ಲೋಕದರ್ಶನ ವರದಿ
ಮಗುವಿನ ಒಂದು ವರ್ಷದ ವಯಸ್ಸಿನೊಳಗೆ ತಪ್ಪದೇ ಎಲ್ಲಾ ಲಸಿಕೆ ಹಾಕಿಸಿ: ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು
ಬಳ್ಳಾರಿ 25: ಮಗುವಿನ ಜನನದ ನಂತರ 12 ಮಾರಕ ರೋಗಗಳ ತಡೆಗಟ್ಟಲು ಎಲ್ಲಾ ಲಸಿಕೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದ್ದು, ಪಾಲಕರು ತಪ್ಪದೇ ತಮ್ಮ ಮಕ್ಕಳಿಗೆ ಹಾಕಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು.
ಬಾಲಕ್ಷಯ ತಡೆಗಟ್ಟಲು ಬಿಸಿಜಿ, ಪೋಲಿಯೋ ರೋಗ ತಡೆಗಟ್ಟಲು ಪೋಲಿಯೋ ಹನಿ, ಕಾಮಾಲೆ ರೋಗ ತಡೆಗಟ್ಟಲು ಹೆಪಟೈಟೀಸ್ ಹಾಗೂ ನವಜಾತ ಶಿಶುವಿನ ದೇಹದ ಒಳಗಡೆ ಆಂತರಿಕ ರಕ್ತಸ್ರಾವ ಸಾಧ್ಯತೆಗಳನ್ನು ತಡೆಗಟ್ಟಲು ವಿಟಮಿನ್-ಕೆ ಚುಚ್ಚುಮದ್ದನ್ನು ಮೊದಲ ದಿನವೇ ನೀಡಲಾಗುತ್ತದೆ. ನಂತರ ವಯಸ್ಸಿಗೆ ಅನುಸಾರವಾಗಿ ಮಾರಕ ರೋಗಗಳನ್ನು ತಡೆಗಟ್ಟಲು ಒಂದು ವರ್ಷದೊಳಗಡೆ ಎಲ್ಲಾ ಲಸಿಕೆಗಳನ್ನು ಉಚಿತವಾಗಿ ಹಾಕಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಗುಗ್ಗರಹಟ್ಟಿ ಇವರ ಆಶ್ರಯದಲ್ಲಿ ನಗರದ ಬಂಡಿಮೋಟ್‌ನ ಬುಡ ಬುಡಿಕೆಯವರ ಓಣಿಯಲ್ಲಿ ವಿಶ್ವ ಲಸಿಕಾ ಸಪ್ತಾಹದ ಅಂಗವಾಗಿ ಲಸಿಕಾ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಅವರು ಮಾತನಾಡಿದರು.
ಈಗಾಗಲೇ ಪ್ರತಿ ಗುರುವಾರ ಎಲ್ಲಾ ಗ್ರಾಮ, ವಾರ್ಡ್‌ಗಳಲ್ಲಿ ಲಸಿಕೆ ಹಾಕಲಾಗುತ್ತಿದ್ದು, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ದಿನ ಲಸಿಕೆ ಹಾಕಲಾಗುತ್ತಿದೆ. ಮಗು ಲಸಿಕೆ ವಂಚಿತರಾಗಬಾರದೆಂಬ ಹಿನ್ನಲೆಯಲ್ಲಿ ಸರ್ಕಾರವು ಏಪ್ರಿಲ್, ಮೇ, ಜೂನ್ ಮೂರು ತಿಂಗಳುಗಳ ಕಾಲ ನಿಗಧಿತ ಅವಧಿಯಲ್ಲಿ ಲಸಿಕೆ ಪಡೆಯದ ಹಾಗೂ ಒಂದು ಲಸಿಕೆಯನ್ನು ಪಡೆಯದೇ ಇರುವ ಮಕ್ಕಳನ್ನು ಗುರ್ತಿಸಿ ಲಸಿಕೆ ಹಾಕುವ ಕಾರ್ಯ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಸರಿಯಾದ ಸಮಯದಲ್ಲಿ ಮಗುವಿನ ಒಂದುವರೆ ತಿಂಗಳು, ಎರಡುವರೆ ತಿಂಗಳು ಹಾಗೂ ಮೂರುವರೆ ತಿಂಗಳ ವಯಸ್ಸಿನಲ್ಲಿ ಕ್ರಮವಾಗಿ ಗಂಟಲು ಮಾರಿ, ನಾಯಿಕೆಮ್ಮು ಧನುರ್ವಾಯು ರೋಟ ವೈರಸ್, ಹೆಚ್ ಇನ್‌ಪ್ಲ್ಯುಯೆಂಜಾ, ಕಾಮಾಲೆಗಾಗಿ ಪೆಂಟಾವೈಲೆಂಟ್ ಲಸಿಕೆ, ರೋಟಾವೈರಸ್ ಅತಿಸಾರಬೇದಿ ಗೆ ನಿಮೋಕಾಕಲ್ ಲಸಿಕೆ ಹಾಕಲಾಗುವುದು. ಮಗುವಿನ ಒಂಬತ್ತು ತಿಂಗಳು ವಯಸ್ಸು ತುಂಬಿದ ನಂತರ ಮೆದುಳು ಜ್ವರ ರೋಗಕ್ಕೆ ಜಾಪನೀಸ್ ಎನ್ಸ್-್ಪಲಿಟಿಸ್ ಲಸಿಕೆ, ದಡಾರ ರೂಬೇಲ್ಲಾ ರೋಗಕ್ಕೆ ಮಿಸಲ್ಸ್ ರೂಬೆಲ್ಲಾ ಲಸಿಕೆ, ಹಾಗೂ ಸಂಜೆಯ ಹೊತ್ತು ಕಂಡುಬರುವ ಇರುಳುಗಣ್ಣು ರೋಗಕ್ಕೆ ವಿಟಾಮಿನ್-ಎ ಅನ್ನಾಂಗ ದ್ರಾವಣ, ನೀಡಲಾಗುತ್ತದ್ದು ತಪ್ಪದೇ ಹಾಕಿಸಲು ವಿನಂತಿಸಿದರು.
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಹನುಮಂತಪ್ಪ ಅವರು ಮಾತನಾಡಿ, ಲಸಿಕೆ ನೀಡುವಲ್ಲಿ ಸಾರ್ವಜನಿಕರ ಅಭಿಪ್ರಾಯಗಳನ್ನು ಮತ್ತು ಅನಿಸಿಕೆಗಳನ್ನು ಕ್ರೂಢೀಕರಿಸಿ ತಪ್ಪು ನಂಬಿಕೆಗಳ ಕುರಿತು ಜಾಗೃತಿ ನೀಡಲಾಗುತ್ತಿದೆ ಎಂದರು.
ಕೆಲವು ರೋಗಗಳಿಗೆ ಅಂದರೆ ಪೋಲಿಯೋ, ಗಂಟಲುಮಾರಿ, ನಾಯಿ ಕೆಮ್ಮು, ಧನುರ್ವಾಯು, ದಡಾರ-ರೂಬೆಲ್ಲಾ ಮೆದುಳು ಜ್ವರ, ಕ್ಕೆ 16 ರಿಂದ 23 ತಿಂಗಳು ಒಳಗೆ ಹೆಚ್ಚುವರಿಯಾಗಿ ಬೂಸ್ಟರ್ ಡೋಸ್ ರೂಪದಲ್ಲಿ ನೀಡಲಾಗುವುದು. 5 ರಿಂದ 6 ವರ್ಷದಲ್ಲಿ ಪುನಃ ಗಂಟಲುಮಾರಿ, ನಾಯಿ ಕೆಮ್ಮು, ಧನುರ್ವಾಯು, ರೋಗಿಗಳಿಗೆ ಎರಡನೇಯ ಬಾರಿ ಬೂಸ್ಟರ್ ಡೋಸ್ ನೀಡಲಾಗುವುದು. ಈ ಹಿನ್ನಲೆಯಲ್ಲಿ ಗಾಳಿಸುದ್ದಿ ನಂಬಿ ಲಸಿಕೆ ಬೇಡವೆನ್ನುವವರಿಗೆ ಮನೆ ಭೇಟಿ, ಗುಂಪು ಸಭೆ, ಸಮುದಾಯ ಮುಖಂಡರ ಮೂಲಕ ಮಾಹಿತಿ ಒದಗಿಸಿ ಅವರಲ್ಲಿಯ ತಪ್ಪು ನಂಬಿಕೆಗಳನ್ನು ಹೋಗಲಾಡಿಸಿ ಎಲ್ಲಾ ಲಸಿಕೆಗಳನ್ನು ಹಾಕಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ, ಡಾ.ಶಗುಪ್ತಾ ಶಾಹಿನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಹೆಚ್‌ಐಒ ನಿರಂಜನ್ ಪತ್ತಾರ್, ಆಶಾ, ರೇಷ್ಮಾ ಹಾಗೂ ಇತರರು ಉಪಸ್ಥಿತರಿದ್ದರು.