ನಿರುಪಯುಕ್ತ ಕೊಳವೆ ಬಾವಿಗೆ: ವಿದ್ಯುತ್ ಸಂಪರ್ಕ ತಪ್ಪಿಸಿ. ಚಿಕ್ಕಮ್ಯಾಗೇರಿ ಗ್ರಾ.ಪಂ ಸಾಮಾನ್ಯ ಸಭೆ
ಯಲಬುರ್ಗಾ 22 : ಚಿಕ್ಕಮ್ಯಾಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕುಡಿಯುವ ನೀರಿನ ಕೊಳವೆ ಬಾವಿಗಳು ನಿರುಪಯುಕ್ತಗೊಂಡರು ಸಹ ಬಿಲ್ಲುಗಳ ಪಾವತಿ ನಿಲ್ಲುತ್ತಿಲ್ಲ. ಕೂಡಲೇ ನಿರುಪಯುಕ್ತ ಕೊಳವೆ ಬಾವಿಗಳ ಮಾಹಿತಿಯನ್ನು ಜೆಸ್ಕಾಂ ಇಲಾಖೆಗೆ ಮಾಹಿತಿ ನೀಡುವ ಮೂಲಕ ವಿದ್ಯುತ್ ಸಂಪರ್ಕ ತಪ್ಪಿಸಬೇಕಿದೆ ಎಂದು ಗ್ರಾ.ಪಂ ಅಧ್ಯಕ್ಷ ಶರಣಕುಮಾರ್ ಅಮರಗಟ್ಟಿ ಮನವಿ ಮಾಡಿದರು. ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾ.ಪಂ ಕೇಂದ್ರ ಸ್ಥಾನದಲ್ಲಿ 13 ಕೊಳವೆ ಬಾವಿ ಇದ್ದು, ಇದರಲ್ಲಿ 7 ಚಾಲ್ತಿ ಇದ್ದು, 6 ನಿರುಪಯುಕ್ತವಾಗಿವೆ. ಕುಡಗುಂಟಿ ಗ್ರಾಮದಲ್ಲಿ 10 ಕೊಳವೆ ಬಾವಿ ಪೈಕಿ 4 ಕಾರ್ಯನಿರ್ವಹಣೆ ಇದ್ದು, 6 ನಿರುಪಯುಕ್ತಗೊಂಡಿವೆ. ಮಲಕಸಮುದ್ರ ಗ್ರಾಮದಲ್ಲಿ ಒಟ್ಟು 7 ಕೊಳವೆ ಬಾವಿಗಳ ಪೈಕಿ 4 ಚಾಲ್ತಿ ಇದ್ದು, 3 ನಿರುಪಯುಕ್ತವಾಗಿದ್ದು, ಕುದ್ರಿಕೊಟಗಿ ಗ್ರಾಮದಲ್ಲಿ ಮಾತ್ರ 4 ಕ್ಕೆ 4 ಕಾರ್ಯ ನಿರ್ವಹಣೆಯಲ್ಲಿವೆ ಎಂಬುದು ಗ್ರಾ.ಪಂ ದಾಖಲೆಗಳಿಂದ ತಿಳಿದು ಬರಲಿದೆ. ಪ್ರತಿ ತಿಂಗಳಿಗೆ 7-8 ಸಾವಿರ ಪ್ರತಿ ಮೋಟಾರ್ ಬಿಲ್ಲುಗಳು ಬರುತ್ತಿವೆ. ಇದರಿಂದ ವಾರ್ಷಿಕವಾಗಿ ಸುಮಾರು 14-15 ಲಕ್ಷ ಪಂಚಾಯತಿಗೆ ಹೊರೆಯಾಗಲಿದೆ. ಇದರಿಂದ ಗ್ರಾಮಗಳ ಅಭಿವೃದ್ಧಿಗೆ ಮೀಸಲಿರುವ ಅನುದಾನ ಪೋಲು ಆಗುವುದರ ಜೊತೆಗೆ ಅಭಿವೃದ್ಧಿಗೆ ಮಾರಕವಾಗಲಿದೆ ಎಂದರು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ ನಾಯಕ್ ಮಾತನಾಡಿ, ಪ್ರಸ್ತಕ 2024-25 ನೇ ಸಾಲಿಗೆ 15ನೇ ಹಣಕಾಸು ಯೋಜನೆಗೆ 43. ಲಕ್ಷ ರೂ. ಅನುದಾನ ಬರಲಿದೆ. ಈ ಪೈಕಿ ಈಗಾಗಲೇ 9. ಲಕ್ಷ. ರೂ. ಗಳು ಬಿಡುಗಡೆಯಾಗಿದೆ. ಅನುದಾನ ಬಳಕೆಗೆ ಸಂಬಂಧಿಸಿದಂತೆ ಹಾಗೂ ನರೇಗಾ(ಉದ್ಯೋಗ ಖಾತ್ರಿ) ಯೋಜನೆಗೆ ವಾರ್ಷಿಕ ಗುರಿ 14. ಕೋಟಿ 37 ಲಕ್ಷ ಅನುದಾನ ನಿಗದಿಪಡಿಸಲಾಗಿದೆ. ಈ ಅನುದಾನದ ಬಳಕೆ ಮಾಡಲು ಕ್ರಿಯಾ ಯೋಜನೆ ಸಿದ್ದಪಡಿಸಿ, ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಬೇಕಿದೆ ಎಂದರು. ಇದಕ್ಕೆ ಸಭೆಯಲ್ಲಿದ್ದ ಸದಸ್ಯರು ಗ್ರಾಮಗಳ ಅವಶ್ಯಕ ಕಾಮಾಗಾರಿಗಳ ಪಟ್ಟಿಯನ್ನು ಹೇಳಿ, ಸಭೆಯಲ್ಲಿ ಅನುಮೋದಿಸಲು ಒಪ್ಪಿಗೆ ಸೂಚಿಸುವ ಮೂಲಕ ಇನ್ನಿತರ ವಿಷಯಗಳನ್ನು ಚರ್ಚಿಸಿ, ಸೌಕರ್ಯ ಸಮಿತಿ, ಉತ್ಪಾದನಾ ಸಮಿತಿ ಹಾಗೂ ಸಾಮಾಜಿಕ ನ್ಯಾಯ ಸಮಿತಿಗಳನ್ನು ರಚಿಸಿ, ಉಮೇಶ ಚನ್ನಪ್ಪ ವಡ್ಡರ ಇವರನ್ನು ಸರ್ವಾನುಮತದಿಂದ ಸಾಮಾಜಿಕ ನ್ಯಾಯ ಸಮಿತಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸದಸ್ಯರಾದ ಯಮನೂರ್ಪ ಕುರಿ, ಅನಸಮ್ಮ ಬಿನ್ನಾಳ, ದೇವಪ್ಪ ಲಗಳೂರ, ಮಂಜುಳಾ ಚನ್ನಪ್ಪನಹಳ್ಳಿ, ಗಂಗಮ್ಮ ಕುಕನಪಳ್ಳಿ, ಫಾತೀಮಾ ಬೇಗಂ, ಕಾವೇರಿ ಮಾರನಾಳ, ಶರಣಯ್ಯ ಬಂಡಿಹಾಳ, ಶಾಂತಮ್ಮ ಮುರಾರಿ, ಶರಣಪ್ಪ ಕರಡದ, ಉಮೇಶ ವಡ್ಡರ, ರೇಣವ್ವ ಬಾದ್ರಿ, ಶರಣಪ್ಪ ಹಾದಿಮನಿ, ಕೃಷ್ಣ ರಾಠೋಡ ಸೇರಿದಂತೆ ಗ್ರಾ.ಪಂ ಸಿಬ್ಬಂದಿಗಳು ಇದ್ದರು.