ಮಾಜಿ ಸಭಾಪತಿ ಎನ್‌. ತಿಪ್ಪಣ್ಣ ನಿಧನ: ಬಸವರಾಜ ಹೊರಟ್ಟಿ ಸಂತಾಪ

ಮಾಜಿ ಸಭಾಪತಿ ಎನ್‌. ತಿಪ್ಪಣ್ಣ ನಿಧನ: ಬಸವರಾಜ ಹೊರಟ್ಟಿ ಸಂತಾಪ Former Chairman N. Tippanna Passes away: Basavaraj Horatti condoles

ಹುಬ್ಬಳ್ಳಿ 11: ಸರಳ ಸಜ್ಜನ ಹಾಗೂ ನಿಷ್ಕಂಳಕ ವ್ಯಕ್ತಿತ್ವದ ರಾಜಕೀಯ ಮುತ್ಸದ್ದಿ, ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳಾಗಿದ್ದ  ಎನ್‌. ತಿಪ್ಪಣ್ಣ ಇವರ ನಿಧನಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.  

ತಮ್ಮ ಶೋಕ ಸಂದೇಶದಲ್ಲಿ ಅವರು ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪನವರ ರಾಜಕೀಯ ಗರಡಿಯಲ್ಲಿ ಪಳಗಿ, ಮೂರು ಬಾರಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ, ಹಂಗಾಮಿ ಸಭಾಪತಿಗಳಾಗಿ ಕರ್ತವ್ಯ ನಿರ್ವಹಿದ್ದ ಎನ್‌. ತಿಪ್ಪಣ್ಣ ಸಮಾಜ ಮುಖಿ ಚಿಂತನೆಗಳನ್ನು ಮೈಗೂಡಿಸಿಕೊಂಡು ಶಿಸ್ತು ಮತ್ತು ಶ್ರದ್ಧೆಯ ಮೂಲಕ ಉತ್ತಮ ಸಂಸದೀಯ ಪಟುವಾಗಿ ರಾಜ್ಯದ ಗಮನ ಸೆಳೆದಿದ್ದ ಧೀಮಂತ ರಾಜಕಾರಣಿ ಎಂದು ಬಸವರಾಜ ಹೊರಟ್ಟಿ ಬಣ್ಣಿಸಿದ್ದು, ವಿಧಾನ ಪರಿಷತ್ತಿನಲ್ಲಿ ತಮ್ಮೊಂದಿಗೆ ಎನ್‌. ತಿಪ್ಪಣ್ಣನವರು ಕಳೆದ ಸ್ಮರಣೀಯ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.   

ಸ್ವಾತಂತ್ರ್ಯ ಹೋರಾಟಗಾರರ ನೆಲೆಬೀಡು ಎಂದು ಖ್ಯಾತಿಗಳಿಸಿರುವ ಚಿತ್ರದುರ್ಗ ಜಿಲ್ಲೆಯ ತುರುವನೂರು ಗ್ರಾಮದಲ್ಲಿ ಜನಿಸಿ ಬಾಲ್ಯದಿಂದಲೇ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಎನ್‌. ತಿಪ್ಪಣ್ಣನವರು ಬಳ್ಳಾರಿಯಲ್ಲಿ ತಮ್ಮ ವಕೀಲಿ ವೃತ್ತಿ ಆರಂಭಿಸಿ ಕೆಲವೇ ದಿನಗಳಲ್ಲಿ ತಮ್ಮ ವೃತ್ತಿಯಲ್ಲಿ ಅಪಾರ ಜನಪ್ರಿಯತೆ ಗಳಿಸಿ ಖ್ಯಾತ ವಕೀಲರಾಗಿ ನಾಡಿಗೆ ಚಿರಪರಿಚಿತರಾದವರು, ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಚುಕ್ಕಾಣಿ ಹಿಡಿದು ಸುಮಾರು 46 ಕ್ಕೂ ಹೆಚ್ಚು ಕಾಲೇಜುಗಳನ್ನು ಬಳ್ಳಾರಿ ಭಾಗದಲ್ಲಿ ಆರಂಭಿಸಿ ಹಿಂದುಳಿದ ಜಿಲ್ಲೆಗಳ ಶೈಕ್ಷಣಿಕ ಪ್ರಗತಿಗೆ ಬಹುವಾಗಿ ಶ್ರಮಿಸಿದ್ದರು. ಹಲವು ಬಾರಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿಯೂ ಸಹ ಜವಾಬ್ದಾರಿ ನಿರ್ವಹಿಸಿ ಉತ್ತರ ಕರ್ನಾಟದ ಭಾಗದ ಶೈಕ್ಷಣಿಕ ಗುಣಮಟ್ಟದ ಸುಧಾರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಹೊರಟ್ಟಿರವರು ತಿಪ್ಪಣ್ಣನವರ ಶೈಕ್ಷಣಿಕ ಸೇವೆಯನ್ನು ಸ್ಮರಿಸಿದ್ದಾರೆ.   

ವಕೀಲರ ಸಂಘದ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದ ಎನ್‌. ತಿಪ್ಪಣ್ಣನವರು, ಸುಮಾರು 15 ವರ್ಷಗಳ ಕಾಲ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷರಾಗಿ ರಾಜ್ಯದ್ಯಾಂತ ಸಮಾಜವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಉತ್ತಮ ಸಂಸದೀಯ ಪಟು ಹಾಗೂ ಖ್ಯಾತ ವಾಗ್ಮಿಯಾಗಿದ್ದ ಅವರ ಸಮಾಜ ಮುಖಿ ಚಿಂತನೆಗಳು ಆಕರ್ಷಕ ವ್ಯಕ್ತಿತ್ವ, ಪ್ರಾಮಾಣಿಕತೆ ಹಾಗೂ ಸರಳತೆ ಗುಣಗಳು ಇಂದಿನ ಯುವ ರಾಜಕಾರಣಿಗಳಿಗೆ ಮಾರ್ಗದರ್ಶಿಯಾಗಿವೆ, ಇವರ ಅಗಲಿಕೆಯಿಂದ ರಾಜ್ಯವು ಕ್ರೀಯಾಶೀಲ ರಾಜಕಾರಣಿ, ಶಿಕ್ಷಣ ಪ್ರೇಮಿ, ಉತ್ತಮ ಸಮಾಜ ಸಂಘಟಕ ಹಾಗೂ ಹಿರಿಯ ಸಂಸದೀಯ ಪಟುವನ್ನು ಕಳೆದುಕೊಂಡಂತಾಗಿದೆ ಎಂದು ಕಂಬನಿ ಮಿಡಿದಿರುವ ಬಸವರಾಜ ಹೊರಟ್ಟಿ, ಅವರ ಅಭಿಮಾನಿಗಳು ಹಾಗೂ ಕುಟುಂಬ ವರ್ಗದವರಿಗೆ ಭಗವಂತ ಎನ್‌. ತಿಪ್ಪಣ್ಣ ಅವರ ಅಗಲಿಕೆ ದುಖಃವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.