ಮೋದಿ ಆಡಳಿತದಿಂದ ದೇಶ ಅಭಿವೃದ್ಧಿಯ ದಿಕ್ಕಿನತ್ತ: ಶಶಿಕಲಾ ಜೊಲ್ಲೆ

ಮೋದಿ ಆಡಳಿತದಿಂದ ದೇಶ ಅಭಿವೃದ್ಧಿಯ ದಿಕ್ಕಿನತ್ತ: ಶಶಿಕಲಾ ಜೊಲ್ಲೆ  From Modi administration to the direction of country development: Sasikala Jolle

ಪ್ರಧಾನಿ ನರೇಂದ್ರ ಮೋದಿ 12 ವರ್ಷಗಳ ಆಡಳಿತ ಪೂರ್ಣ; ಬಿಜೆಪಿ ಸಂಭ್ರಮಾಚರಣೆ  

ಚಿಕ್ಕೋಡಿ 14: ಪ್ರಧಾನಿ ನರೇಂದ್ರ ಮೋದಿ ಅವರ 12 ವರ್ಷಗಳ ಆಡಳಿತವು ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿದ್ದು, ಅವರು ಇಂದು ವಿಶ್ವನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.ನಗರದ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 12 ವರ್ಷಗಳ ಆಡಳಿತ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆ ಹಾಗೂ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸೇವೆಯೇ ಆಡಳಿತದ ಮೂಲಮಂತ್ರ ಎಂಬುದನ್ನು ಮೋದಿ ಅವರು ತಮ್ಮ ಕಾರ್ಯಶೈಲಿಯ ಮೂಲಕ ದೇಶಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ವಿವಿಧ ಜನಪರ ಯೋಜನೆಗಳ ಮೂಲಕ ಕೋಟ್ಯಂತರ ಜನರ ಬದುಕಿನಲ್ಲಿ ಬದಲಾವಣೆ ತರಲಾಗಿದೆ. ಗರೀಬ್ ಕಲ್ಯಾಣ ಯೋಜನೆಯಡಿ 81 ಕೋಟಿ ಜನರಿಗೆ ನೆರವು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 4 ಕೋಟಿ ಮನೆಗಳ ನಿರ್ಮಾಣ, ಜನಧನ್ ಯೋಜನೆಯ ಮೂಲಕ ಬ್ಯಾಂಕಿಂಗ್ ಸೇವೆಯನ್ನು ಸಾಮಾನ್ಯ ಜನರಿಗೆ ತಲುಪಿಸಲಾಗಿದೆ ಎಂದು ತಿಳಿಸಿದರು.ರೈತರಿಗಾಗಿ ಪಿಎಂ ಕಿಸಾನ್, ಪಿಎಂ ಫಸಲ್ ಬಿಮಾ, ಪಿಎಂ ಕುಸುಮ್ ಹಾಗೂ ಹನಿ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಜಲಜೀವನ ಮಿಷನ್ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗಿದೆ.

ಮಹಿಳಾ ಸಬಲೀಕರಣಕ್ಕಾಗಿ 12 ಕೋಟಿ ಶೌಚಾಲಯಗಳ ನಿರ್ಮಾಣ, ಸುಕನ್ಯ ಸಮೃದ್ಧಿ, ಮಾತೃವಂದನಾ ಹಾಗೂ ಮುದ್ರಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದರು.ಆಯುಷ್ಮಾನ್ ಭಾರತ ಯೋಜನೆಯಡಿ ಕೋಟ್ಯಂತರ ಜನರಿಗೆ ಆರೋಗ್ಯ ಭದ್ರತೆ ಒದಗಿಸಲಾಗಿದೆ. ವಿದೇಶಾಂಗ ನೀತಿಯಲ್ಲಿ ಭಾರತಕ್ಕೆ ಹೊಸ ಗೌರವ ದೊರೆತಿದ್ದು, ದೇಶದ ಭದ್ರತೆ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ಥಾನಮಾನ ಮತ್ತಷ್ಟು ಬಲಗೊಂಡಿದೆ ಎಂದು ಅಭಿಪ್ರಾಯಪಟ್ಟರು.

2014ರ ಬಳಿಕ ದೇಶದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದ್ದು, ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದರೆ, ಮೋದಿ ನೇತೃತ್ವದ ಸರ್ಕಾರದಲ್ಲಿ ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡಲಾಗಿದೆ ಎಂದು ಆರೋಪಿಸಿದರು. ವಿಶ್ವ ಆರ್ಥಿಕತೆಯಲ್ಲಿ ಭಾರತದ ಸ್ಥಾನಮಾನವೂ ಗಣನೀಯವಾಗಿ ಏರಿಕೆಯಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ದುರ್ಯೋಧನ ಐಹೊಳೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಅಪ್ಪಾಜಿಗೋಳ, ಮಾಜಿ ಶಾಸಕ ಮಹೇಶ ಕುಮಟೊಳ್ಳಿ, ಮಹೇಶ ಭಾತೆ, ಶಾಂಭವಿ ಅಶ್ವಥಪೂರ, ದುಂಡಪ್ಪ ಬೆಂಡವಾಡೆ, ಸದಾಶಿವ ಹಳಗಂಳಿ, ರಾಜು ಹರಗನ್ನವರ, ದೀಪಕ ಪಾಟೀಲ, ಶಕುಂತಲಾ ಡೋಣವಾಡೆ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.