ಬಾಚಣಕಿ ಕಾಲುವೆ ಪಕ್ಕದ ಭೂಮಿ ಅತಿಕ್ರಮಣ ಯತ್ನ ಆರೋಪ: ಸೂಕ್ತ ಪರಿಹಾರಕ್ಕೆ ರೈತರ ಆಗ್ರಹ

ಬಾಚಣಕಿ ಕಾಲುವೆ ಪಕ್ಕದ ಭೂಮಿ ಅತಿಕ್ರಮಣ ಯತ್ನ ಆರೋಪ: ಸೂಕ್ತ ಪರಿಹಾರಕ್ಕೆ ರೈತರ ಆಗ್ರಹ  Allegation of attempted encroachment on land beside Bachanaki Canal: Farmers demand appropriate redr

ಕಾರವಾರ 04 : ಬಾಚಣಕಿ ಅಣೆಕಟ್ಟಿನ ಉಪ-ಕಾಲುವೆ ವ್ಯಾಪ್ತಿಯ ರೈತರ ಜಮೀನಿನ ದಾಖಲೆಗಳಲ್ಲಿ ಯಾವುದೇ ಪೂರ್ವ ನೋಟಿಸ್ ನೀಡದೆ ಬದಲಾವಣೆ ಮಾಡಿ, ಭೂಮಿಯನ್ನು ಸಣ್ಣ ನೀರಾವರಿ ಇಲಾಖೆಯ ಹೆಸರಿಗೆ ದಾಖಲಿಸುವ ಯತ್ನ ನಡೆದಿದೆ ಎಂದು ರೈತರು ಆರೋಪಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರಿಗೆ ಮನವಿ ಸಲ್ಲಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಬಸವರಾಜ ಸಂಗಮೇಶ್ವರ್, ಸುಮಾರು 24 ರೈತರ ಪಹಣಿ ಪತ್ರಿಕೆಯಲ್ಲಿ ಕೆಲ ಗುಂಟೆಗಳಷ್ಟು ಜಮೀನಿನ ವಿಸ್ತೀರ್ಣ ಕಡಿಮೆ ಮಾಡಿ ಇಲಾಖೆಯ ಹೆಸರನ್ನು ದಾಖಲಿಸಲಾಗಿದೆ ಎಂದು ದೂರಿದರು.  ರೈತರಿಗೆ ಯಾವುದೇ ನೋಟಿಸ್ ನೀಡದೆ ದಾಖಲೆಗಳಲ್ಲಿ ಬದಲಾವಣೆ ಮಾಡಿರುವುದು ಅಧಿಕಾರ ದುರುಪಯೋಗವಾಗಿದೆ. ರೈತರಲ್ಲಿ ಆತಂಕ ಮೂಡಿಸಿರುವ ಮುಂಡಗೋಡ ತಹಶೀಲ್ದಾರ್ ಹಾಗೂ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.  

ಸುಮಾರು 70 ವರ್ಷಗಳಿಂದ ಬಾಚಣಕಿ ಅಣೆಕಟ್ಟಿನ ನೀರಿನಿಂದ ಇಂದೂರು, ಕೂಸುರು ಸೇರಿದಂತೆ ವಿವಿಧ ಗ್ರಾಮಗಳ 2,000 ಎಕರೆ ಪ್ರದೇಶದಲ್ಲಿ 500ಕ್ಕೂ ಹೆಚ್ಚು ರೈತರು ಕೃಷಿ ಮಾಡುತ್ತಿದ್ದಾರೆ. ಯಾವುದೇ ಪರಿಹಾರ ನೀಡದೆ ಈಗ ಜಮೀನು ತೆರವುಗೊಳಿಸಲು ಮುಂದಾಗಿರುವುದು ಖಂಡನೀಯ ಎಂದು ಅವರು ಹೇಳಿದರು.  ರೈತ ಮಂಜುನಾಥ ನಡಿಗೇರಿ ಮಾತನಾಡಿ, ಭೂಸ್ವಾಧೀನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸರ್ಕಾರ ಬಹಿರಂಗಪಡಿಸಬೇಕು. ಒಂದು ವೇಳೆ ಭೂಸ್ವಾಧೀನ ನಡೆದಿಲ್ಲದಿದ್ದರೆ, ಪ್ರಸ್ತುತ ಮಾರುಕಟ್ಟೆ ದರದಲ್ಲಿ ಸೂಕ್ತ ಪರಿಹಾರ ನೀಡಿ ಮಾತ್ರ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ 2,000ಕ್ಕೂ ಹೆಚ್ಚು ರೈತರೊಂದಿಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.   ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಸಿಕಂದರ ಬಂಕಾಪೂರ, ಅಶೋಕ ಸೂರಣ್ಣನವರ, ಪರಮೇಶ್ವರ ಸುಣಗಾರ, ಅಬ್ದುಲ್ ರೆಹಮಸಾಬ್ ಬಂಕಾಪೂರ, ಹನ್ಮಂತ ಕಣಕಣ್ಣನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.