಾಜ್ಯದ ಹೊಸ ಯೋಜನೆಗಳು ದಕ್ಷಿಣ ಭಾಗದ ಅಭಿವೃದ್ಧಿಗೆ ಮಾತ್ರ ಸೀಮಿತವಾಗಬಾರದು. ಅವು ರಾಜ್ಯದ ಉತ್ತರ ಭಾಗಕ್ಕೂ ತಲುಪಬೇಕು ಎಂದರು. 

ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಆಡಿ ಹಂದಿಗುಂದ ವಿರಕ್ತ ಮಠದ ಶಿವಾನಂದ ಮಹಾಸ್ವಾಮಿಗಳು ಶಾಶ್ವತವಾಗಿ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿಯೇ ನಡೆಯಬೇಕು. ಉತ್ತರ ಕರ್ನಾಟಕ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪ್ರತಿವರ್ಷ ಕನಿಷ್ಟ 30,000 ಕೋಟಿ ಹಣ ಮೀಸಲಿಡಬೇಕು ಎಂದು ಆಗ್ರಹಿಸಿದರು. 

ಸಮಗ್ರ ಉತ್ತರ ಕರ್ನಾಟಕ ಅಭಿವೃದ್ಧಿಯಾಗಲಿ ಎಂಬ ಘೋಷಣೆಯೊಂದಿಗೆ ಹೊರಟ ಜಾಗೃತಿ ಜಾಥಾ ಲಿಂಗರಾಜ ಕಾಲೇಜು ಮೈದಾನದಿಂದ, ರಾಣಿ ಚೆನ್ನಮ್ಮ ಮಾರ್ಗದ ಮೂಲಕ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠ ತಲುಪಿತು. ಜಾಥಾದಲ್ಲಿ ಸಾವಿರಾರು ಮಕ್ಕಳು, ಜನಪ್ರತಿನಿಧಿಗಳು, ಸಮಾಜ ಸೇವಕರು ಸೇರಿದಂತೆ ಶರಣ ಶರಣೆಯರು ಪಾಲ್ಗೊಂಡಿದ್ದರು.