ಕರ್ನಾಟಕದ ಸಾಂಸ್ಕೃತಿಕ ಅಧ್ಯಯನಕ್ಕೆ ಗದುಗಿನ ಕೊಡುಗೆ ಅಪಾರ

ಕರ್ನಾಟಕದ ಸಾಂಸ್ಕೃತಿಕ ಅಧ್ಯಯನಕ್ಕೆ ಗದುಗಿನ ಕೊಡುಗೆ ಅಪಾರ Gadaga's contribution to the cultural studies of Karnataka is immense.

ಲೋಕದರ್ಶನ ವರದಿ 

ಗದಗ 18: ಕರ್ನಾಟಕದ ಚರಿತ್ರೆ ಮತ್ತು ಸಾಂಸ್ಕೃತಿಕ ಇತಿಹಾಸದ ಆಯಾಮಗಳ ಪುನಾರಚನೆಯಲ್ಲಿ ಗದಗ ಜಿಲ್ಲೆಯ ಪ್ರಾಚ್ಯಾವಶೇಷಗಳು, ದೇವಾಲಯಗಳು, ಬಸದಿಗಳು, ಮಸೀದಿಗಳು, ಈದ್ಗಾಗಳು, ದರ್ಗಾಗಳು, ಮಠಗಳು, ಚರ್ಚುಗಳು, ಜೈನ, ಶೈವ, ವೈಷ್ಣವ, ಬೌದ್ಧ ಶಿಲ್ಪಗಳು, ಶಾಸನಗಳು, ವೀರಗಲ್ಲುಗಳು, ಮಹಾಸತಿಗಲ್ಲುಗಳು, ನಿಷಿಧಿಗಲ್ಲುಗಳು, ಕೋಟೆಗಳು, ವಾಡೆಗಳು, ಬಾವಿಗಳು, ಕೆರೆಗಳು ಮುಂತಾದ ಧಾರ್ಮಿಕ ಮತ್ತು ಲೌಕಿಕ ಪುರಾತತ್ವ ಅವಶೇಷಗಳ ಪಾತ್ರ ಅಪಾರವಾಗಿದೆ ಎಂದು ಪ್ರವಾಸಿ ಮಾರ್ಗದರ್ಶಿ ಅ.ದ. ಕಟ್ಟಿಮನಿ ಹೇಳಿದರು.  

ಅವರು ಹುಲಕೋಟಿಯ ಕೆ.ಎಚ್‌. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ‘ಗದಗ ನಗರದ ದೇವಾಲಯಗಳು ಮತ್ತು ಶಿಲ್ಪಗಳು’ ವಿಷಯದ ಅಧ್ಯಯನಕ್ಕಾಗಿ ಕೈಗೊಂಡಿದ್ದ ಕ್ಷೇತ್ರಕಾರ್ಯದಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿನ ಶಾಸನಗಳಾದಿ ಶಿಲ್ಪಗಳ ಐತಿಹಾಸಿಕ ಮಹತ್ವದ ಕುರಿತು ಮಾರ್ಗದರ್ಶನ ಮಾಡುತ್ತ, ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ವಾಸನ ಗ್ರಾಮದಲ್ಲಿ ದೊರೆತಿರುವ ಶಾತವಾಹನರ ಕಾಲಾವಧಿಯ ಬ್ರಾಹ್ಮಿ ಲಿಪಿ ಮತ್ತು ಪ್ರಾಕೃತ ಭಾಷೆಯ ಶಾಸನ ಸೇರಿದಂತೆ ವಸಾಹತುಶಾಹಿ ಕಾಲದವರೆಗಿನ ಪುರಾತತ್ವ ದಾಖಲೆಗಳು ಕರ್ನಾಟಕದ ಪ್ರಾದೇಶಿಕ ಸಾಂಸ್ಕೃತಿಕ ಅಧ್ಯಯನಕ್ಕೆ ಅಮೂಲ್ಯವಾದ ಆಕರಗಳಾಗಿವೆಂದು ಹೇಳಿದರು. 

ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಅಪ್ಪಣ್ಣ ಹಂಜೆ ಅವರು ವೀರನಾರಾಯಣ, ಸೋಮೇಶ್ವರ, ತ್ರಿಕೂಟೇಶ್ವರ, ಸರಸ್ವತಿ ದೇವಾಲಯಗಳು ಮತ್ತು ಜುಮ್ಮಾ, ನೂರಾನಿ ಮಸೀದಿಗಳ ವಾಸ್ತುಕಲೆ ಮತ್ತು ಜೈನ, ಶೈವ, ವೈಷ್ಣವ, ಬೌದ್ಧ ಶಿಲ್ಪಗಳ ಪ್ರತಿಮಾ ಲಕ್ಷಣಗಳನ್ನು ಪರಿಚಯಿಸುತ್ತ, ಆಯಾ ಧರ್ಮದ ಸ್ಮಾರಕಗಳು ಮತ್ತು ಶಿಲ್ಪಗಳನ್ನು ಆಯಾ ಧರ್ಮದ ತತ್ವ-ಸಿದ್ಧಾಂತಗಳು, ಆಚಾರ-ವಿಚಾರಗಳು, ನಂಬುಗೆ-ಸಂಪ್ರದಾಯಗಳ ಹಿನ್ನೆಲೆಯಲ್ಲಿ ಅರ್ಥೈಸಿಕೊಂಡಾಗ ಮಾತ್ರ ಇವುಗಳ ಮಹತ್ವ-ಹಿರಿಮೆ ಹಾಗೂ ಸಮಕಾಲೀನ ಸಂಸ್ಕೃತಿ, ಜೀವನ ಮೌಲ್ಯಗಳನ್ನು ಮನದಟ್ಟು ಮಾಡಿಕೊಳ್ಳಲು ಸಾಧ್ಯವೆಂದು ಹೇಳಿದರು.  

ಇತಿಹಾಸ ಪ್ರಾಧ್ಯಾಪಕ ಬಸವಂತಪ್ಪ ದೊಡ್ಡಮನಿ ಅವರು ವಿದ್ಯಾರ್ಥಿ ಬದುಕಿನಲ್ಲಿ ವರ್ಗಕೊಠಡಿ, ಗ್ರಂಥಾಲಯ, ಕ್ಷೇತ್ರಕಾರ್ಯ ಇವು ಜ್ಞಾನ ಸಂಪಾದನೆಗೆ ಅತ್ಯಮೂಲ್ಯವಾಗಿದ್ದು, ಕ್ಷೇತ್ರಕಾರ್ಯದಿಂದ ಸಂಗ್ರಹಿಸುವ ಜ್ಞಾನವು ಶಿಸ್ತು, ಸ್ಪಷ್ಟತೆ, ವಸ್ತುನಿಷ್ಠವಾಗಿರುತ್ತದೆ ಎಂದು ಹೇಳಿದರು.  

ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ಷೇತ್ರಕಾರ್ಯದಲ್ಲಿ ಭಾಗವಹಿಸಿದ್ದರು.