ಬೆಂಗಳೂರು.ಏ.17,ರಾಜ್ಯದಲ್ಲಿ ಕೊರೊನಾ ವೈರಸ್ ನಿಯಂತ್ರಣದಲ್ಲಿದ್ದು, ಲಾಕ್ ಡೌನ್ ನಿಂದ ಬಾದಿತರಾದವರಿಗೆ, ಅಲೆಮಾರಿ ಜನಾಂಗದವರಿಗೆ, ಅಸಂಘಟಿತ ಕಾರ್ಮಿಕರಿಗೆ, ತೊಂದರೆಗೊಳಗಾದ ಅಂತರ್ ಜಿಲ್ಲೆಯಲ್ಲಿರುವರಿಗೆ, ಬೇರೆ ರಾಜ್ಯಗಳಿಂದ ಬಂದು ತೊಂದರೆಯಲ್ಲಿರುವವರಿಗೆ, ಪಡಿತರ ದೊರಕದೇ ತೊಂದರೆಯಲ್ಲಿರುವವರಿಗೆ ಸಮಾಜ ಕಲ್ಯಾಣ ಇಲಾಖೆಯು ತನ್ನ ಅಧೀನದಲ್ಲಿರುವ ವಸತಿ ಶಾಲೆ ಮತ್ತು ವಸತಿ ನಿಲಯಗಳಲ್ಲಿ ಆಶ್ರಯ ನೀಡಿ, ಸಕಲಸೌಕರ್ಯಗಳನ್ನು ಒದಗಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ.ತಮ್ಮ ಗೃಹ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯು ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಸಮಾಜ ಕಲ್ಯಾಣ ಇಲಾಖೆಯ 44 ವಸತಿ ನಿಲಯ ಹಾಗೂ 54 ಮುರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ಒಟ್ಟು 98 ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ 784 ಜನರನ್ನು ಕ್ವಾರಂಟೈನ್‍ನಲ್ಲಿಡಲಾಗಿದೆ. 800 ವಸತಿ ಶಾಲೆ ಹಾಗೂ 2 ಸಾವಿರ ವಿದ್ಯಾರ್ಥಿ ನಿಲಯಗಳನ್ನು ಆಶ್ರಯ ತಾಣಗಳನ್ನಾಗಿ ಗುರುತಿಸಲಾಗಿದೆ. ಕೊರೊನಾ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ಲಾಕ್ ಡೌನ್‍ನಿಂದ ಬಾಧಿತರಾದವರಿಗೆ, ನಿರಾಶ್ರಿತರಿಗೆ, ಅಸಂಘಟಿತ ಕೂಲಿ ಕಾರ್ಮಿಕರಿಗೆ, ಅಲೆಮಾರಿ ಜನಾಂಗದವರಿಗೆ ಹಾಗೂ ಆಶ್ರಯ ಕೋರಿ ಬಂದ ಒಟ್ಟು 5108 ಜನರಿಗೆ ಸಮಾಜ ಇಲಾಖೆಯ ವ್ಯಾಪ್ತಿಯ 92 ವಸತಿ ಶಾಲೆಗಳಲ್ಲಿ ಹಾಗೂ ನಿಲಯಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂದರು.
ಮಿಜೋರಾಂ, ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಿಂದ ಆಮಿಸಿ ಬಾಧಿತರಾದವರಿಗೆ ವಿದ್ಯಾರ್ಥಿ ನಿಲಯಗಳಲ್ಲಿ ಆಶ್ರಯ ನೀಡಲಾಗಿದೆ. ರಾಜ್ಯದಲ್ಲಿ ಯಾರೂ ಅನ್ನ, ನೀರು ದೊರಕದೇ ಬಳಲಬಾರದು ಎನ್ನುವುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಶಯವಾಗಿದ್ದು, ಇದಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಅದಕ್ಕೆ ಪೂರಕವಾಗಿ ಸಮಾಜ ಕಲ್ಯಾಣ ಇಲಾಖೆಯು ಶ್ರಮಿಸುತ್ತಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಕುಮಾರ್ ನಾಯಕ್ ಅವರ ನೇತೃತ್ವದಲ್ಲಿ ಇಲಾಖೆ ಅಧಿಕಾರಿಗಳು ಸಕ್ರಿಯವಾಗಿ ಕ್ರಮಕೈಗೊಂಡಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದರು.
ತೊಂದರೆಗೊಳದ ಯಾವುದೇ ಅಂಘಟಿಕ ಕಾರ್ಮಿಕರು, ಆಶ್ರಯದಲ್ಲಿರುವವರಿಗೆ ಪ್ರತಿನಿತ್ಯ ತಿಂಡಿ, ಊಟೋಪಚಾರ ನೀಡಿ, ಆರೈಕೆ ಮಾಡಲಾಗುತ್ತಿದೆ. ಸೂಕ್ತ ವಸತಿ, ಸ್ನಾನಗೃಹ ಸೌಲಭ್ಯ ಒದಗಿಸಿ, ಸಾಬೂನು ಸೇರಿದಂತೆ ಮೂಲಭೂತಸೌಕರ್ಯಗಳನ್ನು ನೀಡಲಾಗಿದೆ. 14 ಸಾವಿರ ಕ್ವಿಂಟಲ್ ಅಕ್ಕಿ, 4 ಸಾವಿರ ಕ್ವಿಂಟಲ್ ಗೋಧಿ ಸೇರಿದಂತೆ ಆಹಾರ ಪದಾರ್ಥಗಳ ಸಾಮಗ್ರಿಯ ದಾಸ್ತಾನು ಹೊಂದಿದೆ. ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ತಾಲೂಕು ವೈದ್ಯಾಧಿಕಾರಿಯೊಂದಿಗೆ ಸೂಕ್ತ ಸಮನ್ವಯ ಸಾಧಿಸಿಕೊಂಡು ವೈದ್ಯಕೀಯ ತಂಡವು ಇವರ ಆರೋಗ್ಯ ತಪಾಸಣೆ ಕೈಗೊಳ್ಳುವಂತೆ ಕ್ರಮಕೈಗೊಳ್ಳಲಾಗಿದೆ. ಈ ವಸತಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿರುವವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ. ವಸತಿ ನಿಲಯಗಳ ಸಿಬ್ಬಂದಿ ವರ್ಗದವರು ಶ್ರಮಿಸುತ್ತಿದ್ದಾರೆ. ಈ ವಿದ್ಯಾರ್ಥಿ ನಿಲಯಗಳ ಆಶ್ರಯದಲ್ಲಿರುವವರು ಯಾವುದೇ ಆತಂಕಕ್ಕೊಳಗಾಗಬಾರದು. ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಅವರು ಮನವಿ ಮಾಡಿದರು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಕೊರೊನಾ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮಕೈಗೊಂಡು ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ನಿಯಂತ್ರಣ ಮಾಡುತ್ತಿದೆ. ಮೂರು ತಿಂಗಳಿಗೆ ಪಡಿತರವನ್ನು ವಿತರಿಸಲಾಗುತ್ತಿದ್ದು, ಇಗಾಗಲೇ ರಾಜ್ಯದಲ್ಲಿ 1.26 ಕೋಟಿ ಫಲಾನುಭವಿಗಳಿಗೆ ಈಗಾಗಲೇ 2 ತಿಂಗಳ ಪಡಿತರವನ್ನು ವಿತರಿಸಲಾಗಿದೆ. ಜನಧನ ಯೋಜನೆಯ ಮಹಿಳಾ ಫಲಾನುಭವಿಗಳಿಗೆ ಈಗಾಗಲೇ 500 ರೂ. ಅನ್ನು ಅವರ ಖಾತೆಗೆ ಜಮಾ ಮಾಡಲಾಗಿದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ ತಲಾ ಮೂರು ಅಡುಗೆ ಅನಿಲ ಸಿಲೆಂಡರ್ ಅನ್ನು ವಿತರಿಸಲಾಗುತ್ತಿದೆ. ರಾಜ್ಯ ಸರ್ಕಾರವು ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ತಲಾ 2 ಸಾವಿರ ರೂ ಅನ್ನು ನೀಡಿದೆ. ಹಾಪ್ ಕಾಮ್ಸ್ ಮೂಲಕ ಪ್ರತಿದಿನ ರೈತರಿಂದ 400 ಕ್ಕೂ ಅಧಿಕ ಟನ್ ಹಣ್ಣು ಖರೀದಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ನಿನ್ನೆಯವರೆಗೆ 913 ಮಂದಿಯನ್ನು ಕ್ವಾರಂಟೈನ್‍ನಲ್ಲಿಡಲಾಗಿದೆ. 883 ಮಂದಿ ಕ್ವಾರಂಟೈನ್ ಮುಗಿಸಿದ್ದಾರೆ. ಕೊರೊನಾ ವೈರಸ್ ನಿಂದ ಇದುವರೆಗೂ 27,193 ಮನೆಗಳ ಸಮೀಕ್ಷೆ ಮಾಡಲಾಗಿದೆ. ಮಾಕ್ಸ್, ವೈದ್ಯರಿಗೆ ರಕ್ಷಣ ಕಿಟ್ ಸೇರಿದಂತೆ ಆರೋಗ್ಯ ಸಂರಕ್ಷಣಾ ಸಾಮಗ್ರಿಗಳಿಗೆ ಯಾವುದೇ ಕೊರತೆ ಇಲ್ಲ. ತಾವು ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪ್ರತಿದಿನದ ವರದಿಯನ್ನು ಪಡೆದು ಸೂಕ್ತ ನಿರ್ದೇಶನಗಳನ್ನು ನೀಡುತ್ತಿರುವುದಾಗಿ ತಿಳಿಸಿದ ಅವರು, ಜಿಲ್ಲಾಡಳಿತವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಆಶಾಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು, ವೈದ್ಯರು, ಪೊಲೀಸರು ಸೇರಿದಂತೆ ನಿಯೋಜನೆಗೊಂಡ ಎಲ್ಲಾ ನೌಕರರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು. ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಕುಮಾರ ನಾಯಕ್, ಎಸ್‍ಸಿಪಿ ಟಿಎಸ್‍ಪಿ ಯೋಜನೆಯ ಸಲಹೆಗಾರರಾದ ಇ. ವೆಂಕಟಯ್ಯ, ಆಯುಕ್ತ ಪೆದ್ದಪ್ಪಯ್ಯ, ಡಿಸಿಎಂ ಅವರ ಆಪ್ತಕಾರ್ಯದರ್ಶಿ ವಿ. ಶ್ರೀನಿವಾಸ ಉಪಸ್ಥಿತರಿದ್ದರು.