ಧಾರವಾಡ ಮಾರ್ಚ 20: ಧಾರವಾಡ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹಾಗೂ ಫಲಿತಾಂಶ ಸುಧಾರಣೆಗೆ ಪಣ ತೊಟ್ಟಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಿಷನ್ ವಿದ್ಯಾಕಾಶಿ ಮೂಲಕ ಜಿಲ್ಲೆಯ ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿದ್ದಾರೆ. ನಿರಂತರ ಹತ್ತು ತಿಂಗಳಿಂದ ಶಿಕ್ಷಕರು, ಪಾಲಕರು, ಸ್ಥಳೀಯ ಶಾಲಾ ಸಮಿತಿ, ಜನಪ್ರತಿನಿಧಿಗಳನ್ನು ಒಳಗೊಂಡು ಉತ್ತಮ ಶೈಕ್ಷಣಿಕ ವಾತಾವರಣ ರೂಪಿಸಿದ್ದಾರೆ.
ಜಿಲ್ಲೆಯ ಎಲ್ಲ ತಾಲೂಕಿಗೆ ಭೇಟಿ ನೀಡಿ, ಎಲ್ಲ ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ಮತ್ತು ಪಾಲಕರೊಂದಿಗೆ ಸಭೆ ಜರುಗಿಸಿ, ಸ್ವತಃ ತಮ್ಮ ಅನುಭವಗಳ ಮೂಲಕ ವಿದ್ಯಾರ್ಥಿಗಳಲ್ಲಿ ಪರೀಕ್ಷೆಗಳನ್ನು ಭಯವಿಲ್ಲದೆ ಹುರುಪು, ಹುಮ್ಮಸ್ಸಿನಿಂದ ಬರೆಯುವಂತೆ ಮಾಡಿದ್ದಾರೆ.
ಪರೀಕ್ಷೆಯ ಮುನ್ನಾದಿನ ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಯಾಗಿ ಸಂದೇಶದ ಶುಭಾಶಯ ಪತ್ರ ಕಳಿಸಿದ್ದಾರೆ.
ಇಂದು ಬೆಳಿಗ್ಗೆಯಿಂದ ವರ್ಗ ಶಿಕ್ಷಕರು, ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳಿಗೆ ಡಿಸಿ ಪತ್ರ ತಲುಪಿಸಲು ಕ್ರಮವಹಿಸಿದ್ದಾರೆ.
ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಸಿದ್ದತೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣಾಧಿಕಾರಿಗಳು ಸಹ ಕೆಲವು ವಿದ್ಯಾರ್ಥಿಗಳ ಮನೆಗೆ ತೆರಳಿ ಶುಭಾಶಯ ಪತ್ರ ತುಲುಪಿಸಿದ್ದಾರೆ.
ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಉತ್ಸಹ ಇಮ್ಮಡಿಗೊಳಿಸಲು ಕೊನೆಯ ಕ್ಷಣದವರೆಗೂ ಜಿಲ್ಲಾಧಿಕಾರಿಗಳು ಶ್ರಮಿಸುತ್ತಿದ್ದಾರೆ.
ನೂತನವಾಗಿ ಜಿಲ್ಲೆಗೆ ಆಗಮಿಸಿರುವ ಜಿಲ್ಲಾ ಪಂಚಾಯತ ಸಿಇಓ, ಯುವ ಉತ್ಸಾಹಿಗಳಾದ ಭುವನೇಶ ಪಾಟೀಲ ಅವರು ಡಿಸಿ ಅವರೊಂದಿಗೆ ಉತ್ತಮ ಸಮನ್ವಯದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಗಳ ಯಶಸ್ವಿಗೆ ತೊಡಗಿಸಿಕೊಂಡು, ನಿರಂತರ ಮೇಲುಸ್ತುವಾರಿ ಮಾಡುತ್ತಿದ್ದಾರೆ.