ಕಂದಾಯ ಇಲಾಖೆಯ ಪ್ರಗತಿ ಪರೀಶೀಲನಾ ಸಭೆಯಲ್ಲಿ ಸಚಿವ ಕೃಷ್ಣ ಭೈರೇಗೌಡ ಸೂಚನೆ

Go to the villages and do the work of spreading the word

ಗ್ರಾಮಗಳಿಗೆ ತೆರಳಿ ಫೋಡಿ ಕಾರ್ಯ ಕೈಗೊಳ್ಳಿ 

ವಿಜಯಪುರ 13: ಸರ್ಕಾರದಿಂದ ಫೋಡಿ ಮುಕ್ತ ಅಭಿಯಾನವನ್ನು ಹಮ್ಮಿಕೊಂಡಿದ್ದು, ಜನರು ಬಂದು ಅರ್ಜಿ ಸಲ್ಲಿಸುವವರೆಗೆ ಕಾಯ್ದು ಕುಳಿತುಕೊಳ್ಳದೇ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಫೋಡಿ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಂದಾಯ ಖಾತೆ ಸಚಿವರಾದ ಕೃಷ್ಣ ಭೈರೇಗೌಡ ಅವರು ಸೂಚನೆ ನೀಡಿದರು.  

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಫೋಡಿಗೆ ಬಾಕಿ ಇರುವ ಪ್ರಕರಣಗಳನ್ನು ಖುದ್ದಾಗಿ ಗ್ರಾಮಗಳಿಗೆ ಭೇಟಿ ನೀಡಿ ಫೋಡಿಗೆ ಬಾಕಿ ಇರುವ  ಜಮೀನುಗಳ ಪರೀಶೀಲನೆ ನಡೆಸಬೇಕು. ಈ ಕಾರ್ಯವನ್ನು ಅಭಿಯಾನದ ಮಾದರಿಯಲ್ಲಿ ಕೈಗೊಳ್ಳಬೇಕು. ಒಂದೇ ಆರ್‌ಟಿಸಿಯಲ್ಲಿ ಹಲವು ಹೆಸರು ನಮೂದಾಗಿರುವ ಆರ್‌ಟಿಸಿಯನ್ನು ಸರ್ವೇ ನಡೆಸಿ, ನಕ್ಷೆ ತಯಾರಿಸಿ ಪ್ರತ್ಯೇಕವಾಗಿ ಆಯಾ ಜಮೀನಿನ ಮಾಲೀಕರ ಹೆಸರಿಗೆ  ಆರ್‌ಟಿಸಿ ಒದಗಿಸಲು ಕ್ರಮ ವಹಿಸಬೇಕು ಎಂದು ಅವರು ಸೂಚನೆ ನೀಡಿದರು.  

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭೂ ಸುರಕ್ಷಾ ಯೋಜನೆಯಡಿ ದಾಖಲೆಗಳನ್ನು ಗಣಕೀಕರಣ ಮಾಡುವ ಮೂಲಕ ಹಳೆಯ ದಾಖಲೆಗಳನ್ನು ಅತ್ಯಂತ ಸುಲಭವಾಗಿ ಜನರಿಗೆ ಒದಗಿಸಲು ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಕಂದಾಯ ಇಲಾಖೆಯಲ್ಲಿನ ಭೂಸುರಕ್ಷಾ ಯೋಜನೆಯಡಿ ಮೂಲ ಹಳೆಯ ದಾಖಲೆಗಳ ಗಣಕೀಕರಣ  ನಡೆಯುತ್ತಿದ್ದು, ರಾಜ್ಯದಾದ್ಯಂತೆ ಅಂದಾಜು 20 ಕೋಟಿ ಪುಟಗಳ ದಾಖಲೆಗಳ ಗಣಕೀಕರಣ ಕಾರ್ಯ ಮಾಡಲಾಗಿದೆ.  ಇನ್ನೂ ಬಾಕಿ ಇರುವ ದಾಖಲೆಗಳ ಗಣಕೀಕರಣವನ್ನು ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಹಳೆಯ ದಾಖಲೆಗಳ ಗಣಕೀಕರಣ ಕಾರ್ಯಕ್ಕೆ ತ್ವರಿತ ಗತಿ ನೀಡುವಂತೆ ಅವರು ಸೂಚನೆ ನೀಡಿದರು.   

ಸಭೆಯಲ್ಲಿ ಜಿಲ್ಲೆಯ ಎಲ್ಲ  ತಾಲೂಕಿನ ಭೂ ಸುರಕ್ಷಾ ಪ್ರಗತಿ ವಿವರ ಪಡೆದುಕೊಂಡ ಅವರು, ದಾಖಲೆಗಳನ್ನು ನಿಯಮಿತವಾಗಿ ಪರೀಶೀಲನೆ ನಡೆಸಿ, ಗಣಕೀಕರಣ ಮಾಡಬೇಕು. ಕಾಲಮಿತಿಯೊಳಗೆ ಗಣಕೀಕರಣ ಕಾರ್ಯ ಪೂರ್ಣಗೊಳಿಸಬೇಕು. ಈ ಕಾರ್ಯಕ್ಕೆ ವೇಗ ನೀಡಲು ತಮ್ಮ ಹಂತದಲ್ಲಿಯೇ ಸಿಬ್ಬಂದಿಗಳ ಹೊಂದಾಣಿಕೆ ಮಾಡಿಕೊಂಡು ಪ್ರಗತಿ ಸಾಧಿಸುವಂತೆ ಸೂಚಿಸಿದ ಅವರು,  ಗಣಕೀಕರಣ ಕಾರ್ಯದಿಂದ ಜನರಿಗೆ ಯಾವುದೇ ದಾಖಲೆಗಳನ್ನು ಸಮರ​‍್ಕವಾಗಿ ಒದಗಿಸಬಹುದಾಗಿದ್ದು,  ದಾಖಲೆಗಳು ಕಳೆದು ಹೋಗುವುದು, ನಾಶವಾಗುವುದು ಸೇರಿದಂತೆ ಇದಕ್ಕೆ ಶಾಶ್ವತ ಪರಿಹಾರ ದೊರೆತು ದಾಖಲೆಗಳನ್ನು ಸುಭದ್ರವಾಗಿ ಕಾಯ್ದಿಟ್ಟುಕೊಳ್ಳಬಹುದಾಗಿರುವುದರಿಂದ ಜನರಿಗೆ ಅವಶ್ಯಕವಿರುವ ದಾಖಲೆಗಳ ಅಧಿಕೃತ ಪ್ರತಿಯನ್ನು ಸಹ ಆನ್‌ಲೈನ್ ಮೂಲಕವೇ ಪಡೆಯಲು ಅನುಕೂಲವಾಗುವುದರಿಂದ ಅಧಿಕಾರಿಗಳು ಗಣಕೀಕರಣ ಕಾರ್ಯಕ್ಕೆ ಆದ್ಯತೆ ನೀಡುವಂತೆ ಅವರು ಸೂಚನೆ ನೀಡಿದರು.  

ಜಮೀನಿನ ಮಾಲೀಕ ಮರಣ ಹೊಂದಿದ್ದರೂ ಸಹ ಇದುವರೆಗೆ ವಾರಸುದಾರರ ಹೆಸರಿಗೆ ಜಮೀನು ಬದಲಾವಣೆಯಾಗದೇ ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿಯೇ ಹಲವು ಖಾತಾಗಳಿವೆ. ರಾಜ್ಯದಲ್ಲಿಯೇ ಇಂತಹ 52 ಲಕ್ಷ ಕೃಷಿ ಭೂಮಿ ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿಯೇ ಉಳಿದುಕೊಂಡಿದೆ. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳನ್ನು ಗುರುತಿಸಿ ಪೌತಿ ಖಾತೆ ಮಾಡಲು ಕ್ರಮ ವಹಿಸುವಂತೆ  ಅವರು ಸೂಚನೆ ನೀಡಿದರು.  

ತಾಂಡಾ ಸೇರಿದಂತೆ ದಾಖಲೆ ರಹಿತ ವಸತಿ ಪ್ರದೇಶಗಳನ್ನು ಅಧಿಕೃತ ಗ್ರಾಮಗಳನ್ನಾಗಿ ಘೋಷಣೆ ಮಾಡಲಾಗುತ್ತಿದ್ದು, ಯಾವುದೇ ನ್ಯೂನ್ಯತೆಗಳಿದ್ದಲ್ಲಿ ನಿವಾರಿಸಿಕೊಂಡು, ಕಂದಾಯ ಗ್ರಾಮಗಳನ್ನಾಗಿಸುವ ಪ್ರಕ್ರಿಯೆಯಲ್ಲಿ ಕೈಬಿಟ್ಟು ಹೋದ ಪ್ರದೇಶವನ್ನು ಕೈಗೆತ್ತಿಕೊಳ್ಳಬೇಕು. ಬಡ ಜನರಿಗೆ ಕಾಯಕಲ್ಪ ಒದಗಿಸುವ ಕಾರ್ಯ ಇದಾಗಿರುವುದರಿಂದ ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕಾರ್ಯನಿರ್ವಹಿಸಿ,  ಕಾನೂನು ತೊಡಕುಗಳನ್ನು ನಿಮ್ಮ ಹಂತದಲ್ಲಿಯೇ ನಿವಾರಿಸಿಕೊಂಡು ಇತ್ಯರ್ಥಪಡಿಸಲು ಕ್ರಮ ವಹಿಸಬೇಕು.  ಅಂತಿಮ ಅಧಿಸೂಚನೆ ಬಾಕಿ ಇರುವ ಪ್ರಕರಣಗಳನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳಬೇಕು. ಮಾರ್ಗಸೂಚಿಯನ್ವಯ  ಕಂದಾಯ ಗ್ರಾಮಗಳನ್ನಾಗಿಸಲು ನಿಯಮಗಳೊಂದಿಗೆ ಸರಿಹೊಂದಿಸಿಕೊಂಡು ಸರ್ಕಾರದ ನಿಯಮಗಳನುಸಾರ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.  

ಸಭೆಯಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ಕಂದಾಯ ಗ್ರಾಮಗಳ ರಚನೆ, ಕಂದಾಯ ಗ್ರಾಮಗಳ ಹಕ್ಕು ಪತ್ರಕ್ಕೆ ಸಂಬಂಧಿಸಿದ ಬಾಕಿ ಇರುವ ಪ್ರಕರಣಗಳ ಕುರಿತು ಪ್ರಗತಿ ಪರೀಶೀಲನೆ ನಡೆಸಿ, ಆಂದೋಲನದ ಮಾದರಿಯಲ್ಲಿ ಹಕ್ಕು ಪತ್ರ ತಯಾರಿಸಲಾಗುತ್ತಿದೆ,  ದಾಖಲೆ ರಹಿತ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಒಂದು ಲಕ್ಷ ಕುಟುಂಬಗಳ ಮನೆಗಳಿಗೆ ಮೇ.20 ರಂದು ಹೊಸಪೇಟೆಯಲ್ಲಿ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಾಕಿ ಇರುವ ಹಕ್ಕುಪತ್ರಗಳನ್ನು ಮುಂದಿನ 6 ತಿಂಗಳಲ್ಲಿ ವಿತರಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.  

ಸಭೆಯಲ್ಲಿ ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು, ವಿವಿಧ ತಾಲೂಕಾ ತಹಶೀಲ್ದಾರರು ಉಪಸ್ಥಿತರಿದ್ದರು.