ಬೆಂಗಳೂರು, ಏ15, ಕೊರೋನಾ ಸೋಂಕಿನ ಲಾಕ್ ಡೌನ್ ಹಿನ್ನೆಲೆ ಯಲ್ಲಿ ಮಾಜಿ ಸಚಿವ ಕಾಂಗ್ರೆಸ್ ಮುಖಂಡ ರಾಮಲಿಂಗರೆಡ್ಡಿ ತಮ್ಮ ಮತ ಕ್ಷೇತ್ರ ಬಿಟಿಎಂ ಲೇಔಟ್ ವ್ಯಾಪ್ತಿಯಲ್ಲಿ ಬಡವರಿಗೆ ಅನ್ನದಾಸೋಹ ಏರ್ಪಡಿಸಿದ್ದು, ಆಹಾರ ತಯಾರಿಕಾ ಘಟಕಕ್ಕೆ ಮಾಜಿ ಸಂಸದ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಹೆ ಭೇಟಿ ನೀಡಿ, ಆಹಾರದ ಗುಣಮಟ್ಟ ಹಾಗೂ ಶುಚಿತ್ವ ಪರಿಶೀಲಿಸಿದರು.ಅವರೊಂದಿಗೆ ಮೇಲ್ಮನೆ ಕಾಂಗ್ರೆಸ್ ಸದಸ್ಯ ಎಚ್ ಎಂ. ರೇವಣ್ಣ, ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ಸೇರಿದಂತೆ ಕೆಲ ಕಾಂಗ್ರೆಸ್ ಮುಖಂಡರು ಹಾಜರಿದ್ದರು. ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ರಾಮಲಿಂಗಾ ರೆಡ್ಡಿ ಅವರು ಸಂಕಷ್ಟದ ಸಂದರ್ಭದಲ್ಲಿ ಬಡವರಿಗೆ ಗುಣಮಟ್ಟದ ಆಹಾರ ವಿತರಿಸಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಕೊರೊನಾ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು. ದೇಶದ ಹಿತದೃಷ್ಟಿಯಿಂದ ಮಾನವೀಯತೆಯಿಂದ ಕೆಲಸ ಮಾಡಬೇಕಾದುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಸರ್ಕಾರದ ಮೇಲೆ ಕೆಲವೊಂದು ದೂರುಗಳು ಕೇಳಿಬರುತ್ತಿವೆ. ಸರ್ಕಾರ ಆದಷ್ಟು ಬೇಗ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಬೇಕು. ಸೋಂಕಿನ ಪರೀಕ್ಷೆಗಳ ಬಗ್ಗೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರು ಕೇಳಿಬರುತ್ತಿವೆ. ಸಮರ್ಪಕ ಪ್ರಮಾಣದಲ್ಲಿ ಕಿಟ್‌ಗಳು ಸಿಗುತ್ತಿಲ್ಲ ಎಂಬುದರ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು. ಈ ಮೂಲಕ ಜನರ ಆತಂಕ, ಗೊಂದಲ ದೂರ ಮಾಡಬೇಕು. ಇದು ಒಬ್ಬರನ್ನೊಬ್ಬರು ದೂರುವ ಸಮಯವಲ್ಲ. ಸರ್ಕಾರದ ಜೊತೆ ಇಂತಹ ಸಂದರ್ಭದಲ್ಲಿ ನಾವು ಕೈ ಜೋಡಿಸಿದ್ದೇವೆ. ಈ ಸಂಕಷ್ಟದಿಂದ ಮೊದಲು ನಾವೆಲ್ಲ ಪಾರಾಗಬೇಕು ಎಂದರು.
ರಾಮಲಿಂಗಾರೆಡ್ಡಿ ಮಾತನಾಡಿ, ರೇಷನ್ ಕಿಟ್ ಕೊಡುವ ವಿಚಾರದಲ್ಲಿ ಸರ್ಕಾರ ಪಕ್ಷಪಾತ ಮಾಡುತ್ತಿದೆ. ತಮ್ಮ ಮತ ಕ್ಷೇತ್ರದಲ್ಲಿ ಇರುವ ಒಡಿಸ್ಸಾ ಜನರಿಗೆ ಅಹಾರ ಕಿಟ್ ನೀಡಿದ್ದಾರೆ.ಅದು ಸಹ ಒಡಿಸ್ಸಾ ಸರ್ಕಾರದ ಮನವಿ ಮೇರೆಗೆ. ಆದರೆ ಇಲ್ಲಿಯವರೆಗೂ ಬೇರೆವರಿಗೆ ಅಹಾರ ಕಿಟ್ ವಿತರಣೆ ಮಾಡಿಲ್ಲ. ಜಯನಗರದಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಬೊಮ್ಮನಹಳ್ಳಿ, ಯಲಹಂಕ ಸೇರಿದಂತೆ ಹಲವು ಕಡೆ ಕಿಟ್ ನೀಡಿದ್ದಾರೆ. ಸರ್ಕಾರವೇ ಇದನ್ನು ಅರಿತು ಕೆಲಸ ಮಾಡಬೇಕು. ಕಳೆದ ಬಾರಿ ಉತ್ತರ ಕರ್ನಾಟಕ ದಲ್ಲಿ ನೆರೆ ಆದಾಗ ಇಲ್ಲಿಂದ ದಿನಸಿ ಮತ್ತು ಅಗತ್ಯ ಸೇವೆಗಳನ್ನು ಕಳುಹಿಸಿಕೊಟ್ಟಿದ್ದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಜನರ ಜತೆ ಇರಬೇಕು.
ಜನಪ್ರತಿನಿಧಿಯಾಗಿ ಈ ಸಂದರ್ಭದಲ್ಲಿ ಜನರ ಕೆಲಸ ಮಾಡಬೇಕಿದೆ. ನಾನು ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಸರ್ಕಾರ ತಪ್ಪು ತಿದ್ದಿಕೊಳ್ಳದೇ ಇದ್ದರೆ ನಾನು ಚಿಂತೆ ಮಾಡುವುದಿಲ್ಲ ಎಂದರು.ನನ್ನ ಕ್ಷೇತ್ರದಲ್ಲಿನ ಹಿತೈಷಿಗಳು ನನ್ನ ಬೆಂಬಲಕ್ಕೆ ಇದ್ದಾರೆ. ಲಾಕ್ ಡೌನ್ ಮುಗಿಯುವವರೆಗೂ ನಾನು ಉಚಿತ ಆಹಾರ ವಿತರಿಸುತ್ತೇನೆ ಎಂದು ರೆಡ್ಡಿ ಹೇಳಿದರು. ಕೊರೊನದಿಂದ ಮೃತಪಟ್ಟವರನ್ನು ವಿಶ್ವ ಆರೋಗ್ಯ ಸಂಸ್ಥೆ ನಿಯಮಗಳ ಪ್ರಕಾರ ಶವಸಂಸ್ಕಾರ ಮಾಡುತ್ತಿಲ್ಲ ಎಂಬ ಆರೋಪದ ಬಗ್ಗೆ ಆರೋಗ್ಯ ಸಚಿವರು ಪ್ರತಿಕ್ರಿಯೆ ಕೊಡಬೇಕು. ನಿಯಮ ಏನು ಎಂದು ಅವರು ತಿಳಿದುಕೊಳ್ಳಬೇಕು. ಇಂತಹ ಸಂದರ್ಭದಲ್ಲಿ ವಿಪಕ್ಷ ವಾಗಿ ಎಲ್ಲ ರೀತಿಯ ಬೆಂಬಲ ನೀಡುತ್ತೇವೆ. ಸರ್ಕಾರ ನಡೆಸುತ್ತಿರುವವರು ಜನರಿಗೆ ಸಮಸ್ಯೆ ಆಗದ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.