ಪಾಕಿಸ್ತಾನದಲ್ಲಿ ಗೋಧಿ ಹಿಟ್ಟಿಗಾಗಿ ಆಹಾಕಾರ...!

ಲಾಹೋರ್  ಜ ೨೧ :      ಉಗ್ರರನ್ನು  ಪೋಷಿಸುತ್ತಿರುವ  ನೆರೆಯ  ಪಾಕಿಸ್ತಾನದಲ್ಲಿ  ಈಗ  ಹೊಸ ಬಿಕ್ಕಟ್ಟು  ಸೃಷ್ಟಿಯಾಗಿದೆ. ದೇಶದಲ್ಲಿ ಗೋಧಿ ಹಿಟ್ಟಿನ   ತೀವ್ರ  ಕೊರತೆಯಿಂದ ಚಪಾತಿ  ತಿನ್ನುವ  ಜನರು  ಸಮಸ್ಯೆ  ಎದುರಿಸುವಂತಾಗಿದೆ.  

ಖೈಬರ್ ಪಖ್ತೂನ್ ಖವಾ  ಪ್ರಾಂತ್ಯದ  ರಾಜಧಾನಿ  ಪೇಷಾವರ್  ನಗರದಲ್ಲಿ ಗೋದಿ ಹಿಟ್ಟು  ಮಾರಾಟ ಮಾಡುವ ೨,೫೦೦ ಮಳಿಗೆಗಳಿದ್ದು, ಗೋಧಿ  ಹಿಟ್ಟಿನ ಕೊರತೆ ಕಾರಣ   ಈ  ಅಂಗಡಿಗಳು  ಬಹುತೇಕ ಬಂದ್  ಆಗಿವೆ.   ಬಲೂಚಿಸ್ತಾನ್, ಸಿಂಧ್, ಪಂಜಾಬ್ ಮತ್ತು ಖೈಬರ್ ಪಖ್ತೂನ್  ಖವಾ ಪ್ರಾಂತ್ಯಗಳಲ್ಲಿ ಗೋಧಿ ಹಿಟ್ಟಿನ ಕೊರತೆ  ತೀವ್ರವಾಗಿ ಕಾಣಿಸಿಕೊಂಡಿದೆ. ಗೋಧಿ ಹಿಟ್ಟಿನ ಅಭಾವದ ಕಾರಣ  ಚಪಾತಿ  ಪ್ರಿಯರು  ತಮ್ಮ ಆಹಾರ  ಅಗತ್ಯಗಳಿಗೆ  ಅಕ್ಕಿಯ ಮೊರೆ ಹೋಗಿದ್ದಾರೆ. 

ಗೋಧಿ ಹಿಟ್ಟು  ಕೊರತೆ ಕಾರಣ  ದೇಶದ ಮಾರುಕಟ್ಟೆಯಲ್ಲಿ ಗೋಧಿ  ಬೆಲೆ ತೀವ್ರ ಏರಿಕೆ  ಕಂಡಿದೆ. ದೇಶದಲ್ಲಿ ಗೋಧಿ ಹಿಟ್ಟಿನ ಬೆಲೆ ನಿಯಂತ್ರಣಕ್ಕೆ  ಸೂಕ್ತ ಕ್ರಮ ಕೈಗೊಳ್ಳುವಂತೆ,  ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಧಿಕಾರಿಗಳಿಗೆ  ತಾಕೀತು ಮಾಡಿದ್ದರೂ,  ತಳಮಟ್ಟದಲ್ಲಿ  ಯಾವುದೇ  ಬದಲಾವಣೆ  ಸಾಧ್ಯವಾಗಿಲ್ಲ.

ಮಾರುಕಟ್ಟೆಗಳಲ್ಲಿನ ಕೊರತೆಯೊಂದಿಗೆ, ಒಂದು ಕಿಲೋ ಗೋಧಿ ಹಿಟ್ಟಿನ ಬೆಲೆ ೪೩ ರೂ.ಗೆ ಏರಿದೆ. 

ದೇಶದಲ್ಲಿ ಗೋಧಿ ಹಿಟ್ಟಿನ ಅಭಾವನ್ನು  ನಿವಾರಿಸಲು ಪಾಕಿಸ್ತಾನ ಸರ್ಕಾರ ವಿಫಲವಾಗಿದೆ ಎಂದು ಪ್ರತಿಪಕ್ಷಗಳು  ದೂರುತ್ತಿವೆ.    ಸಿಂಧ್  ರಾಜ್ಯದಲ್ಲಿ  ಮಾರ್ಚ್  ತಿಂಗಳ  ಮಧ್ಯದ ಹೊತ್ತಿಗೆ,  ಪಂಜಾಬ್‌ನಲ್ಲಿ  ಏಪ್ರಿಲ್  ೧೫ ರೊಳಗೆ  ಗೋಧಿ ಬೆಳೆ  ರೈತರ ಕೈಗೆ   ಬರುವ ನಿರೀಕ್ಷೆಯಿದೆ.  ಹೊಸ ಗೋಧಿ ಬೆಳೆ ಬಂದರೆ ಗೋಧಿ ಹಿಟ್ಟಿನ  ಅಭಾವ  ನಿವಾರಣೆಯಾಗಲಿದೆ  ಎಂದು ರಾಷ್ಟ್ರೀಯ  ಆಹಾರ ಭದ್ರತಾ ಅಧಿಕಾರಿಗಳು ಹೇಳುತ್ತಾರೆ. 

ಇಮ್ರಾನ್ ಖಾನ್ ಸರ್ಕಾರದ ಅಸಮರ್ಥತತೆಯಿಂದ  ದೇಶದಲ್ಲಿ ಗೋಧಿ ಹಿಟ್ಟಿನ ಬಿಕ್ಕಟ್ಟು  ಸೃಷ್ಟಿಯಾಗಿದೆ  ಎಂದು  ಪಾಕಿಸ್ತಾನ ಮುಸ್ಲಿಂ ಲೀಗ್  ನವಾಜ್   ಪಕ್ಷದ  ನಾಯಕ ಶಹಬಾಜ್ ಷರೀಫ್ ಆರೋಪಿಸಿದ್ದಾರೆ. 

ಇಮ್ರಾನ್ ಖಾನ್ ಸರ್ಕಾರ  ಅಫ್ಘಾನಿಸ್ತಾನಕ್ಕೆ ೪೦,೦೦೦ ಟನ್ ಗೋಧಿಯನ್ನು ರಫ್ತು ಮಾಡಿರುವ  ಕಾರಣ  ದೇಶದಲ್ಲಿ  ಗೋಧಿ ಹಿಟ್ಟಿನ  ಅಭಾವ  ಕಂಡು ಬಂದಿದೆ ಎಂದು  ಪಿಪಿಪಿ ಅಧ್ಯಕ್ಷ ಬಿಲಾವಾಲ್ ಭುಟ್ಟೋ ಜರ್ದಾರಿ ಸರ್ಕಾರವನ್ನು ಟೀಕಿಸಿದ್ದಾರೆ.