ಮಾಜಿ ಶಾಸಕ ಅರುಣಕುಮಾರ್ ಪೂಜಾರ್ ಜನ್ಮದಿನೋತ್ಸವ: ಆ.25ರಂದು ವಿವಿಧ ಕಾರ್ಯಕ್ರಮ

ಮಾಜಿ ಶಾಸಕ ಅರುಣಕುಮಾರ್ ಪೂಜಾರ್ ಜನ್ಮದಿನೋತ್ಸವ: ಆ.25ರಂದು ವಿವಿಧ ಕಾರ್ಯಕ್ರಮ  Former MLA Arunkumar Pujar's Birthday: Various Programs on August 25


ರಾಣೆಬೆನ್ನೂರು, ಆ.23: ರಾಣೆಬೆನ್ನೂರು ತಾಲೂಕಿನ ಅಭಿವೃದ್ಧಿಯ ಹರಿಕಾರ ಎಂದು ಗುರುತಿಸಿಕೊಂಡಿರುವ ಮಾಜಿ ಶಾಸಕ ಅರುಣಕುಮಾರ್ ಪೂಜಾರ್ ಅವರ 49ನೇ ಹುಟ್ಟುಹಬ್ಬದ ಅಂಗವಾಗಿ ಆಗಸ್ಟ್‌ 25ರಂದು ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಮಂಜುನಾಥ ಕಾಟಿ ತಿಳಿಸಿದರು.  

ನಗರದ ಪಕ್ಷದ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಬಾರಿಯೂ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಬಳಗದ ವತಿಯಿಂದ ಯಾವುದೇ ಆಡಂಬರವಿಲ್ಲದೆ ಸರಳವಾಗಿ ಹಾಗೂ ಸಾಮೂಹಿಕವಾಗಿ ಜನ್ಮದಿನೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದರು.  

ಆಗಸ್ಟ್‌ 25ರಂದು ಸಂಜೆ 4 ಗಂಟೆಗೆ ಬಿಜೆಪಿ ಕಚೇರಿ ಆವರಣದಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದ್ದು, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಮೇಶಪ್ಪ ಗೂಳಣ್ಣನವರ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ವಾಗತ ಸಮಿತಿ ಅಧ್ಯಕ್ಷ ರಮೇಶ ಗುತಲ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.  

ವಿವಿಧ ಸೇವಾ ಕಾರ್ಯಕ್ರಮ  

ಅರುಣಕುಮಾರ್ ಪೂಜಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಬೆಳಗ್ಗೆ 8 ಗಂಟೆಯಿಂದ ನಗರದ ವಿವಿಧ ದೇವಸ್ಥಾನಗಳಾದ ಶ್ರೀ ಗಣೇಶ, ಚೌಡೇಶ್ವರಿ, ಅಂಬಾಭವಾನಿ, ಸಾಯಿಬಾಬಾ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು.  ಅಲ್ಲದೆ, ರೇಣುಕಾ ಯಲ್ಲಮ್ಮ ಕಿವುಡ ಮತ್ತು ಮೂಕ ಮಕ್ಕಳ ಶಾಲೆ ಹಾಗೂ ಸ್ನೇಹದೀಪ ಅಂಗವಿಕಲ ಮಕ್ಕಳ ಶಾಲೆಯಲ್ಲಿ ಲಘು ಉಪಾಹಾರ ವಿತರಿಸಲಾಗುವುದು. ಸರ್ಕಾರಿ ಮಹಿಳಾ ಹೆರಿಗೆ ಆಸ್ಪತ್ರೆ ಹಾಗೂ ಹಲಗೇರಿ ರಸ್ತೆಯ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ಮತ್ತು ಉಪಾಹಾರ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಗೋ ಶಾಲೆಯಲ್ಲಿ ಗೋವುಗಳಿಗೆ ಮೇವು ವಿತರಣೆ ಹಾಗೂ ಬಿಜೆಪಿ ಕಚೇರಿ ಆವರಣದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಮಂಜುನಾಥ ಕಾಟಿ ಹೇಳಿದರು.  

ಗಣ್ಯರ ಉಪಸ್ಥಿತಿ  

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಕಾರಜೋಳ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.  

ಸುದ್ದಿಗೋಷ್ಠಿಯಲ್ಲಿ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಿವಕುಮಾರ ನರಸಗೊಂಡರ, ನಗರಸಭಾ ಸದಸ್ಯರಾದ ಪ್ರಕಾಶ ಪೂಜಾರ್, ಮಣಿ ಪವಾರ್, ಮಲ್ಲಣ್ಣ ಅಂಗಡಿ, ಕೊಟ್ರೇಶ ಕೆಂಚಪ್ಪ, ರವಿ ತಳವಾರ, ಅಮೋಘ ಬದಾಮಿ, ಮೈಲಪ್ಪ ಗೋಣಿ ಬಸಮ್ಮನವರ, ಅಶೋಕ ಫಾಶಿಗಾರ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.