ಮನೆಯಿಂದ ಕೆಲಸ ಮಾಡಿದವರಿಗೆ, 15 ಸಾವಿರಕ್ಕಿಂತ ಕಡಿಮೆ ವೇತನ ಇರುವವರಿಗೆ ಪೂರ್ತಿ ವೇತನ: ಎಫ್‌ಕೆಸಿಸಿಐ

ಬೆಂಗಳೂರು, ಏ.13,ಲಾಕ್ ಡೌನ್ ಸಂದರ್ಭದಲ್ಲಿ ಕೆಲಸ ಮನೆಯಿಂದಲೇ ಕೆಲಸ ಮಾಡಿದವರಿಗೆ  ಪೂರ್ತಿ ವೇತನ ನೀಡಬೇಕು. 15 ಸಾವಿರಕ್ಕಿಂತ ಒಳಗಿನ ವೇತನದಾರರಿಗೆ ಕೆಲಸ ಮಾಡದೇ ಇದ್ದರೂ  ಪೂರ್ತಿ ವೇತನ ಪಾವತಿಸುವಂತೆ ರಾಜ್ಯ ಕೈಗಾರಿಕೆ ವಾಣಿಜ್ಯ ಮಹಾ ಸಂಸ್ಥೆ (ಎಫ್ ಕೆ ಸಿ ಸಿ  ಐ) ಸೂಚನೆ ನೀಡಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ದನ್ ತಿಳಿಸಿದ್ದಾರೆ.
ರಾಜ್ಯದಲ್ಲಿ 6.5 ಲಕ್ಷ ಕೈಗಾರಿಕೆಗಳಿದ್ದು 65 ಲಕ್ಷ ಮಂದಿ  ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ತಿಂಗಳಿಗೆ 6500 ಕೋಟಿ ರೂಪಾಯಿ ವೇತನ ಪಾವತಿ  ಮಾಡಲಾಗುತ್ತಿದೆ. ಲಾಕ್ ಡೌನ್ ಸಂದರ್ಭದಲ್ಲಿ ಉತ್ಪಾದನೆ ಇಲ್ಲದೆ ಉದ್ದಿಮೆದಾರರು  ಸಂಕಷ್ಟಕ್ಕೆ ಸಿಲುಕಿದ್ದಾರೆ.  ಪೂರ್ತಿ ವೇತನ ಪಾವತಿ ಮಾಡಲಾಗದೆ ಸಮಸ್ಯೆಗೆ  ಸಿಲುಕಿದ್ದಾರೆ. ಬಹಳಷ್ಟು ಮಂದಿ ಸ್ಪಷ್ಟೀಕರಣ ನೀಡುವಂತೆ ಮನವಿ ಮಾಡಲಾಗಿದೆ ಎಂದು ಜನಾರ್ದನ್ ತಿಳಿಸಿದ್ದಾರೆ.ಬಹುತೇಕ ಉದ್ಯಮಿಗಳ ಜೊತೆ   ಚರ್ಚಿಸಿ ಸ್ಪಷ್ಟ ನಿಲುವು ತೆಗೆದುಕೊಳ್ಳಲಾಗಿದೆ. 15 ಸಾವಿರ ರೂಪಾಯಿಗಿಂತ ಒಳಗೆ ವೇತನ  ತೆಗೆದುಕೊಳ್ಳುತ್ತಿರುವವರಿಗೆ ಕೆಲಸ ಮಾಡದೇ ಇದ್ದರೂ ಪೂರ್ತಿ ವೇತನ ಪಾವತಿ ಮಾಡಬೇಕು. ಈ  ವೇತನದ ಪ್ಯಾಕೇಜ್ ನಲ್ಲಿ ಇರುವವರು ಜೀವನ ನಡೆಸುವವರು ಸಾಕಷ್ಟು ಆರ್ಥಿಕ ಮುಗ್ಗಟ್ಟಿನಿಂದ  ಬಳಲುತ್ತಿರುತ್ತಾರೆ. ಅವರಿಗೆ ವೇತನ ಕಡಿತ ಮಾಡುವುದು ಸೂಕ್ತವಲ್ಲ ಎಂದು ಹೇಳಿದರು.
15  ರಿಂದ 50 ಸಾವಿರ ವೇತನ ಪಡೆಯುವ ವರ್ಗದವರು ಮನೆಯಿಂದ ಕೆಲಸ ಮಾಡಿದ್ದರೆ ಯಾವುದೇ ಕಡಿತ  ಇಲ್ಲದೆ ಪೂರ್ತಿ ವೇತನ ಪಾವತಿ ಮಾಡಬೇಕು. ಒಂದು ವೇಳೆ ಲಾಕ್ ಡೌನ್ ವೇಳೆ ಯಾವುದೇ ಕೆಲಸ  ಮಾಡದೆ ರಜೆ ಹಾಕಿ ಮನೆಯಲ್ಲಿದ್ದರೆ ಅವರಿಗೆ ವೇತನದಲ್ಲಿ ಶೇ.50ರಷ್ಟನ್ನು ಪಾವತಿ  ಮಾಡಬೇಕು ಎಂದು ಸಲಹೆ ನೀಡಲಾಗಿದೆ. 50 ಸಾವಿರಕ್ಕಿಂತ ಮೇಲ್ಪಟ್ಟು ವೇತನ ಪಡೆಯುವವರು  ಮನೆಯಿಂದಲೇ ಕೆಲಸ ಮಾಡಿದ್ದರೆ ವೇತನ ಪಾವತಿ ಮಾಡಬೇಕು. ಯಾವುದೇ ಕೆಲಸ ಮಾಡದೆ ರಜೆ ಹಾಕಿ  ಮನೆಯಲ್ಲಿದ್ದರೆ ವೇತನ ಪಾವತಿ ಮಾಡುವ ಅಗತ್ಯ ಇಲ್ಲ ಎಂದು  ಅವರು  ಸ್ಪಷ್ಟಪಡಿಸಿದರು.