ಮೈಸೂರಿನಲ್ಲಿ ಕೊವಿದ್-19 ಸೋಂಕಿನ ಹೊಸ ಐದು ಪ್ರಕರಣಗಳು ದೃಢ: ಒಟ್ಟು ಸಂಖ್ಯೆ 41 ಕ್ಕೆ ಏರಿಕೆ

ಮೈಸೂರು, ಏಪ್ರಿಲ್ 10,ಜಿಲ್ಲೆಯಲ್ಲಿ ಶುಕ್ರವಾರ ಎಂಟು ವರ್ಷದ ಮಗು ಸೇರಿದಂತೆ ಐದು ಜನರಲ್ಲಿ ಕೊವಿದ್‍ -19 ಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 41 ಕ್ಕೆ ಏರಿದೆ. ಈ ಎಲ್ಲಾ ಹೊಸ ಪ್ರಕರಣಗಳು ನಂಜನಗೂಡಿನ ಜುಬಿಲಿಯೆಂಟ್‍ ಜೆನೆರಿಕ್ ಕಂಪನಿಯಿಂದ ವರದಿಯಾದ ಸೋಂಕು ಪ್ರಕರಣಗಳ ಸಂಪರ್ಕಗಳಾಗಿವೆ. ಸೋಂಕು ದೃಢಪಟ್ಟಿದ್ದ  ಜುಬಿಲಿಯೆಂಟ್‍ ಕಾರ್ಖಾನೆ ಸಿಬ್ಬಂದಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವರೆಲ್ಲರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ ಐವರಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು ಸಂಖ್ಯೆ ಸದ್ಯ 41 ಕ್ಕೆ ಏರಿದೆ. ಇವರೆಲ್ಲರೂ ಸಂಬಂಧಿಸಿದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಜುಬಿಲಿಯೆಂಟ್ ಕಾರ್ಖಾನೆ ಸಂಬಂಧಿಸಿದ ಮತ್ತು ಅವರ ಸಂಪರ್ಕದಲ್ಲಿದ್ದ 31 ಮಂದಿ ಸೇರಿದ್ದಾರೆ.  ನಿಜಾಮುದ್ದೀನ್ ಸಭೆಯಲ್ಲಿ ಭಾಗವಹಿಸಿದ್ದ ಎಂಟು ಮಂದಿ, ವಿದೇಶದಿಂದ ವಾಪಸ್ಸಾಗಿರುವ ಓರ್ವ ವ್ಯಕ್ತಿ ಮತ್ತು ವಿದೇಶಿ ಬಂದಿರುವ ಮತ್ತೊಬ್ಬ ವ್ಯಕ್ತಿಯ ಸಂಬಂಧಿಯೊಬ್ಬ ಸೋಂಕಿತರಲ್ಲಿ ಸೇರಿದ್ದಾರೆ.
ಎಲ್ಲಾ ದಿನಸಿ ಅಂಗಡಿಗಳು ಮತ್ತು ಅಗತ್ಯ ಸೇವೆಗಳನ್ನು ಸಹ ಮುಚ್ಚಲು ಮೈಸೂರು ಜಿಲ್ಲಾಡಳಿತ ನಿರ್ಧರಿಸಿದೆ ಎಂಬ ವದಂತಿಗಳು ಹರಡಿವೆ. ಆದರೆ, ಇಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಮತ್ತು ಈ ಕುರಿತಂತೆ ಯಾವುದೇ ಆದೇಶ ಹೊರಡಿಸಿಲ್ಲ  ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.ಜನರು ಅನಗತ್ಯವಾಗಿ ಭಯಪಡಬಾರದು. ಇಂತಹ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಅವರು ಹೇಳಿದ್ದಾರೆ. ಜಿಲ್ಲೆಯಲ್ಲಿ ಸೋಂಕಿನ ಭೀತಿ ಕೂಡ ಹೆಚ್ಚುತ್ತಿದ್ದು, ಮನೆ ಸಂಪರ್ಕತಡೆಯಲ್ಲಿರುವವರ ಸಂಖ್ಯೆ 3,428 ಕ್ಕೆ ಏರಿದೆ.  ವಿದೇಶಗಳು, ಇತರ ರಾಜ್ಯಗಳು ಮತ್ತು ಜಿಲ್ಲೆಗಳಿಂದ ಬಂದ ಜನರು ನಿಗಾದಲ್ಲಿದ್ದಾರೆ.1,836 ಜನರಿಗೆ 14 ದಿನಗಳ ಕಾಲ ಮನೆಯಲ್ಲಿಯೇ ಇರಲು ಸೂಚಿಸಲಾಗಿದ್ದು,  1,556 ಜನರು ಗೃಹ ಸಂಪರ್ಕತಡೆಯನ್ನು ಪೂರ್ಣಗೊಳಿಸಿದ್ದಾರೆ. 401 ಜನರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ 41 ಜನರಲ್ಲಿ ಸೋಂಕು ದೃಢಪಟ್ಟಿದೆ.