ಗಗನಯಾನ ವಿಳಂಬವನ್ನು ತಾಳ್ಮೆಯಿಂದ ಸ್ವೀಕರಿಸಬೇಕು: ಗಗನಯಾತ್ರಿ ಅಂಗದ್ ಪ್ರತಾಪ್
Gaganyaan Delay Must Be Taken With a Pinch of Salt, Mission Success More Important: Astronaut Angad
**ಬೆಂಗಳೂರು, ಸೆ. 9:** ನಿಗದಿತ ಗಡುವನ್ನು ತಲುಪುವ ಉದ್ದೇಶದಿಂದ ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನ ಯೋಜನೆಯಾದ ಗಗನಯಾನವನ್ನು ಆತುರದಲ್ಲಿ ಕೈಗೊಳ್ಳಬಾರದು. ಯೋಜನೆಯ ಯಶಸ್ಸು ಮತ್ತು ಸುರಕ್ಷತೆಯೇ ಮುಖ್ಯವಾಗಬೇಕು ಎಂದು ಗಗನಯಾತ್ರಿ-ನಾಮನಿರ್ದೇಶಿತ ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್ ಬುಧವಾರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ 9ನೇ ಬೆಂಗಳೂರು ಸ್ಪೇಸ್ ಎಕ್ಸ್‌ಪೋ 2026ರ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಲತಃ 2024ರಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದ್ದ ಗಗನಯಾನ ವಿಳಂಬವಾಗಿರುವುದನ್ನು ಒಪ್ಪಿಕೊಂಡರು. ಆದರೆ, ಮಾನವ ಸಹಿತ ಬಾಹ್ಯಾಕಾಶ ಯಾನದಂತಹ ಪ್ರವರ್ತಕ ಯೋಜನೆಗಳಲ್ಲಿ ಇಂತಹ ವಿಳಂಬಗಳು ಸಹಜ ಎಂದು ಹೇಳಿದರು.
“ಗಗನಯಾನ 2024ರಲ್ಲಿ ನಡೆಯಬೇಕಿತ್ತು. ಆದರೆ ಸಮಯ ಕಳೆಯುತ್ತಿದೆ. ಗಗನಯಾತ್ರಿಯಾಗಿ ಮೂಲಮಾದರಿ ಯೋಜನೆಗಳಲ್ಲಿ ವಿಳಂಬವಾಗುವುದು ಸಹಜ ಎಂಬ ವಾಸ್ತವವನ್ನು ಒಪ್ಪಿಕೊಳ್ಳಬೇಕು,” ಎಂದು ಅವರು ಹೇಳಿದರು.
ಈಗಾಗಲೇ ಸಿದ್ಧವಾಗಿರುವ ಬಾಹ್ಯಾಕಾಶ ನೌಕೆ, ರಾಕೆಟ್ ಮತ್ತು ಖಚಿತ ಉಡಾವಣಾ ವೇಳಾಪಟ್ಟಿಯನ್ನು ಹೊಂದಿರುವ ಮಾನವ ಸಹಿತ ಬಾಹ್ಯಾಕಾಶ ಯಾನ ಕಾರ್ಯಕ್ರಮಗಳೊಂದಿಗೆ ಗಗನಯಾನವನ್ನು ಹೋಲಿಕೆ ಮಾಡಲಾಗದು ಎಂದು ಪ್ರತಾಪ್ ಹೇಳಿದರು.
“ವಾಹನ ಸಿದ್ಧವಾಗಿದೆ, ರಾಕೆಟ್ ಸಿದ್ಧವಾಗಿದೆ, ನೀವು ಬಂದು ಒಂದು ದಿನಾಂಕದಲ್ಲಿ ಹಾರಾಟ ನಡೆಸುವಂತಹ ಕಾರ್ಯಕ್ರಮಕ್ಕೆ ನಾವು ಗಗನಯಾತ್ರಿಗಳಾಗಿ ಸೇರಿಲ್ಲ. ನಾವು ಕೇವಲ ಹಾರಾಟಕ್ಕಾಗಿ ಮಾತ್ರವಲ್ಲ, ನಮ್ಮಿಂದ ಸಾಧ್ಯವಾದಷ್ಟು ಕೊಡುಗೆ ನೀಡುವ ಮೂಲಕ ಇಡೀ ಕಾರ್ಯಕ್ರಮವನ್ನು ನಿರ್ಮಿಸುವ ಮೂಲಮಾದರಿ ಯೋಜನೆಗೆ ಸೇರಿದ್ದೇವೆ,” ಎಂದು ಅವರು ಹೇಳಿದರು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೇಂದ್ರ ಕಚೇರಿ ನಿಗದಿಪಡಿಸಿರುವ ವೇಳಾಪಟ್ಟಿಯಂತೆ ಗಗನಯಾತ್ರಿಗಳು ತರಬೇತಿ ಮತ್ತು ಸಿದ್ಧತೆ ಮುಂದುವರಿಸುತ್ತಿದ್ದಾರೆ. ಇದರ ಜತೆಗೆ ನೆಲಮಟ್ಟದಲ್ಲಿ ನಡೆಯುತ್ತಿರುವ ಯೋಜನೆಯ ಅಭಿವೃದ್ಧಿ ಕಾರ್ಯಗಳಲ್ಲೂ ಅವರು ತೊಡಗಿಸಿಕೊಂಡಿದ್ದಾರೆ ಎಂದು ಪ್ರತಾಪ್ ತಿಳಿಸಿದರು.
“ಇದು ಕೇವಲ ಹಾರಾಟದ ವಿಷಯವಲ್ಲ. ನೆಲಮಟ್ಟದಲ್ಲಿ ಸಾಕಷ್ಟು ಕೆಲಸ ನಡೆಯುತ್ತದೆ. ಕೆಲವು ತಿಂಗಳು ಅಥವಾ ಒಂದು-ಎರಡು ವರ್ಷ ವಿಳಂಬವಾಗಬಹುದು. ಆದರೆ ಅದು ನಡೆದಾಗ ಯಶಸ್ವಿಯಾಗಬೇಕು,” ಎಂದು ಅವರು ಹೇಳಿದರು.
ಯೋಜನೆಯ ವಿಶ್ವಾಸಾರ್ಹತೆಗೆ ಧಕ್ಕೆಯಾಗುವ ರೀತಿಯಲ್ಲಿ ಆತುರಪಡಿಸುವ ಬದಲು ತಾಳ್ಮೆಯಿಂದ ಕಾಯಬೇಕು ಎಂದು ಅವರು ಸಲಹೆ ನೀಡಿದರು.
“ಆರಂಭದಲ್ಲೇ ವಿಫಲವಾಗುವುದನ್ನು ನೀವು ಬಯಸುವುದಿಲ್ಲ. ಹಾಗಾದರೆ ಕಾರ್ಯಕ್ರಮವೇ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಅದು ಸಂಭವಿಸಬಾರದು,” ಎಂದರು.
“ದೇಶದ ಅತ್ಯುತ್ತಮ ಪ್ರತಿಭೆಗಳು ಈ ಯೋಜನೆಯ ಜವಾಬ್ದಾರಿ ಹೊತ್ತಿದ್ದಾರೆ. ಅವರ ಮೇಲೆ ವಿಶ್ವಾಸವಿಡೋಣ. ತಾಳ್ಮೆಯಿಂದ ಇರೋಣ. ಯೋಜನೆಯು ತನ್ನದೇ ವೇಗದಲ್ಲಿ ನಡೆಯಲು ಅವಕಾಶ ನೀಡೋಣ,” ಎಂದು ಪ್ರತಾಪ್ ಹೇಳಿದರು.
ಭಾರತದ ಮಾನವ ಸಹಿತ ಬಾಹ್ಯಾಕಾಶ ಯಾನ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಗಗನಯಾತ್ರಿಗಳ ಪಾತ್ರದ ಬಗ್ಗೆಯೂ ಪ್ರತಾಪ್ ವಿವರಿಸಿದರು. ಪ್ರಾಯೋಗಿಕ ಪರೀಕ್ಷಾ ಪೈಲಟ್ ಆಗಿರುವ ಅವರು, ಮಾನವ–ಯಂತ್ರ ಸಂಪರ್ಕ ವ್ಯವಸ್ಥೆ, ಕಾರ್ಯಾಚರಣಾ ಅಗತ್ಯತೆಗಳು ಹಾಗೂ ಬಾಹ್ಯಾಕಾಶ ನೌಕೆಯ ಮುಂಭಾಗದ ವಿನ್ಯಾಸದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ತಾವು ಭಾಗಿಯಾಗಿರುವುದಾಗಿ ಹೇಳಿದರು.
“ನಾನು ಸಂಪೂರ್ಣ ಕಾಕ್‌ಪಿಟ್ ವಿನ್ಯಾಸ ಮಾಡುವುದಿಲ್ಲ. ಆದರೆ ಮುಂಭಾಗದ ವಿನ್ಯಾಸದ ಪ್ರಕ್ರಿಯೆಯ ಭಾಗವಾಗಿದ್ದೇನೆ,” ಎಂದು ಅವರು ಹೇಳಿದರು.
ಮಾನಯಾನ ಮತ್ತು ಕಾರ್ಯಾಚರಣೆಯ ತಮ್ಮ ಅನುಭವವನ್ನು ವಿನ್ಯಾಸಕಾರರೊಂದಿಗೆ ಹಂಚಿಕೊಳ್ಳುವ ಮೂಲಕ ಬಾಹ್ಯಾಕಾಶ ನೌಕೆಯ ವ್ಯವಸ್ಥೆಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ನಿರ್ಧರಿಸುವಲ್ಲಿ ಗಗನಯಾತ್ರಿಗಳು ಸಹಕರಿಸುತ್ತಾರೆ. ಇದೇ ವೇಳೆ ಯಂತ್ರಾಂಶದ ವಾಸ್ತವಿಕತೆಯನ್ನೂ ಪರಿಗಣಿಸಲಾಗುತ್ತದೆ ಎಂದು ಅವರು ತಿಳಿಸಿದರು.
“ಇದು ಅತ್ಯಂತ ಹೊಸ ಪರಿಕಲ್ಪನೆ. ಇದನ್ನು ನಾನೇ ವಿನ್ಯಾಸ ಮಾಡಿದ್ದೇನೆ ಎಂದು ಯಾವುದೇ ಒಬ್ಬ ವ್ಯಕ್ತಿ ಹೇಳಿಕೊಳ್ಳಲು ಸಾಧ್ಯವಿಲ್ಲ,” ಎಂದು ಪ್ರತಾಪ್ ಹೇಳಿದರು.
ಗಗನಯಾತ್ರಿಗಳ ತಂಡವನ್ನು ವಿಸ್ತರಿಸುವ ಕುರಿತು ಮಾತನಾಡಿದ ಅವರು, ಇನ್ನೂ ಆರು ಪರೀಕ್ಷಾ ಪೈಲಟ್‌ಗಳು ಮತ್ತು ವಿಮಾನಯಾನೇತರ ಹಿನ್ನೆಲೆಯ ನಾಲ್ವರು ವೃತ್ತಿಪರರನ್ನು ಆಯ್ಕೆ ಮಾಡುವ ಯೋಜನೆ ಕುರಿತ ವರದಿಗಳು ಭಾರತದ ಮಾನವ ಸಹಿತ ಬಾಹ್ಯಾಕಾಶ ಯಾನ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸುವ ಪ್ರಯತ್ನದ ಭಾಗವಾಗಿವೆ ಎಂದು ಹೇಳಿದರು.
ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವುದು ಆರಂಭಿಕ ಹಂತ ಮಾತ್ರ. ಆಯ್ಕೆಯಾದ ಅಭ್ಯರ್ಥಿಗಳು ಬಳಿಕ ವಿಮಾನಯಾನ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿಯೂ ಜ್ಞಾನ ಸಂಪಾದಿಸಬೇಕಾಗುತ್ತದೆ ಎಂದು ಅವರು ಹೇಳಿದರು.
“ಒಂದು ವಿಷಯದಲ್ಲಿ ಪರಿಣಿತರಾಗಿರುವುದರಿಂದ ಮಾತ್ರ ನೀವು ಗಗನಯಾತ್ರಿಯಾಗಲು ಸಾಧ್ಯವಿಲ್ಲ,” ಎಂದು ಪ್ರತಾಪ್ ಹೇಳಿದರು.
ಗಗನಯಾತ್ರಿಯು ಹಾರಾಟ ನಡೆಸುವುದರ ಜೊತೆಗೆ ಬಾಹ್ಯಾಕಾಶ ನೌಕೆಯ ವ್ಯವಸ್ಥೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ನಿರ್ವಹಿಸುವ ಸಾಮರ್ಥ್ಯ ಹೊಂದಿರಬೇಕು. ವೈಜ್ಞಾನಿಕ ಹಾಗೂ ಎಂಜಿನಿಯರಿಂಗ್ ಕಾರ್ಯಗಳಲ್ಲಿ ಕೊಡುಗೆ ನೀಡುವುದರ ಜತೆಗೆ ತನ್ನ ಆರೋಗ್ಯ ಮತ್ತು ಸಹ ಗಗನಯಾತ್ರಿಗಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವ ಸಾಮರ್ಥ್ಯ ಹೊಂದಿರಬೇಕು ಎಂದು ಅವರು ವಿವರಿಸಿದರು.
ಏರೋ ಇಂಡಿಯಾ 2027ರಲ್ಲಿ ತಮ್ಮ ಭಾಗವಹಿಸುವಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಾಪ್, ಅದು ಸದ್ಯ ತಮ್ಮ ತರಬೇತಿ ಅಥವಾ ಜವಾಬ್ದಾರಿಯ ವ್ಯಾಪ್ತಿಯಲ್ಲಿ ಇಲ್ಲ. ತಮ್ಮ ಆದ್ಯತೆಯಾಗಿ ಇತರ ಜವಾಬ್ದಾರಿಗಳಿವೆ ಎಂದು ಹೇಳಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 