ದೇಶದ 100 ಪ್ರಮುಖ ವಿ.ವಿಗಳಲ್ಲಿ ಪೂರ್ಣ ಪ್ರಮಾಣದ ಆನ್ ಲೈನ್ ಶಿಕ್ಷಣ: ರಮೇಶ್ ಪೊಕ್ರಿಯಾಲ್ ನಿಶಾಂಕ್

ನವದೆಹಲಿ, ಜೂ 28: ಕೋವಿಡ್ 19 ಸಂಕಷ್ಟ ಸಂದರ್ಭದಲ್ಲಿ ಡಿಜಿಟಲ್ ಕಲಿಕೆಗೆ ಉತ್ತೇಜನ ನೀಡುತ್ತಿದ್ದು, ಶೀಘ್ರದಲ್ಲೇ ದೇಶದ ಪ್ರಮುಖ 100 ವಿಶ್ವವಿದ್ಯಾಲಯಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಆನ್‌ಲೈನ್ ಶಿಕ್ಷಣ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೊಕ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆಕೋವಿಡ್-೧೯ ಸಂಕಷ್ಟ ಸಂದರ್ಭದಲ್ಲಿ ಶಿಕ್ಷಣದ ಸ್ಥಿತಿಗತಿ ಕುರಿತು ಜಿ-೨೦ ಸದಸ್ಯ ರಾಷ್ಟ್ರಗಳ ಶಿಕ್ಷಣ ಸಚಿವರೊಂದಿಗೆ ಶನಿವಾರ ಆನ್‌ಲೈನ್ ಸಮಾವೇಶದಲ್ಲಿ ಮಾತನಾಡಿದ ಅವರು, ಬದಲಾದ ಸನ್ನಿವೇಶದಲ್ಲಿ ಆನ್ ಲೈನ್ ಶಿಕ್ಷಣಕ್ಕೆ ಪ್ರಧಾನ ಆದ್ಯತೆ ನೀಡುವ ಅಗತ್ಯವಿದೆ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ. ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ವ್ಯಾಪಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಭಾರತ ಸಂಕಷ್ಟದ ಸಂದರ್ಭದಲ್ಲೂ ಎಲ್ಲಾ ವಲಯಗಳ ಹಿತರಕ್ಷಣೆಗೆ ಆದ್ಯತೆ ನೀಡಿದೆ.

ಅದೇ ರೀತಿ ಶಿಕ್ಷಣ ವ್ಯವಸ್ಥೆಗೂ ಯಾವುದೇ ಬಾಧಕವಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ದೇಶದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಿದರು. ಕೋವಿಡ್ 19 ಸಂಕಷ್ಟ ಪರಿಸ್ಥಿತಿ ನಿಭಾಯಿಸುವ ಕುರಿತು ಜಿಡಿಪಿಯ ಶೇಕಡ ೧೦ರಷ್ಟು ಮೊತ್ತವನ್ನು ಕೋವಿಡ್ ನಿಂದ ಸಂಕಷ್ಟಕ್ಕೆ ಒಳಗಾದವರಿಗಾಗಿ ವೆಚ್ಚ ಮಾಡಲಾಗುತ್ತಿದೆ.  ಸರ್ಕಾರದ ಪ್ರಧಾನಮಂತ್ರಿ ಆತ್ಮ ನಿರ್ಭರ್ ಪ್ಯಾಕೇಜ್ ನಿಂದ ಎಲ್ಲಾ ವಲಯಗಳಿಗೂ ಅನುಕೂಲವಾಗಲಿದೆ. ಇದರಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವ ಕ್ರಮಗಳು ಸಹ ಸೇರಿವೆ ಎಂದು ಹೇಳಿದ್ದಾರೆ.ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಕುಟುಂಬದ ಸದಸ್ಯರಲ್ಲಿ ಮಾನಸಿಕ ಸ್ತೈರ್ಯ ಹೆಚ್ಚಿಸಲು ಮತ್ತು ಉತ್ತಮ ನಡವಳಿಕೆಗಳನ್ನು ಅಳವಡಿಸಿಕೊಳ್ಳಲು ಮನೋ ದರ್ಪಣ್ ಎಂಬ ಕಾರ್ಯಕ್ರಮ ಆರಂಭಿಸಲಾಗಿದೆ. ಶಿಕ್ಷಣ ಸಂಬಂಧಿ ಸಮಸ್ಯೆಗಳ ನಿವಾರಣೆಗಾಗಿ ರಾಷ್ಟ್ರಮಟ್ಟದ ಸಹಾಯವಾಣಿ ಆರಂಭಿಸಲಾಗಿದೆ ಎಂದು ಸಚಿವ ರಮೇಶ್ ಪೊಕ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ.