ಬೆಂಗಳೂರು, ಮಾ.20, ಗೋವಾ ಕನ್ನಡಿಗರ ಸಮಸ್ಯೆ ವಿಧಾನ ಪರಿಷತ್ ನಲ್ಲಿಂದು ಪ್ರತಿಧ್ವನಿಸಿತು. ಗೋವಾ ಕನ್ನಡಿಗರನ್ನು ರಕ್ಷಣೆ ಮಾಡುವಂತೆ ಪ್ರತಿಪಕ್ಷ ಸದಸ್ಯರು ಸದನದಲ್ಲಿ ಘೋಷಣೆ ಕೂಗಿ, ಸದನದ ಬಾವಿಗಿಳಿದು ಧರಣಿ ನಡೆಸಿದರು. ಸದನದಲ್ಲಿ ಗದ್ದಲ ಕೋಲಾಹಲ ಸೃಷ್ಟಿಯಾಗಿದ್ದರಿಂದ ಕಲಾಪವನ್ನು10 ನಿಮಿಷ ಮುಂದೂಡಿಕೆ ಮಾಡಲಾಯಿತು.
ವಿಧಾನ ಪರಿಷತ್ ಶೂನ್ಯವೇಳೆ ಕಲಾಪದಲ್ಲಿ ಗೋವಾದಲ್ಲಿ ಪೊಗೊ ಕಾಯಿದೆಯಿಂದ ಸಾವಿರಾರು ಕನ್ನಡಿಗರು ಆತಂಕದಲ್ಲಿ ಇದ್ದಾರೆ ಎಂದು ಬಸವರಾಜ ಹೊರಟ್ಟಿ ಪ್ರಸ್ತಾಪ ಮಾಡಿದರು.
ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಅವರು, ಈ ಸಂಬಂಧ ಗೋವಾಗೆ ಸಚಿವರ ನಿಯೋಗ ತೆರಳಬೇಕು, ಗೋವಾ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಪರಿಸ್ಥಿತಿಯ ಬಗ್ಗೆ ಅವರ ಗಮನಕ್ಕೆ ತರಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಖುದ್ದು ಸೋಮವಾರ ಸದನಕ್ಕೆ ಗೋವಾ ಕನ್ನಡಿಗರ ಪರಿಸ್ಥಿತಿಯ ಬಗ್ಗೆ ಉತ್ತರ ನೀಡಬೇಕು ಎಂದು ಆಗ್ರಹಪಡಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಸಿ.ಟಿ ರವಿ, ಯಾರೂ ಕೂಡ ಆತಂಕಪಡುವ ಅಗತ್ಯ ಇಲ್ಲ. ರಾಷ್ಟ್ರೀಯ ಹಿತಾಸಕ್ತಿಗೆ ತಕ್ಕಂತೆ ಕೆಲಸ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಬದ್ಧವಾಗಿವೆ. ಗೋವಾದಲ್ಲಿ ನಮ್ಮದೇ ಸರ್ಕಾರ ಇದ್ದರೂ ನಮ್ಮ ಪಕ್ಷದವರಲ್ಲದ ಕೆಲವರು ಮತ ವಿಭಜನೆ ಹಾಗೂ ರಾಜಕೀಯಕ್ಕೆ ಮಾತ್ರ ಪೊಗೊ ಅಸ್ತ್ರ ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಗೋವಾ ಸಿಎಂ ಪ್ರಮೋದ್ ಸಾವಂತ್ ಜತೆ ಈ ಬಗ್ಗೆ ಈಗಾಗಲೇ ಮಾತನಾಡಿದ್ದೇನೆ. ಅವಕಾಶ ಸಿಕ್ಕರೆ ಭೇಟಿ ಮಾಡುತ್ತೇನೆ ಎಂದರು.
ಸಚಿವರ ಉತ್ತರಕ್ಕೆ ಅಸಮಾಧಾನಗೊಂಡ ಪ್ರತಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ಗಂಭೀರ ವಿಚಾರವನ್ನು ಸರ್ಕಾರ ತೀರ ಹಗುರವಾಗಿ ತೆಗೆದುಕೊಂಡಂತೆ ಇದೆ ಎಂದು ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಕಿಡಿಕಾರಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು, ಸಚಿವರ ಉತ್ತರದಿಂದ ತೃಪ್ತರಾಗದೆ ಬಾವಿಗೆ ಇಳಿದ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು, ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಧರಣಿ ನಡೆಸಿದರು.ಗೋವಾ ಕನ್ನಡಿಗರನ್ನು ರಕ್ಷಣೆ ಮಾಡುವಂತೆ ಘೋಷಣೆ ಕೂಗಿದ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಆಡಳಿತ ಪಕ್ಷ ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಸದನದಲ್ಲಿ ತೀವ್ರ ಗದ್ದಲದ ಪರಿಸ್ಥಿತಿ ನಿರ್ಮಾಣವಾಯಿತು. ಸದನ ಸಹಜ ಸ್ಥಿತಿಗೆ ಬಾರದ ಹಿನ್ನೆಲೆಯಲ್ಲಿ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿಕೆ ಮಾಡಲಾಯಿತು.