ಮೆಲ್ಬರ್ನ್ ಜನವರಿ ಜ10 , ಆಸ್ಟ್ರೇಲಿಯದ ಅತ್ಯಂತ ಜನಭರಿತ ಆಗ್ನೇಯ ಭಾಗದತ್ತ ಬಿಸಿ ಗಾಳಿ ಮತ್ತೆ ಬೀಸಿದ್ದು, ಭಾರೀ ಪ್ರಮಾಣದ ಕಾಡ್ಗಿಚ್ಚುಗಳು ಹೊತ್ತಿಕೊಂಡು ಆತಂಕದ ಸನ್ನಿವೇಶ ನಿರ್ಮಾಣವಾಗಿದೆ.ಇದರಿಂದಾಗಿ ಹಲವಾರು ಪಟ್ಟಣಗಳು ಮತ್ತು ಗ್ರಾಮಗಳು ಕಾಡ್ಗಿಚ್ಚಿನ ತೊಂದರೆಗೆ ಒಳಗಾಗಿದ್ದು, ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಈ ವಲಯದ ಜನರಿಗೆ ಅಧಿಕಾರಿಗಳು ಎಚ್ಚರಿಕೆ ಮತ್ತು ನೋಟಿಸ್ ನೀಡಿದ್ದಾರೆ.ವಿಕ್ಟೋರಿಯ ರಾಜ್ಯದಾದ್ಯಂತ ಜನರಿಗೆ ವಿಪತ್ತು ನೋಟಿಸ್ಗಳನ್ನು ಕಳೆದ ವಾರ ನೀಡಲಾಗಿದ್ದು, ನೋಟಿಸ್ ಅವಧಿಯನ್ನು ಇನ್ನೂ ಎರಡು ದಿನಗಳ ಕಾಲ ವಿಸ್ತರಿಸಲಾಗಿದ್ದು ಅಪಾಯ ವಲಯದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆಯೂ ಸೂಚಿಸಲಾಗಿದೆ.ನೆರೆಯ ನ್ಯೂಸೌತ್ವೇಲ್ಸ್ ರಾಜ್ಯದಲ್ಲಿ, ಶುಕ್ರವಾರ ಪ್ರತಿಕೂಲ ಹವಾಮಾನ ಪರಿಸ್ಥಿತಿಯ ಬಗ್ಗೆ ಯೂ ಎಚ್ಚರಿಕೆಯಿಂದಿರುವಂತೆ ಅಧಿಕಾರಿಗಳು ನಾಗರಿಕರಿಗೆ ಸಂದೇಶ ರವಾನಿಸಿದ್ದಾರೆ. ಕಾಡಿನ ಬೆಂಕಿ ವ್ಯಾಪಿಸಿ, ಪರಿಸರದ ನಿವಾಸಿಗಳಿಗೆ ಗಂಭೀರ ಅಪಾಯ ತರುತ್ತಿದೆ ಎಂದು ವಿಕ್ಟೋರಿಯ ತುರ್ತು ಸೇವೆಗಳ ಸಚಿವೆ ಲೀಸಾ ನೆವಿಲ್ ಹೇಳಿದ್ದಾರೆ.ಕಾಡ್ಗಿಚ್ಚು ಈಗಾಗಲೇ ಆಸ್ಟ್ರೇಲಿಯದ 2.55 ಕೋಟಿ ಎಕರೆ ಜಮೀನನ್ನು ಹಾನಿ ಮಾಡಿದ್ದು 26 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ . ಸಾವಿರಾರು ಮಂದಿ ಮನೆ- ಮಠ ಕಳೆದುಕೊಂಡಿದ್ದಾರೆ.