ಬ್ರೆಜಿಲ್ ನ ದಕ್ಷಿಣದಲ್ಲಿ ಪ್ರವಾಹ: ಸಾವಿನ ಸಂಖ್ಯೆ 57 ಕ್ಕೆ ಏರಿಕೆ

ಮಾಸ್ಕೋ, ಜ 27 , ಬ್ರೆಜಿಲ್ ನ ದಕ್ಷಿಣ ಭಾಗದಲ್ಲಿ ಭಾರಿ ಮಳೆಯಿಂದ ಉಂಟಾದ  ಪ್ರವಾಹಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 57 ಕ್ಕೆ ಏರಿದ್ದು, ಈ ಪೈಕಿ ಮಿನಾಸ್ ಗೆರೈಸ್ ರಾಜ್ಯದಲ್ಲಿ ಅತಿಹೆಚ್ಚು 48 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯದ ನಾಗರಿಕ ರಕ್ಷಣಾ ಕಚೇರಿ ಸೋಮವಾರ ತಿಳಿಸಿದೆ. ಧಾರಾಕಾರ ಮಳೆಗೆ 37 ಜನರು ಬಲಿಯಾಗಿದ್ದಾರೆ ಎಂದು ಈ ಹಿಂದಿನ ವರದಿಗಳು ತಿಳಿಸಿದ್ದವು. ‘ಹೆಚ್ಚಿನ ಸಾವುಗಳು (ಎಂಟು)  ಮಿನಾಸ್ ಗೆರೈಸ್ ರಾಜ್ಯದ ರಾಜಧಾನಿ ಬೆಲೊ ಹೊರಿಜಾಂಟೆಯಲ್ಲಿ ದಾಖಲಾಗಿವೆ.’ ಎಂದು ನಾಗರಿಕ ರಕ್ಷಣಾ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರವಾಹಗಳಲ್ಲಿ ಇತರ 19 ಜನರು ಕಾಣೆಯಾಗಿದ್ದಾರೆ.ಬೆಲೋ ಹರೈಜಾಂಟೆದಲ್ಲಿ  ಜ 24 ರಂದು 171.8 ಮಿ.ಮೀ ಮಳೆ ದಾಖಲಾಗಿದೆ. ಇದು 110 ವರ್ಷಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಮಳೆ ಮುಂದುವರಿಕೆಯ ಭೀತಿಯ ಮಧ್ಯೆ ಮಿನಾಸ್ ಗೆರೈಸ್‌ನಾದ್ಯಂತ ಇರುವ 99 ನಗರಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.ಪ್ರವಾಹ ಮತ್ತು ಭೂಕುಸಿತಗಳಿಂದಾಗಿ ಈ ಪ್ರದೇಶದಾದ್ಯಂತ 20,000 ಜನರು ತಮ್ಮ ಮನೆಗಳನ್ನು ತೊರೆದು, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ.ಬ್ರೆಜಿಲ್ ನಲ್ಲಿ ಇತ್ತೀಚಿನ ವರ್ಷಗಳಲ್ಲೇ ದಾಖಲೆಯ ಮಳೆ ಇದಾಗಿದೆ.