ಜೆಸ್ಕಾಂ ಕಾರ್ಯ ಮತ್ತು ಪಾಲನಾ ವೃತ್ತ ಕಚೇರಿ ಸಂಕೀರ್ಣ ಕಟ್ಟಡದ ಶಂಕುಸ್ಥಾಪನೆ ಸಮಾರಂಭ

ಜೆಸ್ಕಾಂ ಕಾರ್ಯ ಮತ್ತು ಪಾಲನಾ ವೃತ್ತ ಕಚೇರಿ ಸಂಕೀರ್ಣ ಕಟ್ಟಡದ ಶಂಕುಸ್ಥಾಪನೆ ಸಮಾರಂಭ Foundation stone laying ceremony of GESCOM Operations and Maintenance Circle Office Complex building


        ಕೊಪ್ಪಳ 14:   ಜೆಸ್ಕಾಂ ಇಲಾಖೆಯ ಸೇವೆಗಳು ಜನರ ದೈನಂದಿನ ಜೀವನದಲ್ಲಿ ಅತ್ಯಂತ ಪ್ರಮುಖವಾಗಿದ್ದು, ಹೊಸ ಕಚೇರಿ ಸಂಕೀರ್ಣ ನಿರ್ಮಾಣದಿಂದ ಸಾರ್ವಜನಿಕರಿಗೆ ವೇಗವಾದ ಮತ್ತು ಪರಿಣಾಮಕಾರಿ ವಿದ್ಯುತ್ ಸೇವೆ ದೊರೆಯಲಿದೆ ಎಂದು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು. 

ಶನಿವಾರದಂದು ನಗರದ 110/33/11 ಕೆ.ವಿ ವಿದ್ಯುತ್ ಉಪಕೇಂದ್ರದ ಆವರಣದಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪಳ ನಗರದಲ್ಲಿ ಅಂದಾಜು ರೂ.1950 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಜೆಸ್ಕಾಂ ಕಾರ್ಯ ಮತ್ತು ಪಾಲನಾ ವೃತ್ತ ಕಚೇರಿ ಸಂಕೀರ್ಣ ಕಟ್ಟಡದ ಶಂಕುಸ್ಥಾಪನೆ ಸಮಾರಂಭದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. 

ಬಹಳ ವರ್ಷಗಳಿಂದ ಕೊಪ್ಪಳದಲ್ಲಿ ಜೆಸ್ಕಾಂ ಸರ್ಕಲ್ ಕಚೇರಿ ಸ್ಥಾಪನೆಯಾಗಬೇಕು ಎಂಬುದು ಇಲಾಖೆಯ ಸಿಬ್ಬಂದಿ ಹಾಗೂ ಜಿಲ್ಲೆಯ ಜನರ ಬಹುದಿನಗಳ ಆಶಯವಾಗಿತ್ತು. ಇದೀಗ ಸುಮಾರು ರೂ.19 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣವಾಗುತ್ತಿರುವುದು ಸಂತಸದ ವಿಷಯವಾಗಿದೆ. ನೂತನ ವೃತ್ತ ಕಚೇರಿ ಸಂಕೀರ್ಣದಿಂದ ಜಿಲ್ಲೆಯ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ಈ ಮೊದಲು ಜೆಸ್ಕಾಂ ಕಾರ್ಯಚಟುವಟಿಕೆಗಳು ಮುನಿರಾಬಾದ್ ಹಾಗೂ ರಾಯಚೂರಿನಲ್ಲಿ ಪ್ರಮುಖವಾಗಿ ನಡೆಯುತ್ತಿದ್ದವು. ಈಗ ಕೊಪ್ಪಳದಲ್ಲೇ ವೃತ್ತ ಕಚೇರಿ ಸ್ಥಾಪನೆಯಾಗುತ್ತಿರುವುದು ಜಿಲ್ಲೆಯ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಲಿದೆ ಎಂದು ಹೇಳಿದರು. 

ತುಂಗಭದ್ರಾ ನದಿಯ ಎಡದಂಡೆಯಲ್ಲಿ ನಮ್ಮ ಜಿಲ್ಲೆ ಇದೆ. ಜಿಲ್ಲೆಯಲ್ಲಿ ನೀರಾವರಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಸಿಂಗಟಾಲೂರು ಏತ ನೀರಾವರಿ ಹಾಗೂ ವಿವಿಧ ನೀರಾವರಿ ಯೋಜನೆಗಳ ಮೂಲಕ ಈ ವರ್ಷದಲ್ಲಿ ಸುಮಾರು ರೂ.1052 ಕೋಟಿ ವೆಚ್ಚದಲ್ಲಿ 78 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಕಾರ್ಯ ನಡೆಯುತ್ತಿದೆ. ಒಟ್ಟು ಸುಮಾರು 1 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. 

ನೀರಾವರಿ ವಿಸ್ತರಣೆಗೆ ಪೂರಕವಾಗಿ ರೈತರಿಗೆ ವಿದ್ಯುತ್ ಪೂರೈಕೆ ಅಗತ್ಯವಾಗಿದ್ದು, ಈಗಾಗಲೇ ಮೂರು ಹೊಸ ಸಬ್‌ಸ್ಟೇಷನ್‌ಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಗೊಂಡಬಾಳ, ನೆಲೋಗಿಪುರ ಹಾಗೂ ಚಿಲವಾಡಗಿ ಸೇರಿದಂತೆ ಇನ್ನೂ ಮೂರು ಸಬ್‌ಸ್ಟೇಷನ್‌ಗಳನ್ನು ನಗರ ಪ್ರದೇಶದಲ್ಲಿ ನಿರ್ಮಿಸಲು ಸಚಿವ ಕೆ.ಜೆ. ಜಾರ್ಜ್‌ ಅವರಿಗೆ ಮನವಿ ಮಾಡಲಾಗಿದೆ.

           ಕೊಪ್ಪಳ ನಗರದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು 24*7 ರೀತಿಯಲ್ಲಿ ಒದಗಿಸಲು ಪ್ರತ್ಯೇಕ ಫೀಡರ್ ವ್ಯವಸ್ಥೆ ಕಲ್ಪಿಸುವ ಕುರಿತು ಚರ್ಚೆ ನಡೆಸಲಾಗಿದೆ. ಮನೆ ಮನೆಗಳಿಗೆ ನೀರಿನ ಸಂಪರ್ಕ ಒದಗಿಸಲು ಸುಮಾರು ರೂ.125 ಕೋಟಿ ಅನುದಾನ ಮಂಜೂರಾಗಿದೆ. ತಾಲೂಕು ಮಿನಿ ಸೌಧ ನಿರ್ಮಾಣಕ್ಕೂ ಸುಮಾರು ರೂ.18 ಕೋಟಿ ವೆಚ್ಚದ ಅನುಮೋದನೆ ದೊರೆತಿದ್ದು, ನಗರದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು. 

ಈ ಹೊಸ ಜೆಸ್ಕಾಂ ಕಚೇರಿ ಸಂಕೀರ್ಣವು ಕೊಪ್ಪಳ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲು ಸಹಕಾರಿಯಾಗಲಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಅನುಕೂಲವಾಗಲಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು. 

ಕೊಪ್ಪಳ ಸಂಸದರಾದ ಕೆ.ರಾಜಶೇಖರ ಹಿಟ್ನಾಳ ಅವರು ಮಾತನಾಡಿ, ನಿರಂತರ ಜ್ಯೋತಿ ಬಂದ ಮೇಲೆ ವಿದ್ಯಾರ್ಥಿಗಳಿಗೆ, ರೈತರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಹಾಗೆ ಜೆಸ್ಕಾಂ ಸಿಬ್ಬಂದಿಗಳು ಮತ್ತು ಪವರ್‌ಮೆನ್‌ಗಳು ಬಹಳ ನಿಷ್ಠೆಯಿಂದ ವಿದ್ಯುತ್ ಪೂರೈಕೆ ಮಾಡಿದ್ದೀರಿ. ಹೊಸ ಕಟ್ಟಡ ನಿರ್ಮಾಣದಿಂದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಗತ್ಯವಾದ ಸೌಲಭ್ಯಗಳು ದೊರೆಯಲಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಸಹಕಾರಿಯಾಗಲಿದೆ ಎಂದರು. 

ಕಾರ್ಯಕ್ರಮದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ, ಜೆಸ್ಕಾಂ ಬಳ್ಳಾರಿಯ ಕಾರ್ಯ ಮತ್ತು ಪಾಲನಾ ವಲಯದ ಮುಖ್ಯ ಇಂಜಿನಿಯರ್ ಮೌನೇಶ್ ಎಸ್‌.ಪತ್ತಾರ್, ಜೆಸ್ಕಾಂ ಕೊಪ್ಪಳ ಕಾರ್ಯ ಮತ್ತು ಪಾಲನಾ ವೃತ್ತದ ಅಧೀಕ್ಷಕ ಇಂಜಿನಿಯರ್ ರಮೇಶ್ ಎಚ್‌., ಜೆಸ್ಕಾಂ ಬಳ್ಳಾರಿಯ ಕಾರ್ಯ ಮತ್ತು ಪಾಲನಾ ವಲಯದ ಕಾರ್ಯನಿರ್ವಾಹಕ ಇಂಜಿನಿಯರ್ ಖಾಜಾ ಮೈನುದ್ದೀನ್, ಜೆಸ್ಕಾಂ ಕೊಪ್ಪಳದ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ ಮೋಟ್ಲ ನಾಯ್ಕ ಎಂ., ನೌಕರರ ಸಂಘದ ಉಪಾಧ್ಯಕ್ಷ ಜೆ.ಎಸ್‌. ಗೋಪಿ, ಜೆಸ್ಕಾಂ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.