ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಕ್ರಮಕ್ಕೆ ಗದಗ ಭೀಮಶಕ್ತಿ ಸಂಘಟನೆ ಆಗ್ರಹ

ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಕ್ರಮಕ್ಕೆ ಗದಗ ಭೀಮಶಕ್ತಿ ಸಂಘಟನೆ ಆಗ್ರಹ  Gadag's Bhimashakti organization demands action against illegal sand mining

ಗದಗ, ಆ.4: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಗದಗ ಭೀಮಶಕ್ತಿ ಸಂಘಟನೆಯ ಪದಾಧಿಕಾರಿಗಳು, ತಕ್ಷಣವೇ ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.  

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಪ್ಪ ಗುತೇಮ್ಮನವರ, ರಾಜ್ಯಾಧ್ಯಕ್ಷ ಶಂಕರ್ ಮುಗುಳಿ ಹಾಗೂ ರಾಜ್ಯ ಕಾನೂನು ಸಲಹೆಗಾರ ಮೈಲಾರ​‍್ಪ ಡಿ.ಎಚ್‌. ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.  

ಈ ವೇಳೆ ಮಾತನಾಡಿದ ರಾಜ್ಯ ಕಾನೂನು ಸಲಹೆಗಾರ ಮೈಲಾರ​‍್ಪ ಡಿ.ಎಚ್‌., ಗದಗ ಜಿಲ್ಲೆಯ ಲಕ್ಷ್ಮೇಶ್ವರ, ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕುಗಳ ವ್ಯಾಪ್ತಿಯಲ್ಲಿ ಹಲವು ಗ್ರಾಮಗಳ ಹಳ್ಳ, ಹಳ್ಳಕೊಳ್ಳಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕಾನೂನುಬಾಹಿರವಾಗಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ನಡೆಯುತ್ತಿದೆ ಎಂದು ಆರೋಪಿಸಿದರು.  

ಅಕ್ರಮ ಮರಳು ಸಾಗಾಣಿಕೆಯಿಂದ ಗ್ರಾಮೀಣ ರಸ್ತೆಗಳು ಹಾಳಾಗುತ್ತಿದ್ದು, ಟಿಪ್ಪರ್, ಲಾರಿ, ಟ್ರ್ಯಕ್ಟರ್ಗಳ ಅತಿವೇಗದ ಸಂಚಾರದಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಅಲ್ಲದೆ, ನೈಸರ್ಗಿಕ ಸಂಪನ್ಮೂಲಗಳಾದ ನದಿ, ಹಳ್ಳಗಳ ಪರಿಸರ ವ್ಯವಸ್ಥೆ ಹಾನಿಗೊಳಗಾಗುತ್ತಿದೆ ಎಂದು ಅವರು ಹೇಳಿದರು.  

"ಅಕ್ರಮ ಮರಳು ಗಣಿಗಾರಿಕೆಯಿಂದ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ರೈತರ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದರು.  

ಜಿಲ್ಲೆಯ ವಿವಿಧ ಸಂಘಟನೆಗಳು ಈ ಹಿಂದೆ ಕೂಡ ಮನವಿ ಸಲ್ಲಿಸಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ಅಕ್ರಮ ಚಟುವಟಿಕೆಗಳಿಗೆ ಸಹಕರಿಸುತ್ತಿರುವ ಕಂದಾಯ ಅಧಿಕಾರಿಗಳ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.  

ಜಿಲ್ಲಾ ಅಧ್ಯಕ್ಷ ಅಣ್ಣಪ್ಪ ಗುತೇಮ್ಮನವರ ಮಾತನಾಡಿ, ಕೆಲವು ವಾಹನಗಳು ಪರವಾನಗಿ ದುರುಪಯೋಗಪಡಿಸಿಕೊಂಡು ಒಂದೇ ಪಾಸ್ನಲ್ಲಿ ಹಲವು ಬಾರಿ ಮರಳು ಸಾಗಾಣಿಕೆ ಮಾಡುತ್ತಿವೆ. ಜಿಪಿಎಸ್ ವ್ಯವಸ್ಥೆ ಇದ್ದರೂ ಅದನ್ನು ಸ್ಥಗಿತಗೊಳಿಸಿ ಅಕ್ರಮ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.  

ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಜಿಲ್ಲೆಯ ನೈಸರ್ಗಿಕ ಸಂಪತ್ತನ್ನು ರಕ್ಷಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಸಂಘಟನೆಯ ಪದಾಧಿಕಾರಿಗಳು ಎಚ್ಚರಿಸಿದರು.  

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುತ್ತಪ್ಪ ಮಾವೇಗೇರಿ, ಜಿಲ್ಲಾ ಗೌರವಾಧ್ಯಕ್ಷ ಮರಿಯಪ್ಪ ಪೂಜಾರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಿದ್ದಪ್ಪ ಮಾದರ, ಸಂಘಟನಾ ಕಾರ್ಯದರ್ಶಿ ಮುತ್ತಪ್ಪ ಪೂಜಾರ, ಯುವ ಘಟಕದ ಉಪಾಧ್ಯಕ್ಷ ಕೃಷ್ಣಪ್ಪ ಮರಾಠಿ, ಜಿಲ್ಲಾ ಕಾರ್ಯದರ್ಶಿ ಯಮನಪ್ಪ ಪೂಜಾರ, ಶಿರಹಟ್ಟಿ ತಾಲೂಕು ಅಧ್ಯಕ್ಷ ಕೋಟೆಪ್ಪ ಪೂಜಾರ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.