ಕೊಪ್ಪಳದಲ್ಲಿ ನಾಲ್ಕು ದಿನಗಳ ಸಾಂಸ್ಕೃತಿಕ ಮಹೋತ್ಸವ : ಡಾ ಹಿರೇಮಠ ಸರ್ವಾಧ್ಯಕ್ಷ

ಕೊಪ್ಪಳದಲ್ಲಿ ನಾಲ್ಕು ದಿನಗಳ ಸಾಂಸ್ಕೃತಿಕ ಮಹೋತ್ಸವ : ಡಾ ಹಿರೇಮಠ ಸರ್ವಾಧ್ಯಕ್ಷ Four-day cultural festival in Koppal: Dr Hiremath presided over

ಲೋಕದರ್ಶನ ವರದಿ 

                                                       ಮೇ 7 ರಿಂದ 10ರವರೆಗೆ ಮಕ್ಕಳ 12ನೇ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ 

      ಕೊಪ್ಪಳ: 09:  ಜಿಲ್ಲೆಯ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಕೊಪ್ಪಳ ಜಿಲ್ಲಾ ಪ್ರವಾಸೋದ್ಯಮ ಸಪ್ತಾಹ, ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ 12ನೇ ಸಮ್ಮೇಳನ ಹಾಗೂ 75ನೇ ಸಾಂಸ್ಕೃತಿಕ ಕಲಾ ಪ್ರತಿಭೋತ್ಸವವು ಮೇ 7 ರಿಂದ 10ರವರೆಗೆ ನಾಲ್ಕು ದಿನಗಳ ಕಾಲ ಭವ್ಯವಾಗಿ ಜರುಗಲಿವೆ ಎಂದು ಪತ್ರಕರ್ತ, ಚಲನಚಿತ್ರ ನಿರ್ದೇಶಕ ಹಾಗೂ ಅಧ್ಯಕ್ಷರಾದ ರಮೇಶ್ ಸರ್ವೆ ತಿಳಿಸಿದರು. 

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ಶ್ರೀ ಮಳೆಮಲ್ಲೇಶ್ವರ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ಮೇ 7 ರಿಂದ 10ರವರೆಗೆ ಪ್ರತಿದಿನ ಬೆಳಗ್ಗೆ 9 ರಿಂದ ರಾತ್ರಿ 9.30 ರವರೆಗೆ ನಡೆಯಲಿರುವ ಈ ಕಾರ್ಯಕ್ರಮಗಳು ಕೊಪ್ಪಳ ತಾಲ್ಲೂಕಿನ ಬಿಸರಹಳ್ಳಿಯ ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹಿರೇಮಠ ಅವರ ಸರ್ವಾಧ್ಯಕ್ಷತೆಯಲ್ಲಿ ಜರುಗಲಿವೆ. 

ಈ ಬಾರಿ ಮಕ್ಕಳ ಸಮ್ಮೇಳನದ ರೂಪರೇಷೆಯಲ್ಲಿ ವಿಶೇಷ ಬದಲಾವಣೆಗಳನ್ನು ಮಾಡಲಾಗಿದ್ದು, 12ನೇ ಸಮ್ಮೇಳನದ ಅಂಗವಾಗಿ ಹಲವು ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದಶಕದ ಶ್ರೇಷ್ಠ ಕಾದಂಬರಿ ಸ್ಪರ್ಧೆ ಹಾಗೂ 15 ವರ್ಷದೊಳಗಿನ ಮಕ್ಕಳಿಂದ ರಚಿತವಾದ ಸಾಹಿತ್ಯ ಕೃತಿಗಳ ಸ್ಪರ್ಧೆಯನ್ನು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲಾಗಿದೆ. 

ಸಪ್ತಾಹದ ಅಂಗವಾಗಿ ಪ್ರತಿದಿನ ಸಂಜೆ 5.30ರಿಂದ 9.30ರವರೆಗೆ ವಿಚಾರ ಸಂಕಿರಣಗಳು ನಡೆಯಲಿದ್ದು, 16 ಜನ ಖ್ಯಾತ ಸಾಹಿತಿಗಳು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ಜೊತೆಗೆ ಕೊಪ್ಪಳ ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು ಪ್ರತಿ ದಿನ ಐದು ಮಂದಿ ತಜ್ಞರು ಮಾಹಿತಿ ಹಂಚಿಕೊಳ್ಳಲಿದ್ದಾರೆ. 

ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಪ್ರತಿದಿನ ಸಂಜೆ 4ರಿಂದ 5ರವರೆಗೆ ರಾಜ್ಯಮಟ್ಟದ ಗಾಯಕರು ಸಂಗೀತ ಕಾರ್ಯಕ್ರಮ ನೀಡಲಿದ್ದು, ನಾಲ್ಕು ದಿನಗಳಲ್ಲಿ 100ಕ್ಕೂ ಹೆಚ್ಚು ನೃತ್ಯ ಕಲಾವಿದರು ವೈವಿಧ್ಯಮಯ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಜನಪದ, ಭಕ್ತಿ, ಸುಗಮ ಹಾಗೂ ಚಿತ್ರಗೀತೆಗಳ ಗಾಯನದಲ್ಲಿ 50ಕ್ಕೂ ಹೆಚ್ಚು ಗಾಯಕರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. 

ಸಂಘಟಕ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಮಕ್ಕಳ ಪ್ರತಿಭೆ ಪ್ರೋತ್ಸಾಹಿಸುವ ಉದ್ದೇಶದಿಂದ ಐದು ಪ್ರತಿಭಾವಂತ ಮಕ್ಕಳನ್ನು ಆಯ್ಕೆ ಮಾಡಲಾಗಿದ್ದು, ಇವರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಜೊತೆಗೆ ಜ್ಯೂನಿಯರ್ ಶಂಕರನಾಗ್ ಮತ್ತು ಜ್ಯೂನಿಯರ್ ರವಿಚಂದ್ರನ್ ಮನರಂಜನಾ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. 

ಕಾರ್ಯಕ್ರಮವನ್ನು ಪ್ರವಾಸೋದ್ಯಮ ಸಚಿವರಾದ ಎಚ್‌.ಕೆ. ಪಾಟೀಲ್ ಉದ್ಘಾಟಿಸಲಿದ್ದು, ಸ್ವಾಗತ ಸಮಿತಿ ಅಧ್ಯಕ್ಷರಾಗಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹಾಗೂ ಗೌರವಾಧ್ಯಕ್ಷರಾಗಿ ಡಾ. ಶೇಖರಗೌಡ ಮಾಲಿಪಾಟೀಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ಮಹೋತ್ಸವದಲ್ಲಿ ಸುಮಾರು 400ಕ್ಕೂ ಹೆಚ್ಚು ರಾಜ್ಯಮಟ್ಟದ ಕಲಾವಿದರು ವಿವಿಧ ಕಲಾ ಪ್ರದರ್ಶನಗಳನ್ನು ನೀಡಲಿದ್ದು, ದೇವಸ್ಥಾನದ ಅಂಗಳದಲ್ಲಿ ವ್ಯಂಗ್ಯಚಿತ್ರ, ಕರಕುಶಲ, ಪುಸ್ತಕ ಹಾಗೂ ಛಾಯಾಚಿತ್ರ ಪ್ರದರ್ಶನಗಳು ಕೂಡ ಜರುಗಲಿವೆ. 

ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಪ್ರತಿದಿನ ಮಧ್ಯಾಹ್ನ ಅನ್ನಪ್ರಸಾದ ಮತ್ತು ಸಿಹಿ ವ್ಯವಸ್ಥೆ ಮಾಡಲಾಗಿದೆ. ಇದೇ ವೇಳೆ ನಮ್ಮ ಊರು  ನಮ್ಮ ಜಿಲ್ಲೆ ವಿಷಯದ ಮೇಲೆ ಕವನ ಹಾಗೂ ಪ್ರವಾಸಿ ತಾಣಗಳ ಕುರಿತ ಲೇಖನಗಳನ್ನು ಕಳುಹಿಸುವಂತೆ ಲೇಖಕರಿಗೆ ಆಹ್ವಾನ ನೀಡಲಾಗಿದೆ. ಆಯ್ಕೆಯಾದ ಲೇಖನಗಳನ್ನು ಸುಮಾರು 600 ಪುಟಗಳ ಪ್ರವಾಸಿ ಸಾಹಿತ್ಯ ಕೈಪಿಡಿಯಾಗಿ ಪ್ರಕಟಿಸುವ ಯೋಜನೆ ರೂಪಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಉಮೇಶ್ ಸುರ್ವೆ ಉಪಸ್ಥಿತರಿದ್ದರು.