ಪಂಚ ಗ್ಯಾರಂಟಿ ಯೋಜನೆಗಳು ಬಡವರಿಗೆ ವರದಾನ : ಕೆ.ಶ್ರೀನಿವಾಸರಾವ್

ಪಂಚ ಗ್ಯಾರಂಟಿ ಯೋಜನೆಗಳು ಬಡವರಿಗೆ ವರದಾನ : ಕೆ.ಶ್ರೀನಿವಾಸರಾವ್ Five guarantee schemes are a boon for the poor: K. Srinivasa Rao

ಲೋಕದರ್ಶನ ವರದಿ

ಕಂಪ್ಲಿ 08: ರಾಜ್ಯದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕು ಉತ್ತಮವಾಗಿರಲಿ ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರಿಂದ ಸಾಕಷ್ಟು ಜನರ ಜೀವನ ನೆಮ್ಮದಿಯಿಂದ ಕೂಡಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ.ಶ್ರೀನಿವಾಸರಾವ್ ಹೇಳಿದರು.  ತಾಲೂಕ ಪಂಚಾಯತಿ  ಸಭಾಂಗಣದಲ್ಲಿ  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ  ಅಂಗವಾಗಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ಘನ ಸರ್ಕಾರದ ಗ್ಯಾರಂಟಿ ಯೋಜನೆಗಳ ಅರಿವು ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ಐದು ಗ್ಯಾರಂಟಿ ಯೋಜನೆಗಳು ಜನರಿಗೆ ವರದಾನವಾಗಿದೆ.

ಈ ಯೋಜನೆಗಳನ್ನು ಅರ್ಹ ಕುಟುಂಬಗಳಿಗೆ ತಲುಪಿಸುವಂತಾಗಬೇಕು ಎಂದರು. ತಾಪಂಯ ಕಾರ್ಯನಿರ್ವಾಹಕ ಅಧಿಕಾರಿ ಆರ್‌.ಕೆ.ಶ್ರೀಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರೂ ಕೂಡ ಪುರುಷರಷ್ಟೇ ಸಮಾನರು. ಮನೆಯ ಯಜಮಾನಿಕೆಯಿಂದ ಹಿಡಿದು ನಮ್ಮ ಭಾರತ ದೇಶದ ಪ್ರಸ್ತುತ ಹಣಕಾಸು ಸಚಿವೆಯವರೆಗೂ ಮಹಿಳೆಯರ ಪಾತ್ರ ಅತ್ಯುತ್ತಮವಾಗಿದೆ. ಇಂದಿನ ಆಧುನಿಕ ಸಮಾಜದಲ್ಲಿ ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬಂದು ಹಲವಾರು ರಂಗದಲ್ಲಿ  ತಮ್ಮದೇ ಆದ  ಪ್ರತಿಭೆಯ ಜೊತೆಗೆ ಸ್ಪರ್ಧಾತ್ಮಕ ಯುಗದಲ್ಲಿ ಕೂಡ  ಪ್ರಬಲ ಪೈಪೋಟಿ ನೀಡುತ್ತಿರುವುದು ಒಂದು ಸಂತೋಷದಾಯಕ ವಿಷಯವಾಗಿದೆ.

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಕೆ.ಎಸ್‌.ಮಲ್ಲನಗೌಡ ಹಾಗೂ ಶ್ರೀಶೈಲಗೌಡ, ಕಲ್ಯಾಣ ಕರ್ನಾಟಕ ರಸ್ತೆ ವಿಭಾಗದ ದೇವರೆಡ್ಡಿ, ಆಹಾರ ಮತ್ತು ನಾಗರಿಕ ಇಲಾಖೆಯ ವಿರುಪಾಕ್ಷಿಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೋಹನ್, ಲತಿಫಾಬೇಗಂ, ಪಿಡಿಒಗಳು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ನಿರ್ದೇಶಕರು, ಸ್ವಸಹಾಯ ಸಂಘದ ಅಧ್ಯಕ್ಷರು, ಅಂಗನವಾಡಿ ಕಾರ್ಯಕರ್ತೆಯರು, ಮತ್ತು ತಾಲೂಕು ಪಂಚಾಯಿತಿಯ ಎಲ್ಲಾ ಅಧಿಕಾರಿ ವೃಂದದವರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.