ಕನ್ನಡ ಭವನವನ್ನು ಸರಕಾರದ ವಶಕ್ಕೆ ಪಡೆಯಲು ಸಮಾನ ಮನಸ್ಕ ಕನ್ನಡ ಸಂಘಟನೆಗಳ ವೇದಿಕೆ ಮನವಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರ ವಿರುದ್ಧ ಕ್ರಮಕೈ ಒತ್ತಾಯ

ಕನ್ನಡ ಭವನವನ್ನು ಸರಕಾರದ ವಶಕ್ಕೆ ಪಡೆಯಲು ಸಮಾನ ಮನಸ್ಕ ಕನ್ನಡ ಸಂಘಟನೆಗಳ ವೇದಿಕೆ ಮನವಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರ ವಿರುದ್ಧ ಕ್ರಮಕೈ ಒತ್ತಾಯ Forum of like-minded Kannada organizations appeals to take Kannada Bhavan into government's custody,

ಲೋಕದರ್ಶನ ವರದಿ 

         ಬೆಳಗಾವಿ, 06 : ಬೆಳಗಾವಿಯ ನೆಹರೂ ನಗರದಲ್ಲಿ ಸರಕಾರದ ಅನುದಾನದಲ್ಲಿ, ಪಾಲಿಕೆಯ ಜಾಗೆಯಲ್ಲಿ ನಿರ್ಮಿಸಿದ ಕನ್ನಡ ಭವನವನ್ನು ಸರಕಾರದ ವಶಕ್ಕೆ ಪಡೆಯುವ ಹಾಗೂ ಈ ವಿಷಯದಲ್ಲಿ ಸರಕಾರಕ್ಕೆ ತಪ್ಪು ಮಾಹಿತಿ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರ ವಿರುದ್ಧ ಕ್ರಮಕೈಕೊಳ್ಳುವಂತೆ ಸಮಾನ ಮನಸ್ಕ ಕನ್ನಡ ಸಂಘಟನೆಗಳ ವೇದಿಕೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿಯೊಂದನ್ನು ಸಲ್ಲಿಸಿದರು. 

ಸೋಮವಾರ ಅಪರ್ ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿದ ಪದಾಧಿಕಾರಿಗಳು ಈ ಕುರಿತು ಮನವಿಯೊಂದನ್ನು ಸಲ್ಲಿಸಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 2.99 ಕೋಟ ರೂ.ಗಳ ಹಾಗೂ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ 3.27 ಕೋಟಿ ರೂ.ಗಳ ಅನುದಾನದಲ್ಲಿ ಕನ್ನಡ ಭವನವನ್ನು ನಿರ್ಮಾಣ ಮಾಡಲಾಗಿದೆ. ಈ ಭವನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರು ಖಾಸಗಿ ಸಂಘವೊಂದಕ್ಕೆ ಹಸ್ತಾಂತರಿಸಿದ್ದಾರೆ. ಈ ಬಗ್ಗೆ ದಿ.06-05-2025ರಂದು ನಡೆದ ಗಡಿ ಪ್ರಾಧಿಕಾರದ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಕನ್ನಡ ಭವನವನ್ನು ನಿರ್ವಹಿಸಲು ಅಧಿಕಾರಿಗಳ ಸಮಿತಿಯೊಂದನ್ನು ರಚಿಸಲು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಯಿತು. ಅದರಂತೆ ದಿ.24-06-2025ರಂದು ಜಿಲ್ಲಾಧಿಕಾರಿಗಳು ತಮ್ಮ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದರು.  

        ಆದರೆ ಕನ್ನಡ ಭವನವನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಸುದೀರ್ಘವಾದ ವಿಳಂಬವಾಯಿತು. ದಿ. 28-11-2025ರಂದು ಹೈಕೋರ್ಟನ ಧಾರವಾಡ ಪೀಠವು ಜಿಲ್ಲಾಧಿಕಾರಿಗಳ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಕನ್ನಡ ಭವನದ ವಿಷಯದಲ್ಲಿ ಕಸಾಪ ಜಿಲ್ಲಾಧ್ಯಕ್ಷರು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ದಿ. 26-11-2025ರಂದು ಪತ್ರ ಬರೆದು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ. ಇದು ಅತ್ಯಂತ ಗಂಭೀರ ವಿಷಯವಾಗಿದೆ. ಅಧ್ಯಕ್ಷರು, ಗಡಿ ಅಭಿವೃದ್ಧಿ ಪ್ರಾಧಿಕಾರ ಇವರ ಆದೇಶ ಸಂಖ್ಯೆ ಕಗ​‍್ರಾಪ್ರ 47/12019- 2020 ದಿ. 15-04-2023ರ ಪ್ರಕಾರ 16 ಜನ ಸದಸ್ಯರ ಉಸ್ತುವಾರಿ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ಕನ್ನಡ ಸಾಂಸ್ಕೃತಿಕ ಭವನ ಕ್ಷೇಮಾಭಿವೃದ್ಧಿ ಸಂಘಕ್ಕೆ ಕನ್ನಡ ಭವನವನ್ನು ಹಸ್ತಾಂತರಿಸಲು ಪ್ರಾಧಿಕಾರದ ಆದೇಶವನ್ನು ಉಲ್ಲೇಖಿಸಿದ್ದಾರೆ. ಅಚ್ಚರಿ ಎಂದರೆ ಪ್ರಾಧಿಕಾರವು ಈ ಸಂಬಂಧ ಯಾವುದೇ ನಿರ್ಣಯ ಕೈಕೊಂಡಿಲ್ಲ.  

        ಯಾವುದೇ ಅಧಿಕೃತ ಆದೇಶವನ್ನು ನೀಡಿಲ್ಲ. ಈ ಖಾಸಗಿ ಸಂಘವು ಪ್ರಾಧಿಕಾರದ ಹಿಂದಿನ ಅಧ್ಯಕ್ಷರಿಗೆ ಸಲ್ಲಿಸಿದ ಉಸ್ತುವಾರಿ ಸಮಿತಿಯ ಪಟ್ಟಿಯನ್ನು ಅಧ್ಯಕ್ಷರು ಜಿಲ್ಲಾಧಿಕಾರಿಗಳಿಗೆ ರವಾನಿಸಿದ್ದರು. ಜಿಲ್ಲಾಧಿಕಾರಿಗಳು ಈ ಸಂಬಂಧ ಯಾವುದೇ ಆದೇಶವನ್ನು ಮಾಡಿಲ್ಲ. ಸರಕಾರ ನಿರ್ಮಿಸಿದ ಯಾವುದೇ ಭವನವನ್ನು ಖಾಸಗಿಯರಿಗೆ ಹಸ್ತಾಂತರಿಸುವ ಅಧಿಕಾರ ರಾಜ್ಯ ಸರಕಾರಕ್ಕೆ ಮಾತ್ರ ಇದೆಯೇ ಹೊರತು ಉಳದವರಿಗೆ ಇಲ್ಲ.  

         ಈ ಸಂಬಂಧದಲ್ಲಿ ತಾವು ಕಾರ್ಯದರ್ಶಿಗಳು, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕರ ಬೆಂಗಳೂರು ಇವರಿಗೆ ಪತ್ರ ಬರೆದು ವಾಸ್ತವಾಂಶವನ್ನು ಪಡೆಯಬಹುದಾಗಿದೆ. ಕನ್ನಡ ಭವನದ ಸಂಬಂಧ ಗಡಿ ಅಭಿವೃದ್ಧಿ ಪ್ರಾಧಿಕಾರವು ದಿ.06-05-2025ರಂದು ಸುದೀರ್ಘವಾಗಿ ಚರ್ಚಿಸಿತು. ಪ್ರಾಧಿಕಾರದ ಯಾವುದೇ ಆದೇಶ ಅಥವಾ ನಿರ್ಣಯ ಆಗದೇ ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಅವರು ಸುಳ್ಳು ಮಾಹಿತಿಯನ್ನು ಸರಕಾರಕ್ಕೆ ನೀಡಿದ್ದನ್ನು ಮತ್ತು ಪ್ರಾಧಿಕಾರದ ಹೆಸರನ್ನು ದುರುಪಯೋಗ ಪಡಿಸಿಕೊಂಡಿದ್ದನ್ನು ಸಭೆಯು ಗಂಭೀರವಾಗಿ ಪರಿಗಣಿಸಿತು.  

         ದಿ.02-06-2025 ರಂದು ಬೆಳಗಾವಿ ಜಿಲ್ಲಾಧಿಕಾರಿಗಳಗೆ ಈ ಸಂಬಂಧ ಆದೇಶ ನೀಡಿತು. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಬೆಳಗಾವಿ ಇವರು ಕನ್ನಡ ಭವನವನ್ನು ಜಿಲ್ಲಾಧಿಕಾರಿಗಳು, ಬೆಳಗಾವಿ ಇವರಿಗೆ ಅಧಿಕೃತವಾಗಿ ಹಸ್ತಾಂತರಿಸಿದ್ದಾರೆ. ಅಂದರೆ ಕನ್ನಡ ಭವನವು ಸದ್ಯದ ಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳ ವಶದಲ್ಲಿದೆ. ಆದ್ದರಿಂದ ಕನ್ನಡ ಭವನವನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಅಧಿಕಾರಿಗಳ ಉಸ್ತುವಾರಿ ಸಮಿತಿಯ ಭೌತಿಕವಾಗಿ ಪಡೆಯಬೇಕು. ಈ ಮಧ್ಯೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ಆಯುಕ್ತರು ಮಹಾನಗರ ಪಾಲಿಕೆ ಇವರ ದಿ.17-01-2026ರಂದು ಮೊದಲನೆಯ ನೋಟೀಸು ಹಾಗೂ ದಿ.09-02-2026ರಂದು ಎರಡನೆಯ ನೋಟೀಸನ್ನು ಜಿಲ್ಲಾ ಕಸಾಪ ಅಧ್ಯಕ್ಷರಿಗೆ ನೀಡಿದ್ದರು. ಆದರೆ ಅವರು ಎರಡೂ ನೋಟೀಸುಗಳಿಗೆ ಉತ್ತರ ನೀಡಿಲ್ಲ.  

         ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಾವು ಕನ್ನಡ ಭವನವನ್ನು ಸರಕಾರದ ವಶಕ್ಕೆ ತೆಗೆದುಕೊಳ್ಳಬೇಕು. ನ್ಯಾಯಾಲಯದ ತಡೆಯಾಜ್ಞೆ ಇನ್ನೂ ಜಾರಿಯಲ್ಲಿದ್ದರೆ ಅದನ್ನು ತೆರವುಗೊಳಿಸಲು ಗಂಭೀರವಾದ ಪ್ರಯತ್ನಗಳನ್ನು ತುರ್ತಾಗಿ ಮಾಡುವ ಅವಶ್ಯಕತೆಯಿದೆ. ಸರಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಗಡಿ ಅಭಿವೃದ್ಧಿ ಪ್ರಾಧಿಕಾರದ ಬಗ್ಗೆ ತಪ್ಪು ಹಾಗೂ ಸುಳ್ಳು ಮಾಹಿತಿಯನ್ನು ನೀಡಿದ ಕಸಾಪ ಜಿಲ್ಲಾಧ್ಯಕ್ಷರ ಕ್ರಮವನ್ನು ನ್ಯಾಯಾಲಯದ ಗಮನಕ್ಕೆ ತರಬೇಕು. ಮಹಾನಗರ ಪಾಲಿಕೆಯ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ವರದಿ ಹಾಗೂ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿಗಳು ನೀಡಿದ ನೋಟೀಸು ಕನ್ನಡ ಭವನವನ್ನು ವಶಕ್ಕೆ ತೆಗೆದುಕೊಳ್ಳುವಲ್ಲ ಜಿಲ್ಲಾಡಳಿತಕ್ಕೆ ಸಾಕಷ್ಟು ಬಲವನ್ನು ತುಂಬುತ್ತವೆ ಜಿಲ್ಲಾಡಳಿತಕ್ಕೆ ನೀಡಲಾದ ಮನವಿಯಲ್ಲಿ ವಿವರಿಸಲಾಗಿದೆ.