ಜಾನಪದವೇ ಕಿತ್ತೂರು ಇತಿಹಾಸಿಕಕ್ಕೆ ಮೂಲ ದಾಖಲೆ; ಡಾ. ನೀಲಪ್ಪ ವಾಲಿಕಾರ

ಜಾನಪದವೇ ಕಿತ್ತೂರು ಇತಿಹಾಸಿಕಕ್ಕೆ ಮೂಲ ದಾಖಲೆ; ಡಾ. ನೀಲಪ್ಪ ವಾಲಿಕಾರ Folklore is the source of information for Kittur historians; Dr. Neelappa Valikara

ಬೆಳಗಾವಿ ೧೪; ಕಿತ್ತೂರು ಸೇರಿದಂತೆ ಬಹುತೇಕ ರಾಜಮನೆತನಗಳು ಸಂಸ್ಥಾನಗಳು ಇವೆಲ್ಲವುಗಳ ಇತಿಹಾಸಕ್ಕೆ ಮೂಲ ದಾಖಲೆ ಜಾನಪದವೇ ಆಗಿದೆ ಎಂದು ಸವಣೂರಿನ ಉಪನ್ಯಾಸಕ ಡಾ.ನೀಲಪ್ಪ ವಾಲಿಕಾರ್ ಹೇಳಿದರು. 

ಅವರು ಬೆಳಗಾವಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ದಿವಂಗತ ಮರಿಕಲಪ್ಪ ಮಲಶೆಟ್ಟಿ ಮತ್ತು ಬೆಟಗೇರಿ ಕೃಷ್ಣ ಶರ್ಮ ದತ್ತಿ ಉಪನ್ಯಾಸ ಮತ್ತು  ಜಾನಪದ ಗೀತ ಗಾಯನ  ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಮಣ್ಣಿನ ಸೊಗಡು ಹಳ್ಳಿಗಾಡಿನ ಬದುಕಿನ ಚಿತ್ರಣ ಇದನ್ನೆಲ್ಲ ತಿಳಿಸುವ ಮತ್ತು ಇತಿಹಾಸವನ್ನು ಅನಾವರಣಗೊಳಿಸುವ ತೊಂಡಿ ಸಂಪ್ರದಾಯದ ಜಾನಪದ ಒಬ್ಬರಿಂದ ಇನ್ನೊಬ್ಬರಿಗೆ ತಿಳಿಸುವ ಮತ್ತು ಪ್ರಚಾರ ಗೊಳಿಸುವ, ಇತಿಹಾಸವನ್ನು ತಂದು ಕೊಡುವಂತಹ ಸಾಹಿತ್ಯವೇ ಜಾನಪದ ಸಾಹಿತ್ಯ ಇಂದಿಗೂ ಹಳ್ಳಿಗಳಲ್ಲಿ ಮಾತ್ರ ಇದು ಕಂಡು ಬರುತ್ತದೆ. ಸೋಬಾನೆ ಪದಗಳು, ಗೀಗಿ ಪದಗಳು, ಬೀಸು ಕಲ್ಲಿನ ಪದಗಳು, ಭಜನೆಗಳು, ಬಯಲಾಟಗಳು, ದೊಡ್ಡಾಟಗಳು, ಕೃಷಿ ಕೆಲಸದಲ್ಲಿದ್ದಾಗ ಕೆಲಸದ ಭಾರ ಕಡಿಮೆಗೊಳಿಸುವ ಸಲುವಾಗಿ ಹಾಡುವ ಹಾಡುಗಳು, ಪುರಾಣ ಪುಣ್ಯ ಕಥೆ, ದೇವರ ನಾಮಗಳು, ದೇವರ ಸ್ತುತಿಗಳು, ಅನುಭವದ ಮಾತುಗಳು, ಅಜ್ಜ ಅಜ್ಜಿ ಹೇಳುವ ಕಥೆಗಳು, ಒಗಟುಗಳು, ಒಡಪುಗಳು, ಗಾದೆ ಮಾತುಗಳು, ಅನೈತಿಕ ಸಂಬAಧದ ಕೆಟ್ಟ ಪರಿಣಾಮವನ್ನು ತೋರಿಸಿ ಕೊಡುವ ಸಂಗ್ಯಾ ಬಾಳ್ಯಾ ನಾಟಕ, ತಾಯಿ ಮಗಳ ಸಂಬAಧವನ್ನು ವಿವರಿಸುವ ಹಾಡುಗಳು, ಮನಸ್ಸಿಗೆ ನೆಮ್ಮದಿ ನೀಡುವ ಹಾಡುಗಳು, ಇವೆಲ್ಲವೂ ಜಾನಪದ ಸಾಹಿತ್ಯದ ಅತ್ಯಂತ ಗಟ್ಟಿಯಾದ ಪ್ರಕಾರಗಳೇ ಆಗಿವೆ. ಇವೆಲ್ಲ ನಮ್ಮ ಸಂಸ್ಕೃತಿಯನ್ನು ಉಳಿಸುವಂತಹವು. ಜಾನಪದ ಸಾಹಿತ್ಯ, ಜನಪದರ ಬಾಯಿಯಿಂದ ಬಾಯಿಗೆ ಹಬ್ಬುವ ಈ ಸಾಹಿತ್ಯದ ನಿರ್ಮಾತ್ರರ ಹೆಸರು ಎಲ್ಲಿಯೂ ಕಾಣುವುದಿಲ್ಲ. ಇವೆಲ್ಲ ಇಂದು ಮರೆಯಾಗುತ್ತಿರುವುದು ಅತ್ಯಂತ ಖೇದಕರ ಸಂಗತಿ ಎಂದವರು ವಿಷಾದಿಸಿದರಲ್ಲದೆ ಇವನ್ನೆಲ್ಲ ಉಳಿಸಿಕೊಳ್ಳುವ ಕಾರ್ಯ ಆಗಬೇಕಿದೆ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯಾಗಿದ್ದರೂ ಕೂಡ ನಿರೀಕ್ಷಿಸಿದ ಕಾರ್ಯ ಆಗುತ್ತಿಲ್ಲ ಎಂದವರು ನುಡಿದರು.

ಹಿರಿಯ ಸಾಹಿತಿ ಯು.ರು.ಪಾಟೀಲ ಮಾತನಾಡಿ ಸಾಹಿತ್ಯದ ಎಲ್ಲ ಪ್ರಕಾರಗಳು ಜಾನಪದ ಸಾಹಿತ್ಯದ ವಿಭಾಗಗಳೆ ಆಗಿವೆ, ನಮ್ಮ ದೇಶದ ಜಾನಪದದ ಗುಂಗು ವಿದೇಶಿಯರನ್ನು ಬಿಟ್ಟಿಲ್ಲ ಸಾಹಿತ್ಯದೊಂದಿಗೆ ಕಸೂತಿಕಲೆ ಸೇರಿದಂತೆ ಬೇರೆ ಕ್ಷೇತ್ರಗಳಲ್ಲೂ ಕೂಡ ಜಾನಪದದ ಸೊಗಡು ಕಂಡುಬರುತ್ತದೆ ಎಂದರು. ಎಲ್ಲರನ್ನೂ ಆಕರ್ಷಿಸುವ ಕಲೆ ಮತ್ತು ಶಕ್ತಿ ಜಾನಪದದಲ್ಲಿದೆ. ಮಹಿಳೆಯರ ಬೈಗುಳಗಳು , ಉತ್ತರ ಕರ್ನಾಟಕದ ಬೈಗುಳಗಳು ಇವುಗಳ ಕುರಿತೆ ಸಂಶೋಧನಾ ಗ್ರಂಥಗಳು ಪ್ರಕಟವಾಗಿವೆ ಇವು ಕೂಡ ಉತ್ತರ ಕರ್ನಾಟಕದ ಜಾನಪದ ಒಂದು ವಿಭಾಗವೇ ಆಗಿದೆ ಎಂದು ಅಭಿಪ್ರಾಯಪಟ್ಟರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಮಂಗಳ ಮೆಟಗುಡ್ಡ ವಹಿಸಿದ್ದರು. ವೇದಿಕೆಯ ಮೇಲೆ ಮುರುಗೇಶ ಶಿವಪೂಜಿ,  ರತ್ನಪ್ರಭಾ ಬೆಲ್ಲದ  ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಾಯ್. ಮೆಣಸಿನಕಾಯಿ ಸ್ವಾಗತಿಸಿದರು,  ಸುಮಾ ಬೇವಿನಕೊಪ್ಪ ಮಠ ಅತಿಥಿಗಳ ಪರಿಚಯ ಮಾಡಿದರು, ಮಹಾದೇವಿ ಅಜವಾನ ಕಾರ್ಯಕ್ರಮ ನಿರ್ವಹಿಸಿದರು, ಹೇಮಾವತಿ ಸುನೋಳಿ ವಂದಿಸಿದರು. ಗೌರವ ಕಾರ್ಯದರ್ಶಿ ವೀರಭದ್ರ ಅಂಗಡಿ , ರತ್ನಪ್ರಭಾ ಬೆಲ್ಲದ, ಸುರೇಶ್ ಸಕ್ಕರೆನ್ನವರ್, ಆರ್ ವಿ ಬನಶಂಕರಿ, ಶೋಭಾ ಬೇವಿನ ಕೊಪ್ಪ, ಆಶಾ ಸಂಸದ್ದಿ, ಖುಷಿ ಬಿರಾದ, ಲಲಿತಾ ಪರ್ವತ್ ರಾವ್, ಶೋಭಾ ಶಿವಳ್ಳಿ, ಪಾರ್ವತಿ ತುಪ್ಪದ, ಇಂದಿರಾ ಮೋಟೆಬೆನ್ನೂರು, ಬಾಳಗೌಡಾದೊಡ ದೊಡ್ಡಬಂಗಿ ಸೇರಿ ಹಲವರು ಜಾನಪದ ಹಾಡುಗಳನ್ನು ಹಾಡಿದರು.