ಜಿ.ಪರಮೇಶ್ವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ: ಐಟಿ ಅಧಿಕಾರಿಗಳ ಒತ್ತಡ ಆರೋಪ

ಬೆಂಗಳೂರು, ಅ.12:   ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಪರಮೇಶ್ವರ ಅವರ ನಿವಾಸ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ  ಬೆನ್ನಲೇ ರಮೇಶ್ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.  

ಕಳೆದ 6 ವರ್ಷಗಳಿಂದ ಜಿ.ಪರಮೇಶ್ವರ ಅವರ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ರಮೇಶ್, ಇಂದು ಬೆಳಿಗ್ಗೆ ಆಪ್ತರಿಗೆ ಕರೆ ಮಾಡಿ ಜ್ಞಾನ ಭಾರತಿ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಮೇಶ್ ಕೆಪಿಸಿಸಿ ಕಚೇರಿಯಲ್ಲಿ ಬೆರಳಚ್ಚುಗಾರನಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ರಮೇಶ್ ಮೂಲತಃ ಕುಣಿಗಲ್ ಮೂಲದವರು ಎಂದು ತಿಳಿದುಬಂದಿದೆ. 

ಒಳ್ಳೆಯ ಹುಡುಗ, ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಹಳ ವರ್ಷಗಳಿಂದ ನನ್ನೊಂದಿಗೆ ಕೆಲಸ ಮಾಡುತ್ತಿದ್ದ. ಬೆಳಿಗ್ಗೆ ಮಾತನಾಡಿ ಧೈರ್ಯ ಹೇಳಿ ಕಳುಹಿಸಿದ್ದೆ. ಆದರೆ, ಈ ರೀತಿ ಏಕೆ ಮಾಡಿಕೊಂಡ ತಿಳಿಯುತ್ತಿಲ್ಲ ಎಂದು ಡಾ.ಜಿ.ಪರಮೇಶ್ವರ ಪ್ರತಿಕ್ರಿಯಿಸಿದ್ದಾರೆ. 

ಜ್ಞಾನಭಾರತಿ ಆವರಣದಲ್ಲಿ ರಮೇಶ್ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಐಟಿ ದಾಳಿಯಿಂದ ನೊಂದು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. 

ನಾನು ಬಡವ. ನಾನು ನಿಯ್ಯತ್ತಿನಿಂದ ಬದುಕುತ್ತಿದ್ದೇನೆ. ಈಗಷ್ಟೇ ಮನೆ ನಿರ್ಮಿಸುತ್ತಿದ್ದೇನೆ. ನನ್ನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅವರ ಪ್ರಶ್ನೆಯನ್ನು ಎದುರಿಸಲು ಆಗುತ್ತಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಆಪ್ತರೊಬ್ಬರಿಗೆ ಆತ್ಮಹತ್ಯೆಗೂ ಮುನ್ನ ಹೇಳಿದ್ದಾರೆ ಎಂದು ತಿಳಿದುಬಂದಿದೆ. 

ಜ್ಞಾನಭಾರತಿ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. 

ನೀಟ್ ಪರೀಕ್ಷೆ ಮೂಲಕ ಭಾರತ ವೈದ್ಯಕೀಯ ಮಂಡಳಿ ಹಂಚಿಕೆ ಮಾಡಿದ್ದ ಸೀಟುಗಳನ್ನು ಅಕ್ರಮವಾಗಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡರಾದ ಪರಮೇಶ್ವರ ಅವರಿಗೆ ಸೇರಿದ ಸಿದ್ಧಾರ್ಥ ಶಿಕ್ಷಣ ಟ್ರಸ್ಟ್ ಹಾಗೂ ಆರ್. ಎಲ್. ಜಾಲಪ್ಪ ಅವರ ದೇವರಾಜ ಅರಸು ಶಿಕ್ಷಣ ಸಂಸ್ಥೆ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು ಲೆಕ್ಕ ಕೊಡದ ಭಾರಿ ಆಸ್ತಿ ಪಾಸ್ತಿ ಪತ್ತೆ ಹಚ್ಚಿದ್ದರು. ಈ ಬಗ್ಗೆ ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿಕೆ ಬಿಡುಗಡೆ ಮಾಡಿದ್ದರು. 

ರಮೇಶ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಕಿರುಕುಳ ಕಾರಣ ಎನ್ನಲಾಗಿದ್ದು, ಇದು ನಿಜವಾದರೆ ಅವರ ಆತ್ಮಹತ್ಯೆಗೆ ಐಟಿ ಅಧಿಕಾರಿಗಳೇ ಹೊಣೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ರಮೇಶ್ ಅವರ ಆತ್ಮಹತ್ಯೆ ಬಗ್ಗೆ ಮಾಹಿತಿ ಲಭಿಸಿದೆ. ಆತ್ಮಹತ್ಯೆಗೂ ಮುನ್ನ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದರು ಎಂದು ತಿಳಿದಿದ್ದೇನೆ. ಅಲ್ಲದೇ 2-3 ದಿನಗಳಿಂದ ಐಟಿ ಅಧಿಕಾರಿಗಳು ವಿಚಾರಣೆ ಮಾಡುವ ವೇಳೆ ಕಿರುಕುಳ ನೀಡಿದ್ದು, ಈ ಕಿರುಕುಳ ತಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಅವರ ಕುಟುಂಬಕ್ಕೆ ಸಾಂತ್ವನವನ್ನು ಹೇಳುತ್ತೇನೆ. ಅವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.