ವಿದ್ಯಾರ್ಥಿಗಳಿಗಾಗಿ ಉಚಿತ ನೇತ್ರ ತಪಾಸಣಾ ಶಿಬಿರ

ವಿದ್ಯಾರ್ಥಿಗಳಿಗಾಗಿ ಉಚಿತ ನೇತ್ರ ತಪಾಸಣಾ ಶಿಬಿರ  Free Eye Check-up Camp for Students

ಲೋಕದರ್ಶನ ವರದಿ  

ಗದಗ, ಸೆ. 1: ಕೆಎಲ್‌ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಯೂತ್ ರೆಡ್ ಕ್ರಾಸ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ವತಿಯಿಂದ, ಶ್ರೀ ಜಿ.ಎಚ್‌. ಮೆಹರವಾಡೆ ಕಣ್ಣಿನ ಆರೈಕೆ ಕೇಂದ್ರ, ಗದಗ ಇವರ ಸಹಯೋಗದಲ್ಲಿ ಸೆ. 1ರಂದು ಕಾಲೇಜು ಆವರಣದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.  

ವಿದ್ಯಾರ್ಥಿಗಳಲ್ಲಿ ನೇತ್ರ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದು ಹಾಗೂ ದೃಷ್ಟಿ ಸಂಬಂಧಿತ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸುವ ಉದ್ದೇಶದಿಂದ ಶಿಬಿರ ಹಮ್ಮಿಕೊಳ್ಳಲಾಗಿತ್ತು. ತಜ್ಞ ಸಿಬ್ಬಂದಿ ವಿದ್ಯಾರ್ಥಿಗಳ ದೃಷ್ಟಿ ಪರೀಕ್ಷೆ ನಡೆಸಿ, ಕಣ್ಣಿನ ಆರೋಗ್ಯದ ಕುರಿತು ಅಗತ್ಯ ಸಲಹೆ ಮತ್ತು ಮಾರ್ಗದರ್ಶನ ನೀಡಿದರು.  

ಶ್ರೀ ಜಿ.ಎಚ್‌. ಮೆಹರವಾಡೆ ಕಣ್ಣಿನ ಆರೈಕೆ ಕೇಂದ್ರದ ಸಿಬ್ಬಂದಿಗಳಾದ ರೋಹಿಣಿ ಕಟ್ಟಿಮನಿ, ಕೌಸರ್ ಬಾನು ಬುಗುರ್, ಭೀಮವ್ವ ಯಲಿಶಿರುಂದ ಹಾಗೂ ಚೈತ್ರಾ ಇಳಗೇರ ಅವರು ಶಿಬಿರವನ್ನು ಅಚ್ಚುಕಟ್ಟಾಗಿ ಹಾಗೂ ಆತ್ಮೀಯವಾಗಿ ನಡೆಸಿಕೊಟ್ಟರು. ವಿದ್ಯಾರ್ಥಿಗಳೊಂದಿಗೆ ಸೌಹಾರ್ದಯುತವಾಗಿ ವರ್ತಿಸಿ, ನೇತ್ರ ತಪಾಸಣೆಯನ್ನು ಪರಿಣಾಮಕಾರಿಯಾಗಿ ಕೈಗೊಂಡರು.  

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ. ಎ.ಕೆ. ಮಠ, ಯೂತ್ ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿ ಚಂದಲಿಂಗಪ್ಪ ಹಳ್ಳಿಕೇರಿ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ. ರಾಮಚಂದ್ರ ಪಡೆಸೂರ ಹಾಗೂ ಶ್ರೀಮತಿ ವೀಣಾ ತಿರ್ಲಾಪುರ ಉಪಸ್ಥಿತರಿದ್ದು, ಶಿಬಿರದ ಯಶಸ್ವಿ ಆಯೋಜನೆಗೆ ಮಾರ್ಗದರ್ಶನ ಮತ್ತು ಸಹಕಾರ ನೀಡಿದರು.  

ಕಾಲೇಜಿನ ಯೂತ್ ರೆಡ್ ಕ್ರಾಸ್ ಹಾಗೂ ಎನ್‌ಎಸ್‌ಎಸ್ ಸ್ವಯಂಸೇವಕರು ಶಿಬಿರದ ವ್ಯವಸ್ಥೆ ಮತ್ತು ನಿರ್ವಹಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. 140ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದರು.  ವಿದ್ಯಾರ್ಥಿಗಳ ಆರೋಗ್ಯ ಮತ್ತು ಕಲ್ಯಾಣದ ದೃಷ್ಟಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರವು ಅತ್ಯಂತ ಉಪಯುಕ್ತ ಕಾರ್ಯಕ್ರಮವಾಗಿ ಪರಿಣಮಿಸಿತು.