ಜನಪದ ಕಲೆಗಳು ಸಾಂಸ್ಕೃತಿಕ ಶಿಕ್ಷಣದ ಪ್ರತಿಬಿಂಬಗಳು
ಜನಪದ ಕಲೆಗಳು ಸಾಂಸ್ಕೃತಿಕ ಶಿಕ್ಷಣದ ಪ್ರತಿಬಿಂಬಗಳು
ಹಂಪಿ 23: ಆದಿವಾಸಿ ಸಮುದಾಯ ಕಲೆಗಳು ಹಾಗೂ ಜನಪದ ಕಲೆಗಳು ಇವು ಸಾಂಸ್ಕೃತಿಕ ಶಿಕ್ಷಣದ ಸಶಕ್ತ ಮಾಧ್ಯಮಗಳಾಗಿವೆ. ಗ್ರಾಮ ಹಾಗೂ ಆದಿವಾಸಿ ಸಮುದಾಯಗಳಲ್ಲಿ ತಕ್ಕಮಟ್ಟಿನ ಭೇದವಿಲ್ಲದ ಬದುಕು ಸಾಧ್ಯವಾಗಿದ್ದು ಸಮುದಾಯಗಳ ಅನುಭವದಲ್ಲಿ ಆವಿಷ್ಕಾರಗೊಂಡ ಇಂತಹ ಕಲಾರೂಪಗಳಿಂದ ಎಂದು ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ಪ್ರಾಧ್ಯಾಪಕರಾದ ಡಾ. ವೀರೇಶ ಬಡಿಗೇರ ಅವರು ಅಭಿಪ್ರಾಯ ಪಟ್ಟರು.
ದಿನಾಂಕ 23 ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ಗೊಂದಲಿಗರ ಹಾಡುಗಳ ತರಬೇತಿ ಕಮ್ಮಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಹುಡುಗರಿಗೆ ಹಿಂದುಸ್ಥಾನಿ ಸಂಗೀತದ ತಿಳುವಳಿಕೆಯೊಂದಿಗೆ ಈ ನೆಲದ ಹಾಗೂ ಸಮುದಾಯದ ಕಲೆಯಾದ ಗೊಂದಲಿಗರ ಹಾಡುಗಳು ಅವುಗಳ ದಾಟಿ, ನಾದ, ಲಯ, ತಾಳಗಳ ತಿಳುವಳಿಕೆಯೂ ಆಗಬೇಕು. ಸುತ್ತಲಿನ ಕಲಾ ಸಂಸ್ಕೃತಿಯ ತಿಳುವಳಿಕೆಯೊಂದಿಗೆ ಮಕ್ಕಳ ಮನಸ್ಸು ಹೆಚ್ಚು ಸುಸಂಸ್ಕೃತವಾಗುತ್ತದೆ. ಅದರಲ್ಲಿ ನೆಲದ ಬಹು ಸಂಸ್ಕೃತಿಗಳ ಬಗ್ಗೆ ಹೆಮ್ಮೆ ಹುಟ್ಟುತ್ತದೆ.
ಈ ಕಾರಣದಿಂದ ಕರ್ನಾಟಕದ ಸಾಂಸ್ಕೃತಿಕ ಹಾಗೂ ಸಾಮುದಾಯಿಕ ಬದುಕಿನಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಗೊಂದಲಿಗರು, ಅವರ ಸಂಸ್ಕೃತಿ, ಸಂಪ್ರದಾಯ, ಹಾಡು, ಕಥೆಗಳ ಕುರಿತು ಒಂದು ದಿನದ ತಿಳುವಳಿಕೆ ಶಿಬಿರವನ್ನು ಆಯೋಜಿಸಿದೆ. ಈ ಶಿಬಿರದಲ್ಲಿ ಬಾಗಲಕೋಟೆಯ ಹಿರಿಯ ಗೊಂದಲಿಗ ಕಲಾವಿದರು ಸಾವಿರಾರು ಹಾಡು ಹಾಗೂ ಕಥೆಗಳ ಸರದಾರರೂ ಆದ, ಶ್ರೀ ವೆಂಕಪ್ಪ ಅಂಬಾಜಿ ಸುಗತೇಕರ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ನಾಲ್ಕು ರಾತ್ರಿ ಹಗಲು ಬಿಡುವಿಲ್ಲದೆ ಹಾಡಿದ ದಣಿವರಿಯದ ಕಲಾವಿದರಿವರು. 84ರ ಇಳಿವಯಸ್ಸಿನಲ್ಲಿಯೂ ಮಕ್ಕಳಾದ ಹನುಮಂತ, ಅಂಬಾಜಿ ಹಾಗೂ ಚೇತನ ಅವರ ಹಿಮ್ಮೆಳದ ಸಹಾಯದಿಂದ ಕಥೆ, ದೀರ್ಘಕಥೆ, ಹಾಡು, ತತ್ವಪದ, ಹಾಸ್ಯಪದ ಹೀಗೆ ಇಡೀ ದಿನ ಕಮ್ಮಟ ನಡೆಸಿಕೊಡುವ ಮೂಲಕ ನಮ್ಮ ಹುಡುಗರಲ್ಲಿ ಉತ್ಸಾಹ ತುಂಬಿದ್ದಾರೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಕಮ್ಮಟದ ಕೊನೆಯಲ್ಲಿ ಫಲಶ್ರುತಿ ಹಂಚಿಕೊಂಡ ಎಂ.ಪಿ.ಎ ಮೂರನೇ ಸೆಮಿಸ್ಟರ್ ವಿದ್ಯಾರ್ಥಿ ಭರತ ಗುಂಡಿ ಮಾತನಾಡಿ ಈ ದಿನದ ಕಮ್ಮಟ ನಮಗೊಂದು ಹೊಸ ಚೈತನ್ಯ ನೀಡಿತು. ನೆಲಮೂಲದ ಕಲಾವಿದರ ನೆಲಮೂಲದ ನಾದ, ಲಯ, ದಾಟಿ, ಹಾಡು ಕೇಳಿ, ವಾದ್ಯದ್ವನಿ ಕೇಳಿ ಸಂತೋಷವಾಯಿತು ಎಂದು ಹೇಳಿದರು. ಬಿ.ಪಿ.ಎ ಮೂರನೇ ಸೆಮಿಸ್ಟರ್ ವಿದ್ಯಾರ್ಥಿ ದುರ್ಗೇಶ ಪೂಜಾರಿ ಮಾತನಾಡಿ ತಾಯಿ ಮಗನ ದುರಂತ ಕಥೆ ಕೇಳಿ ನನಗೆ ಅಳು ಬಂದಿತು. ತಾಯಿ ನೀಡುವ ಸಂಸ್ಕೃತಿ ಎಷ್ಟು ದೊಡ್ಡದು ಎಂಬುದನ್ನು ಮನಮುಟ್ಟುವಂತೆ ಹೇಳಿದರು ಎಂದರು.
ಕೊನೆಯಲ್ಲಿ ಕಡಕೋಳ ಮಡಿವಾಳಪ್ಪನ ‘ತಂಗಿ ತಯ್ಯಾರಾಗ ಲಗೂನ, ಹಾಕೋಬೇಕ ಡಾಬಾ’ ಹಾಗೂ ಶಿಶುನಾಳ ಶರೀಫರ ‘ತೇರ ಎಳೆಯತಾದ ತಂಗೀ ತೇರ ಎಳೆಯತಾದ’ ಹಾಡನ್ನು ಗೊಂದಲಿಗರ ಹಾಡಿನ ದಾಟಿಯಲ್ಲಿ ಎಲ್ಲಾ ಶಿಬಿರಾರ್ಥಿಗಳಿಂದ ಹಾಡಿಸಿ, ಹಿರಿಯ ಕಲಾವಿದರೂ ಸಂಪನ್ಮೂಲ ವ್ಯಕ್ತಿಗಳು ಆದ ವೆಂಕಪ್ಪ ಸುಗತೇಕರ ಅವರು ಸಾರ್ಥಕವಾಯಿತು ಎಂದು ಸಂತೋಷಪಟ್ಟರು. ಶಿಬಿರದಲ್ಲಿ ವಿಭಾಗದ ಎಲ್ಲಾ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.