ಗೌರಿ ಹುಣ್ಣಿಮೆಗೆ ಗ್ರಾಮೀಣ ಹೆಂಗಳೆಯರಲ್ಲಿ ಸಂಭ್ರಮದ ಕಳೆ
Gouri Hunnime Celebration
ಶಿರಹಟ್ಟಿ 05 : ಮಳೆಗಾಲ ಮುಗಿದು ಚಳಿಗಾಲಕ್ಕೆ ನಾಂದಿ ಹಾಡುವ ಸಮಯದಲ್ಲೇ ಬರುವ ಗೌರಿ ಹುಣ್ಣಿಮೆ ಹಬ್ಬವು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸಂತಸದ ಸಂಭ್ರಮ ತರುತ್ತದೆ. ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಈ ಹಬ್ಬವು ಮಹಿಳೆಯರ ಆನಂದದ ಹಬ್ಬವಾಗಿ ಬೆಳೆದು ಬಂದಿದೆ.
“ಗೌರಿ ಗೌರಿ ಗಾಣಾ ಗೌರಿ ಮೇಣಾಧಾರಿ... ಅಣ್ಣನಂತ ಅವರಿಕೋಲ್... ತಮ್ಮನಂತ ತವರಿಕೋಲ್...” ಎನ್ನುವ ಹಾಡಿನ ಸೊಗಡು ಹಬ್ಬದ ರಂಗು ಹೆಚ್ಚಿಸುತ್ತಿದೆ. ಗೌರಿ ಹುಣ್ಣಿಮೆ ದಿನ ತಟ್ಟೆಯಲ್ಲಿ ಸಕ್ಕರೆ ಗೊಂಬೆಗಳು, ಹೊನ್ನಂಬರಿ ಹೂವು, ಹಣ್ಣಿ ಹೂ, ಕಣಕದ ಆರತಿ ಇಟ್ಟುಕೊಂಡು ಗೌರಮ್ಮನನ್ನು ಪ್ರತಿಷ್ಠಾಪಿಸಿದ ಮನೆಗೆ ಹೆಣ್ಣು ಮಕ್ಕಳು ಗುಂಪಾಗಿ ತೆರಳಿ ಆರತಿ ಬೆಳಗುವ ಸಂಪ್ರದಾಯ ಇಂದಿಗೂ ಕೆಲವು ಊರುಗಳಲ್ಲಿ ಮುಂದುವರಿದಿದೆ.
ಹೊಸ ಸೀರೆ ತೊಟ್ಟು ಗೆಳತಿಯರೊಂದಿಗೆ ಗೌರಮ್ಮನ ಮನೆಗೆ ತೆರಳಿ ಆರತಿ ಬೆಳಗುವುದು, ಹೊಸದಾಗಿ ನಿಶ್ಚಯವಾದ ವಧುಗಳು ಸಕ್ಕರೆ ಗೊಂಬೆ, ಸೀರೆ ಮತ್ತು ದಂಡಿಗಳನ್ನು ನೀಡಿ ಗೌರಿ ಪೂಜೆಯಲ್ಲಿ ಪಾಲ್ಗೊಳ್ಳುವುದು ಸಂಪ್ರದಾಯವಾಗಿದೆ. ಮನೆಯಲ್ಲಿ ಗೌರಮ್ಮನಿಗೆ ಆರತಿ ಎತ್ತಿದ ಬಳಿಕ ಕುಟುಂಬದ ಸದಸ್ಯರು, ನೆರೆಹೊರೆಯವರು ಹಾಗೂ ಬಂಧುಬಳಗಕ್ಕೂ ಆರತಿ ಬೆಳಗುವುದು ಸಂಪ್ರದಾಯದ ಭಾಗವಾಗಿದೆ.
ಸಕ್ಕರೆ ಗೊಂಬೆ ತಯಾರಿಕೆಯ ಸೊಗಸು
ಗೌರಿ ಹುಣ್ಣಿಮೆ ಎಂದರೆ ಸಕ್ಕರೆ ಗೊಂಬೆಗಳ ನೆನಪು ತಪ್ಪದೆ ಬರುತ್ತದೆ. ಲಕ್ಷ್ಮೀ, ಗಣೇಶ, ವೀರಭದ್ರ, ಬಸವಣ್ಣ, ಆನೆ, ಕುದುರೆ, ಒಂಟೆ, ತೇರು, ಅರ್ಜುನನ ಬಿಲ್ಲು ಹೀಗೆ ವಿವಿಧ ಆಕೃತಿಯ ಬಣ್ಣ ಬಣ್ಣದ ಗೊಂಬೆಗಳು ಮಾರುಕಟ್ಟೆಗಳಲ್ಲಿ ಕಂಗೊಳಿಸುತ್ತಿವೆ. ಒಂದು ಕೆಜಿ ಸಕ್ಕರೆ ಗೊಂಬೆಗಳಿಗೆ ರೂ.110ರಿಂದ ರೂ. 120ರ ದರ ನಿಗದಿಯಾಗಿದೆ.
ತಯಾರಕರು 10ಹಿ15 ದಿನಗಳ ಮೊದಲು ತಯಾರಿಕೆಯಲ್ಲಿ ತೊಡಗುತ್ತಾರೆ. ಸಕ್ಕರೆ, ನೀರು, ಹಾಲು, ನಿಂಬೆರಸ ಹಾಗೂ ಏಲಕ್ಕಿ ಮಿಶ್ರಣವನ್ನು ಹದ ಬರುವವರೆಗೆ ಕಾಯಿಸಿ, ನಂತರ ಮರದ ಅಚ್ಚುಗಳಲ್ಲಿ ಸುರಿದು ಗೊಂಬೆಗಳನ್ನು ಸಿದ್ಧಪಡಿಸಲಾಗುತ್ತದೆ. ಈ ಪ್ರಕ್ರಿಯೆ ಅನುಭವವಿಲ್ಲದೆ ಯಶಸ್ವಿಯಾಗುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.
ಒಂದು ಕ್ವಿಂಟಲ್ ಸಕ್ಕರೆಯಿಂದ 75 ಕೆಜಿಗೂ ಹೆಚ್ಚು ಗೊಂಬೆಗಳನ್ನು ತಯಾರಿಸಲಾಗುತ್ತದೆಯಾದರೂ, ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಈ ಬಾರಿ ಗೊಂಬೆಗಳ ದರದಲ್ಲೂ ಏರಿಕೆಯಾಗಿದೆ. ಆದರೆ ಸಂಪ್ರದಾಯ ಉಳಿಸುವ ಉತ್ಸಾಹದಿಂದ ತಯಾರಕರು ಕೆಲಸ ಮುಂದುವರಿಸಿದ್ದಾರೆ.
ಸಂಪ್ರದಾಯದ ಕಳೆ, ನೈಸರ್ಗಿಕ ಬಣ್ಣದ ಕಾಳಜಿ
ಹಬ್ಬದ ಉತ್ಸಾಹ ಹೆಚ್ಚಾದಂತೆ ಅಗ್ಗದ ಕೃತಕ ಬಣ್ಣದ ಗೊಂಬೆಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ. ತಜ್ಞರು ಹಾಗೂ ಹಿರಿಯರು ನೈಸರ್ಗಿಕ ಬಣ್ಣ ಬಳಸಿ ತಯಾರಿಸಲಾದ ಅಥವಾ ಬಿಳಿ ಸಕ್ಕರೆ ಗೊಂಬೆಗಳನ್ನು ಖರೀದಿಸಲು ಮಹಿಳೆಯರಿಗೆ ಕರೆ ನೀಡಿದ್ದಾರೆ. ಪರಿಸರ ಸ್ನೇಹಿ ಆಚರಣೆ ಮಾತ್ರವಲ್ಲ, ಪಾರಂಪರಿಕ ಸಂಪ್ರದಾಯದ ಶುದ್ಧತೆಯನ್ನು ಕಾಪಾಡುವುದೂ ಆಗುತ್ತದೆ ಎಂದು ಅವರು ಹೇಳಿದ್ದಾರೆ.
ಹಬ್ಬದ ಸೊಗಡಿನ ಹಾಡು
ಹುಣ್ಣಿಮೆ ಬೆಳದಿಂಗಳಿನಲ್ಲಿ ಊಟದ ನಂತರ ಓಣಿಯ ಮಹಿಳೆಯರು ಗುಂಪಾಗಿ ಸೇರಿ ಗೌರಿ ಹಾಡುಗಳನ್ನು ಹಾಡುವುದು, ಮಕ್ಕಳು ಆಟಗಳಲ್ಲಿ ತೊಡಗುವುದು ಹಳ್ಳಿಗಳ ಸಾಂಸ್ಕೃತಿಕ ಕಳೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಸಂಪ್ರದಾಯ ನಿಧಾನವಾಗಿ ಮರೆಯಾಗುತ್ತಿದರೂ, ಕೆಲವು ಗ್ರಾಮಗಳಲ್ಲಿ ಇನ್ನೂ ಗೌರಿ ಹುಣ್ಣಿಮೆಯ ಸಂಭ್ರಮ ಕಣ್ತುಂಬಿಕೊಳ್ಳಬಹುದು.
ಗೌರಿ ಹುಣ್ಣಿಮೆಯ ಸಂಭ್ರಮ ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ತೋರಿಸುವ ಹಬ್ಬವಾಗಿದ್ದು, ಸಂಪ್ರದಾಯ, ಭಕ್ತಿ ಮತ್ತು ಸಕ್ಕರೆ ಸಿಹಿಯ ಮೇಳವಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 