ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ: ಪಾಟೀಲ

ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ: ಪಾಟೀಲ Get a blood test done for any fever: Patil


ವಿಜಯಪುರ 25: ಮಲೇರಿಯಾ ರೋಗವು ಪ್ಲಾಸ್ಮೊಡಿಯಂ ಎಂಬ ಪರಾವಲಂಬಿ ಸೂಕ್ಷ್ಮಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗವೆಂದು ಹಡಗಲಿ ಗ್ರಾಮದ ಶಾರದಾ ಆದರ್ಶ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಮಸ್ತಾನ ಹಡಗಲಿ ತಿಳಿಸಿದರು.  

ಹಡಗಲಿ ಗ್ರಾಮದ ಶಾರದಾ ಆದರ್ಶ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿವಣಗಿ ಹಾಗೂ ಆಯುಷ್ಮಾನ್ ಆರೋಗ್ಯ ಕೇಂದ್ರ ಹಡಗಲಿಯ ಸಹಯೋಗದಲ್ಲಿ ನಡೆದ ವಿಶ್ವ ಮಲೇರಿಯಾ ದಿನವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಸೋಂಕು ಹೊಂದಿದ ಹೆಣ್ಣು ಅನಾಫೇಲಿಸ್ ಸೊಳ್ಳೆಗಳು ಮಲೇರಿಯಾ ರೋಗವನ್ನು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ. ಮಲೇರಿಯಾ ರೋಗವು ಸೊಳ್ಳೆಗಳಿಂದ ಹರಡುತ್ತದೆ ಎಂದು ಡಾಕ್ಟರ್ ರೋನಾಲ್ಡ್‌ ರಾಸ್ ಅವರು ಸಂಶೋಧನೆ ಮಾಡಿದರೆಂದರು.  

ಆರೋಗ್ಯ ನೀರೀಕ್ಷಣಾಧಿಕಾರಿ ಆರ್ ಎಸ್ ಪಾಟೀಲ್ ಮಾತನಾಡಿ  ಜ್ವರ, ಚಳಿ ತಲೆನೋವು, ಜೊತೆಗೆ ನಡುಕ, ವಾಂತಿ ಆಗುವದು ಮಲೇರಿಯಾ ರೋಗದ ಲಕ್ಷಣಗಳಾಗಿದ್ದು ಸಾರ್ವಜನಿಕರು ಯಾವುದೇ ಜ್ವರವಿರಲಿ ಸಮೀಪದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ,  ಅಥವಾ ತಾಲೂಕ ಆಸ್ಪತ್ರೆ ಜಿಲ್ಲಾ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು.

ರಕ್ತ ಪರೀಕ್ಷೆ ಮತ್ತು ಚಿಕಿತ್ಸೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಎಲ್ಲ ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲಿ ನೀರು ಸಂಗ್ರಹಿಸಿದ ಪರಿಕರಗಳ ಮೇಲೆ ಸರಿಯಾಗಿ ಭದ್ರವಾಗಿ ಮುಚ್ಚಬೇಕು. ಮನೆಯ ಸುತ್ತಮುತ್ತ ಎಲ್ಲಿಯೂ ನೀರು ನಿಲ್ಲದ ಹಾಗೆ ನೋಡಿಕೊಂಡು ಸ್ವಚ್ಚತೆ ಕಾಪಾಡಿಕೊಳ್ಳಬೇಕು. ರಾತ್ರಿ ಮಲಗುವಾಗ ಎಲ್ಲ ಸಾರ್ವಜನಿಕರು. ವಿಶೇಷವಾಗಿ ಗರ್ಭಿಣಿಯರು ವಯೋವೃದ್ಧರು ಚಿಕ್ಕ ಮಕ್ಕಳು ಸೊಳ್ಳೆ ಪರದೆಗಳನ್ನು ಬಳಕೆ ಮಾಡಿ, ಸೊಳ್ಳೆ ಕಡಿತದಿಂದ ರಕ್ಷಣೆ ಪಡೆಯಬೇಕೆಂದರು.  

 ಕಾರ್ಯಕ್ರಮದಲ್ಲಿ ಹಡಗಲಿ ವಿದ್ಯಾವರ್ಧಕ ಸಂಸ್ಥೆಯ ಗೌರವ ಅಧ್ಯಕ್ಷ ಚಾಂದಸಾಬ ಹಡಗಲಿ, ಮುಖ್ಯ ಗುರು ಮಾತೆಯರಾದ ಸಲ್ಮಾ ಹಡಗಲಿ, ಸಹ ಶಿಕ್ಷಕರಾದ ಮೈಬೂಬ್ ಬುಡ್ದೆಖಾನ್, ಸಂಗಮೇಶ್ ಅರಳಗುಂಡಗಿ, ನೀಲಮ್ಮ ಅರಳಗುಂಡಗಿ, ವಿಜಯಲಕ್ಷ್ಮಿ ನುಚ್ಚಿ  ಹಾಗೂ ಪ್ರಾಥಮಿಕ ಶಾಲೆಯ  ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.