ರಾಜ್ಯದಲ್ಲಿ ಮತ್ತೆ ತೈಲ ಬೆಲೆ ಏರಿಕೆ: ವಾಹನ ಸವಾರರು ಕಂಗಾಲು 10 ದಿನಗಳಲ್ಲಿ ನಾಲ್ಕನೇ ಬಾರಿ ದರ ಹೆಚ್ಚಳ; ಬಳ್ಳಾರಿಯಲ್ಲಿ ಸಾರ್ವಜನಿಕರ ಆಕ್ರೋಶ

ರಾಜ್ಯದಲ್ಲಿ ಮತ್ತೆ ತೈಲ ಬೆಲೆ ಏರಿಕೆ: ವಾಹನ ಸವಾರರು ಕಂಗಾಲು 10 ದಿನಗಳಲ್ಲಿ ನಾಲ್ಕನೇ ಬಾರಿ ದರ ಹೆಚ್ಚಳ; ಬಳ್ಳಾರಿಯಲ್ಲಿ ಸಾರ್ವಜನಿಕರ ಆಕ್ರೋಶ Fuel prices hiked again in the state: Motorists in distress, fourth price hike in 10 days; Public ou

ಬಳ್ಳಾರಿ 25: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೇಲ್ ದರಗಳು ಮತ್ತೆ ಏರಿಕೆಯಾಗಿರುವುದು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.  ಕಳೆದ 10 ದಿನಗಳ ಅವಧಿಯಲ್ಲಿ ನಾಲ್ಕನೇ ಬಾರಿ ತೈಲ ಬೆಲೆ ಹೆಚ್ಚಳವಾಗಿರುವುದು ವಾಹನ ಸವಾರರು, ಸಾರಿಗೆ ಉದ್ಯಮಿಗಳು ಹಾಗೂ ಸಾಮಾನ್ಯ ಜನರ ಮೇಲೆ ಹೆಚ್ಚುವರಿ ಆರ್ಥಿಕ ಭಾರವನ್ನು ತಂದಿದೆ.ಇತ್ತೀಚಿನ ದರ ಪರಿಷ್ಕರಣೆಯಂತೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 2.90 ಹಾಗೂ ಡೀಸೇಲ್ ಬೆಲೆಯಲ್ಲಿ 2.10 ಏರಿಕೆ ಮಾಡಲಾಗಿದೆ.

ಇದರ ಪರಿಣಾಮವಾಗಿ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಪೆಟ್ರೋಲ್ ದರ ಲೀಟರ್ಗೆ 109.19 ತಲುಪಿದ್ದು, ಡೀಸೇಲ್ ದರ 100 ಗಡಿ ದಾಟಿದೆ.ತೈಲ ಬೆಲೆ ಏರಿಕೆಯಿಂದ ದಿನನಿತ್ಯ ವಾಹನ ಬಳಕೆ ಮಾಡುವ ನೌಕರರು, ವಿದ್ಯಾರ್ಥಿಗಳು, ಸಣ್ಣ ವ್ಯಾಪಾರಿಗಳು ಹಾಗೂ ಸರಕು ಸಾಗಣೆ ವಾಹನ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನತೆ ತತ್ತರಿಸಿರುವ ಸಂದರ್ಭದಲ್ಲಿ ಇಂಧನ ದರ ಏರಿಕೆ ಮತ್ತಷ್ಟು ಹೊರೆ ತಂದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಳ್ಳಾರಿಯಲ್ಲಿ ಆಟೋ ಚಾಲಕರು, ಲಾರಿ ಮಾಲೀಕರು ಹಾಗೂ ಖಾಸಗಿ ವಾಹನ ಸವಾರರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

“ಪ್ರತಿ ಕೆಲ ದಿನಗಳಿಗೊಮ್ಮೆ ತೈಲ ದರ ಹೆಚ್ಚಳ ಮಾಡುವುದು ಜನಸಾಮಾನ್ಯರ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತಿದೆ. ವಾಹನ ಚಾಲನೆ ಮಾಡುವುದೇ ದುಬಾರಿಯಾಗುತ್ತಿದೆ” ಎಂದು ವಾಹನ ಸವಾರರು ದೂರಿದರು. ಗಣಿ ಚಟುವಟಿಕೆಗಳು ಹೆಚ್ಚಿರುವ ಬಳ್ಳಾರಿ ಜಿಲ್ಲೆಯಲ್ಲಿ ಡೀಸೇಲ್ ಬಳಕೆ ಹೆಚ್ಚಾಗಿರುವುದರಿಂದ ಲಾರಿ ಹಾಗೂ ಸರಕು ಸಾಗಣೆ ಕ್ಷೇತ್ರಕ್ಕೂ ಈ ದರ ಏರಿಕೆ ದೊಡ್ಡ ಹೊಡೆತ ನೀಡಿದೆ. ಸಾರಿಗೆ ವೆಚ್ಚ ಹೆಚ್ಚಳದಿಂದ ಅಗತ್ಯ ವಸ್ತುಗಳ ಬೆಲೆಯೂ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರ ವಲಯದವರು ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ತೈಲ ಮೇಲಿನ ತೆರಿಗೆ ಮರುಪರೀಶೀಲನೆ ಮಾಡಿ ಸಾರ್ವಜನಿಕರಿಗೆ ಪರಿಹಾರ ನೀಡಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.  ನಿರಂತರ ದರ ಏರಿಕೆಯಿಂದ ಮಧ್ಯಮ ವರ್ಗ ಹಾಗೂ ದುಡಿಯುವ ವರ್ಗದ ಜನರ ಜೀವನ ನಿರ್ವಹಣೆ ಕಷ್ಟಕರವಾಗುತ್ತಿದೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.