ಸುರಭಿ ಫಿಲಂಸ್, ಓಂ ಸಾಯಿಪ್ರಕಾಶ್ ಕಾಂಬಿನೇಷನ್‌ನಲ್ಲಿ 'ಕಾಮನ್ ಮ್ಯಾನ್'

ಸುರಭಿ ಫಿಲಂಸ್, ಓಂ ಸಾಯಿಪ್ರಕಾಶ್ ಕಾಂಬಿನೇಷನ್‌ನಲ್ಲಿ 'ಕಾಮನ್ ಮ್ಯಾನ್'  Gauri Shankar is the lead, Sona Ladwa is the heroine.

ಲೋಕದರ್ಶನ ವರದಿ 

ಗೌರೀಶಂಕರ್ ನಾಯಕ, ಸೋನಾ ಲಾಡ್ವಾ ನಾಯಕಿ 

ಸುರಭಿ ಫಿಲಂಸ್ ಬ್ಯಾನರ್‌ನಲ್ಲಿ ಎನ್‌. ನರಸಿಂಹಮೂರ್ತಿ ಕಥೆ ಬರೆದು, 'ಕಾಮನ್ ಮ್ಯಾನ್' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಆ್ಯಕ್ಷನ್‌-ಕಟ್ ಹೇಳಿದ್ದಾರೆ. ಚಿತ್ರದ ನಾಯಕನಾಗಿ 'ಕೆರೆಬೇಟೆ' ಖ್ಯಾತಿಯ ಗೌರೀಶಂಕರ್, ನಾಯಕಿಯಾಗಿ ಸೋನಾ ಲಾಡ್ವಾ ಅಭಿನಯ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೈಟಲ್ ಹಾಗೂ ಫಸ್ಟ್‌ ಲುಕ್ ಲಾಂಚ್ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ನಿರ್ಮಾಪಕ ಎನ್‌. ನರಸಿಂಹಮೂರ್ತಿ ಮಾತನಾಡಿ, 'ನನಗೆ ಚಿಕ್ಕ ವಯಸಿನಿಂದಲೂ ರಂಗಭೂಮಿಯ ನಂಟಿದೆ. ಈ ಹಿಂದೆ 2 ಚಿತ್ರಗಳನ್ನು ನಿರ್ಮಾಣ ಮಾಡಿದ್ದೆ, ಅದರಿಂದ ಸಾಕಷ್ಟು ಪಾಠವನ್ನೂ ಕಲಿತೆ. ಇದು 3ನೇ ಚಿತ್ರ. ಇಂಥ ನಿರ್ದೇಶಕರ ಜತೆ ಎಷ್ಟು ಸಿನಿಮಾ ಬೇಕಾದ್ರೂ ಮಾಡಬಹುದು. ಮಾತಿನ ಭಾಗ 40 ದಿನ ಶೂಟಿಂಗ್ ಅಂದಿದ್ದರು. 32 ದಿನಕ್ಕೇ ಮುಗಿಸಿದರು. ಚಿತ್ರದಲ್ಲಿ ನಾನು ಒಬ್ಬ ಮುಖ್ಯಮಂತ್ರಿಯ ಪಾತ್ರ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಟೀಸರ್ ಆಡಿಯೋ ಟ್ರೇಲರ್ ಲಾಂಚ್ ಮಾಡುವುದಾಗಿ' ಹೇಳಿದರು. 

ನಂತರ ನಿರ್ದೇಶಕ ಸಾಯಿಪ್ರಕಾಶ್, 'ನನ್ನ ನಿರ್ದೇಶನದ 106ನೇ ಚಿತ್ರವಿದು. ಒಬ್ಬ ಕಾಮನ್ ಮ್ಯಾನ್ ರಾಜ್ಯದ ಸಿಎಂ ಆದರೆ ಏನು ಮಾಡಬಹುದು ಎಂದು ನಮ್ಮ ಚಿತ್ರದ ಮೂಲಕ ತೋರಿಸಿದ್ದೇವೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಆಸೆ ಇರುತ್ತೆ. ನಾಯಕ ಒಬ್ಬ ಲಾಯರ್, ಆತ ಅನೀರೀಕ್ಷಿತವಾಗಿ ರಾಜ್ಯದ ಸಿಎಂ ಆಗ್ತಾನೆ. ನಂತರ ಆತ ಏನೇನು ಮಾಡಬಹುದು, ಸಮಾಜದಲ್ಲಿ ಏನಾದರೂ ಸುಧಾರಣೆ ಮಾಡಲು ಸಾಧ್ಯವಾಯಿತಾ ಎಂಬುದನ್ನು ಕುತೂಹಲಕರವಾಗಿ ಹೇಳೋ ಪ್ರಯತ್ನ ಮಾಡಿದ್ದೇನೆ. ನಾಯಕನ ತಂದೆ ಒಬ್ಬ ಕಲಾವಿದ. ತನ್ನ ಮಗ ಲಾಯರ್ ಆಗಿ ಸಮಾಜಕ್ಕೆ ಏನಾದರೂ ಒಳ್ಳೆಯದು ಮಾಡಬೇಕು ಎನ್ನುವುದು ಆತನ ಆಸೆಯಾಗಿರುತ್ತೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದು ಅವಕಾಶ ಬರುತ್ತೆ. ಅದೇ ರೀತಿ ನಾಯಕನಿಗೂ ಅದು ಬಂದಾಗ ಅದನ್ನು ಆತ ಹೇಗೆ ಯುಟಲೈಸ್ ಮಾಡಿಕೊಳ್ತಾನೆ ಎಂಬುದನ್ನು ತೋರಿಸಲಾಗಿದೆ. ನಾನು ಕಥೆ ಕೇಳಿದ ಕೂಡಲೇ ಇದು 100ಅ ಓಪನಿಂಗ್ ತೆಗೆದುಕೊಳ್ಳುತ್ತದೆ ಎನಿಸಿತು. ನಾಯಕಿ ಸೋನಾ ಲಾಡ್ವಾ ಕೂಡ ಚೆನ್ನಾಗಿ ಆ್ಯಕ್ಟ್‌ ಮಾಡಿದ್ದಾರೆ. ಪಾತ್ರಕ್ಕೆ ಏನು ಬೇಕೋ ಅದಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ. ಬಾಂಬೆ ಮೂಲದ ಮತ್ತೊಬ್ಬ ನಟಿಯೂ ಚಿತ್ರದಲ್ಲಿದ್ದಾರೆ. ಇದು ಕಂಟೆಂಟ್ ಸಿನಿಮಾ, ಜಾತ್ರೆ ಸಿನಿಮಾ ಅಲ್ಲ, ಶೈಲೇಶ್ ತುಂಬಾ ಚೆನ್ನಾಗಿ ಡೈಲಾಗ್ ಬರೆದಿದ್ದಾರೆ' ಎಂದು ಮಾಹಿತಿ ನೀಡಿದರು. 

ಇದೇ ಸಂದರ್ಭದಲ್ಲಿ ಚಿತ್ರದ ನಾಯಕ ಗೌರಿಶಂಕರ್, 'ರಾಜಹಂಸ, ಕೆರೆಬೇಟೆ ನಂತರ ನನ್ನ ಅಭಿನಯದ ಮೂರನೇ ಚಿತ್ರವಿದು. ನಿರ್ದೇಶಕರು ಹಾಕಿಕೊಂಡ ಪ್ಲಾನ್ ಪ್ರಕಾರವೇ ಸಿನಿಮಾ ಮಾಡಿ ಮುಗಿಸಿದ್ದಾರೆ. ಕೆರೆಬೇಟೆ ನಂತರ ಒಂದೊಳ್ಳೆ ಕಥೆಗಾಗಿ ಕಾಯ್ತಿದ್ದೆ. ನನಗೆ ಕಾಲ್ ಬಂದಾಗ ಆಶ್ಚರ್ಯವಾಯ್ತು. ಬಯಸಿದಂಥ ಪಾತ್ರವೇ ಹುಡುಕಿಕೊಂಡು ಬಂದಿತ್ತು. ನಿರ್ದೇಶಕರು ನನ್ನಂಥ ಚಿಕ್ಕ ಕಲಾವಿದನಿಗೆ ಗಂಟೆಯವರೆಗೆ ತಾಳ್ಮೆಯಿಂದ ಕಥೆ ಹೇಳಿದರು. ಪಾತ್ರಗಳು, ದೃಶ್ಯಗಳನ್ನು ಆರಂಭದಿಂದ ಎಂಡ್ ವರೆಗೆ ನೀಟಾಗಿ ತೆಗೆದುಕೊಂಡು ಹೋಗಿದ್ದರು. ತುಂಬಾ ಶಿಸ್ತುಬದ್ದವಾಗಿ ಸಿನಿಮಾ ಮಾಡುತ್ತಾರೆ. ನಮಗೆಲ್ಲ ಅವರು ದೊಡ್ಡ ಪಾಠವಾಗಿದ್ದಾರೆ. ಯಾವ ಸಿನಿಮಾನೂ ಕಥೆಗಿಂತ ದೊಡ್ಡದಲ್ಲ ಎಂಬ ಅವರ ಮಾತು ಖಂಡಿತ ನಿಜ. ನನಗೂ ಅಡ್ವೊಕೇಟ್ ಆಗಬೇಕೆಂಬ ಆಸೆ ಇತ್ತು' ಎಂದು ಹೇಳಿದರು. ನಾಯಕಿ ಸೋನಾ ಲಾಡ್ವಾ 'ಇದೇ ನಿರ್ಮಾಪಕರ ಜತೆ 2 ಸಿನಿಮಾ ಮಾಡಿದ್ದೆ. ಇದು ಮೂರನೇ ಚಿತ್ರ' ಎಂದರು. ಉಳಿದಂತೆ ವೇದಿಕೆಯಲ್ಲಿ ಛಾಯಾಗ್ರಾಹಕ ಜೆ.ಜಿ.ಕೃಷ್ಣ, ಸಂಗೀತ ನಿರ್ದೇಶಕ ವಿನಯಚಂದ್ರ ತಮ್ಮ ಅನುಭವ ಹಂಚಿಕೊಂಡರು.