ಗಣೇಶೋತ್ಸವ: ಶಾಂತಿ ಪಾಲನೆಗೆ ಪೊಲೀಸ್ ಇಲಾಖೆ ಸೂಚನೆ

ಗಣೇಶೋತ್ಸವ: ಶಾಂತಿ ಪಾಲನೆಗೆ ಪೊಲೀಸ್ ಇಲಾಖೆ ಸೂಚನೆ  Ganeshotsav: Police department issues instructions to maintain peace

ತಾಳಿಕೋಟಿ, ಆ.30: ಸೆಪ್ಟೆಂಬರ್ 14ರಿಂದ ಆರಂಭವಾಗಲಿರುವ ಗಣೇಶೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶನಿವಾರ ಶಾಂತಿ ಪಾಲನಾ ಸಭೆ ನಡೆಯಿತು.  

ಸಭೆಯ ಅಧ್ಯಕ್ಷತೆ ವಹಿಸಿದ್ದ ಪಿಎಸ್‌ಐ ಜ್ಯೋತಿ ಖೋತ ಮಾತನಾಡಿ, ಗಣೇಶ ಚತುರ್ಥಿಯನ್ನು ಪಟ್ಟಣದಲ್ಲಿ ಪರಸ್ಪರ ಪ್ರೀತಿ, ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು. ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ನೋಡಿಕೊಳ್ಳಬೇಕು. ಹಬ್ಬದ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.  

ಗಣೇಶೋತ್ಸವ ಆಚರಣೆಗೆ ಪೊಲೀಸ್ ಇಲಾಖೆ ಹಲವು ಮಾರ್ಗಸೂಚಿಗಳನ್ನು ನೀಡಿದ್ದು, ಗಣೇಶ ಪ್ರತಿಷ್ಠಾಪನಾ ಮಂಡಳಿಗಳು ಕಡ್ಡಾಯವಾಗಿ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಸಿಸಿ ಕ್ಯಾಮೆರಾ ಅಳವಡಿಸದಿದ್ದಲ್ಲಿ ಅನುಮತಿ ನೀಡಲಾಗುವುದಿಲ್ಲ ಎಂದು ಸೂಚಿಸಿದರು.  

ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ಯಾವುದೇ ರೀತಿಯ ಗೊಂದಲಕ್ಕೆ ಅವಕಾಶವಾಗದಂತೆ ವೇದಿಕೆ ನಿರ್ಮಿಸಬೇಕು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಪ್ರತಿಷ್ಠಾಪನಾ ಸ್ಥಳದ ಸುತ್ತಮುತ್ತ ಯಾವುದೇ ಅಹಿತಕರ ಚಟುವಟಿಕೆಗಳು ನಡೆಯದಂತೆ ನಿಗಾ ವಹಿಸಿ, ಸ್ಥಳದ ಪಾವಿತ್ರ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.  

ಈ ಕುರಿತು ಅಗತ್ಯವಿದ್ದಲ್ಲಿ ಪ್ರತಿಷ್ಠಾಪನಾ ಮಂಡಳಿಗಳ ಮುಖಂಡರೊಂದಿಗೆ ಇನ್ನೂ ಒಂದೆರಡು ಸಭೆಗಳನ್ನು ನಡೆಸಲಾಗುವುದು. ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.  

ಸಭೆಯಲ್ಲಿ ಪಟ್ಟಣದ ಪ್ರಮುಖರಾದ ಎಂ.ಜಿ. ಪಾಟೀಲ, ಸಿದ್ದನಗೌಡ ಪಾಟೀಲ ನಾವದಗಿ, ಸಂಭಾಜಿರಾವ್ ವಾಡ್ಕರ್, ಬಸನಗೌಡ ಮಾಲಿಪಾಟೀಲ, ರಾಘವೇಂದ್ರ ವಿಜಾಪುರ, ನಾಗರಾಜ ಬಳ್ಳಿಗಾರ, ಸಿಎಸ್ಭಂಗಿ, ಬಿ.ಜಿ. ಬಲಕಲ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ಗಣೇಶ ಪ್ರತಿಷ್ಠಾಪನಾ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.