ಮುಜಫರಾಬಾದ್, ಮೇ ೧೭, ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ದ ಪಾಕಿಸ್ಥಾನ ಕ್ರಿಕೆಟರ್ ಷಾಹಿದ್ ಆಫ್ರಿದಿ ತೀವ್ರ ರೀತಿಯ ಹೇಳಿಕೆ ನೀಡಿದ್ದಾರೆ.ಕೊರೊನಾ ವೈರಸ್ ಗಿಂತ ದೊಡ್ಡ ಸೋಂಕು ಮೋದಿ ಹೃದಯದಲ್ಲಿದೆ, ಮೋದಿ ಮನಸಿನಲ್ಲಿ ಧರ್ಮ ದ್ವೇಷ ಇದೆ, ಮೋದಿ ಧರ್ಮ ರಾಜಕೀಯ ಮಾಡುತ್ತಿದ್ದಾರೆ ಎಂದು ಆಫ್ರಿದಿ ಆರೋಪ ಮಾಡಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಆಫ್ರಿದಿ ಪ್ರತಿಷ್ಠಾನದ ಮೂಲಕ ಸಂಗ್ರಹಿಸಿದ ಸರಕು ಸಾಮಗ್ರಿಗಳನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸಂಕಷ್ಟದಲ್ಲಿರುವವರಿಗೆ ವಿತರಣೆ ಕಾರ್ಯಕ್ರಮದಲ್ಲಿ ಆಫ್ರಿದಿ ಈ ಹೇಳಿಕೆ ನೀಡಿದ್ದಾರೆ. ಅಲ್ಲದೆ ಕಾಶ್ಮೀರಿಗಳ ಮೇಲೆ ಮೋದಿ ಹತ್ಯಾ ದೌರ್ಜನ್ಯ ನಡೆಸುತ್ತಿದ್ದಾರೆಂದು ಆರೋಪಿಸಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಬೇಕು ಎಂದು ಆಫ್ರಿದಿ ಒತ್ತಾಯಿಸಿದ್ದಾರೆ. ಆಫ್ರಿದಿ ಭಾಷಣಕ್ಕೆ ಪಾಕಿಸ್ತಾನ ಸೈನಿಕರು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ
ಮತ್ತೊಂದು ಕಡೆ ಆಫ್ರಿದಿ ಹೇಳಿಕೆಗೆ ಬಿಜೆಪಿ ಸಂಸದ , ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಫ್ರಿದಿ, ಇಮ್ರಾನ್, ಬಾಜ್ವಾ ರಂತಹ ಜೋಕರ್ ಗಳು ಭಾರತ ಹಾಗೂ ಮೋದಿ ವಿರುದ್ದ ವಿಷ ಕಕ್ಕುತ್ತಿದ್ದಾರೆ ಎಂದು ಗಂಭೀರ್ ದೂರಿದ್ದಾರೆ.೭ ಲಕ್ಷ ಸೈನ್ಯ, ೨೦ ಕೋಟಿ ಜನಸಂಖ್ಯೆಹೊಂದಿರುವ ಪಾಕಿಸ್ತಾನ ೭೦ ವರ್ಷಗಳಿಂದ ಕಾಶ್ಮೀರ ಕ್ಕಾಗಿ ಬಿಕ್ಷೆ ಬೇಡುತ್ತಿದೆ.
೧೯೭೧ ರಲ್ಲಿ ನಡೆದ ಯುದ್ದದಲ್ಲಿ ಭಾರತೀಯ ಸೇನೆ ಪೂರ್ವ ಪಾಕಿಸ್ತಾನ ವಿರುದ್ದ ವಿಜಯ ಸಾಧಿಸಿ ಬಾಂಗ್ಲಾ ದೇಶ ಸೃಷ್ಟಿಗೆ ಕಾರಣವಾಯಿತು.ಅಂದಿನ ಯುದ್ದದಲ್ಲಿ ಲಕ್ಷ ಮಂದಿ ಪಾಕ್ ಸೈನಿಕರಿಗೆ ಭಾರತ ಕ್ಷಮಾಧಾನ ನೀಡಿತ್ತು. ಶರಣಾಗಿದ್ದ ಲಕ್ಷ ಮಂದಿ ಪಾಕ್ ಸೈನಿಕರನ್ನು ಕ್ಷಮಿಸಿ ಬಿಡುಗಡೆಗೊಳಿಸಿತ್ತು. ಬಾಂಗ್ಲಾ ದೇಶ ರಚನೆಯನ್ನು ಪಾಕಿಸ್ತಾನ ಅತ್ಯಂತ ಅಪಮಾನದ ಸೋಲು ಎಂದು ಭಾವಿಸಿಕೊಂಡಿದ್ದು, ಈ ವಿಷಯವನ್ನು ಗಂಭೀರ್ ತಮ್ಮ ಟ್ವೀಟ್ ಮೂಲಕ ಮತ್ತೆ ಆಫ್ರಿದಿಗೆ ಜ್ಞಾಪಿಸಿದ್ದಾರೆ.