ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕ ಕೆಡಿಪಿ ಸಭೆ
First Quarter KDP Meeting of the Current Year
ಧಾರವಾಡ ಜು.21: ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಜಿಲ್ಲಾ ಪಂಚಾಯತ ವಲಯದಲ್ಲಿ ನಿಗದಿತ ಗುರಿಗೆ ಶೇ. 77.30 ರಷ್ಟು ಭೌತಿಕ ಮತ್ತು ಶೇ. 35.47 ರಷ್ಟು ಆರ್ಥಿಕ ಪ್ರಗತಿ ಆಗಿದೆ. ರಾಜ್ಯ ವಲಯದಲ್ಲಿ ನಿಗದಿತ ಗುರಿಗೆ ಶೇ. 96.41 ರಷ್ಟು ಭೌತಿಕ ಹಾಗೂ ಶೇ. 88.09 ರಷ್ಟು ಆರ್ಥಿಕ ಪ್ರಗತಿ ಆಗಿದೆ. ಅದೇ ರೀತಿ ಕೇಂದ್ರ ಪ್ರಾಯೋಜಕತ್ವದ ಯೋಜನೆಗಳ ನಿಗದಿತ ಗುರಿಗೆ ಶೇ. 92.39 ರಷ್ಟು ಭೌತಿಕ ಹಾಗೂ ಶೇ. 94.16 ರಷ್ಟು ಆರ್ಥಿಕ ಪ್ರಗತಿ ಆಗಿದೆ. ಒಟ್ಟಾರೆ ಶೇ. 91.84 ರಷ್ಟು ಭೌತಿಕ ಹಾಗೂ ಶೇ. 86.21 ರಷ್ಟು ಆರ್ಥಿಕ ಪ್ರಗತಿಯಾಗಿದ್ದು, ಈ ವರ್ಷದ ಮೊದಲನೇ ಕೆಡಿಪಿ ಸಭೆಯಲ್ಲಿ ಇಲಾಖೆಗಳ ಆರ್ಥಿಕ ಮತ್ತು ಭೌತಿಕ ಪ್ರಗತಿಯಲ್ಲಿ ಸಾಧನೆ ಆಗಿರುವುದು ತೃಪ್ತಿ ತಂದಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್.ಲಾಡ್ ಅವರು ಹೇಳಿದರು.
ಅವರು ಇಂದು (ಜು.21) ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ 2025-26 ನೇ ಸಾಲಿನ ಜುಲೈ 2025 ರ ಅಂತ್ಯಕ್ಕೆ ಸಂಬಂಧಿಸಿದಂತೆ ಮೊದಲನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಇಲಾಖಾವಾರು ಅನುದಾನ ಬಿಡುಗಡೆ, ಬಳಕೆ ಮತ್ತು ಭೌತಿಕ ಗುರಿ ಸಾಧನೆಯನ್ನು ಪರೀಶೀಲಿಸಿ, ಯೋಜನಾ ಅನುಷ್ಠಾನ ಪ್ರಗತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಕ್ರಿಯಾಯೋಜನೆಯನ್ನು ಈಗಿನಿಂದಲೇ ಸಿದ್ದಪಡಿಸಿಕೊಳ್ಳಲು ಸಚಿವರು ತಿಳಿಸಿದರು.
ಕೃಷಿ ಇಲಾಖೆಯ ಪ್ರಗತಿ ಪರೀಶೀಲನೆ ಮಾಡಿ, ಸರ್ಕಾರದ ಯೋಜನೆಗಳನ್ನು ರೈತರಿಗೆ ಅನುಕೂಲವಾಗುವಂತೆ ಅನುಷ್ಠಾನಗೊಳಿಸಬೇಕು. ರೈತರ ಕೃಷಿ ಸಮಸ್ಯೆಗಳನ್ನು, ಉತ್ತಮ ತಳಿಯ ಬೀಜಗಳನ್ನು ಬಳಸಿಕೊಳ್ಳಲು ಅನುವುವಾಗುವಂತೆ ಕೃಷಿ ವಿಶ್ವವಿದ್ಯಾಲಯದ ಸಹಕಾರದೊಂದಿಗೆ ಅಲ್ಲಿನ ಕೃಷಿ ತಜ್ಞರ, ವಿಜ್ಞಾನಿಗಳ ಅನುಭವವನ್ನು ಬಳಸಿಕೊಳ್ಳಬೇಕೆಂದು ಸಚಿವರು ತಿಳಿಸಿದರು.
ಕೃಷಿ ಇಲಾಖೆಯಿಂದ ರೈತರಿಗೆ ಆಧುನಿಕ ತಂತ್ರಜ್ಞಾನಗಳನ್ನು ಮತ್ತು ಕೃಷಿ ಉಪಕರಣಗಳನ್ನು ಬಳಸಲು ಪ್ರೋತ್ಸಾಹಿಸಲಾಗುತ್ತಿದೆ. ಬೂಮ್ ಸ್ಪಿಂಕ್ಲರ್‌ನ್ನು ಪ್ರಾಯೋಗಿಕವಾಗಿ ಪರೀಕ್ಷೆ ಮಾಡಿದ್ದಾರೆ. ಅದು ಕಡಿಮೆ ಸಮಯದಲ್ಲಿ ಅತಿ ಬೇಗನೆ ಸ್ಪಿ-್ಲಂಕಿಂಗ್ ಕೆಲಸ ಮಾಡುತ್ತದೆ. ಹಾಗೂ ಡ್ರೋನ್ ಮುಖಾಂತರ ಸ್ಪ್ರೇ ಮಾಡಬಹುದು. ಈ ಮಷಿನ್ 15 ನಿಮಿಷದಲ್ಲಿ ಒಂದು ಎಕ್ಕರೆ ಸ್ಪ್ರೇ ಮಾಡುತ್ತದೆ. ಆದ್ದರಿಂದ ಇವುಗಳನ್ನು ವಿಡಿಯೋ ಚಿತ್ರೀಕರಣ ಮಾಡಿ, ಎಲ್ಲ ಗ್ರಾಮಗಳ ಜನರಿಗೆ ತಿಳುವಳಿಕೆ ಮತ್ತು ಮಾಹಿತಿ ನೀಡಲು ಕೃಷಿ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ನರೇಗಾ ಯೋಜನೆ ಉತ್ತಮವಾಗಿ ಅನುಷ್ಠಾನಗೊಳಿಸಬೇಕು. ಕೃಷಿ, ಪಂಚಾಯತ ರಾಜ್, ತೋಟಗಾರಿಕೆ, ಅರಣ್ಯ ಮತ್ತು ರೇಷ್ಮೆ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಎಲ್ಲರೂ ಸಮನ್ವಯದಿಂದ ಕ್ರಿಯಾಯೋಜನೆ ರೂಪಿಸಿ, ಜನರಿಗೆ ಉದ್ಯೋಗವಕಾಶಗಳನ್ನು ಹೆಚ್ಚಿಸಬೇಕು. ಹಾಗೂ ನರೇಗಾದಲ್ಲಿ ನೋಂದಣಿ ಆಗಿರುವ ಜನರು ಕೆಲಸಕ್ಕೆ ಬಾರದೇ ಇದ್ದರೆ, ಅಂತಹವರು ನರೇಗಾ ಕೆಲಸದಲ್ಲಿ ಭಾಗವಹಿಸಲು ಉತ್ತೇಜನ ನೀಡಬೇಕು. ನರೇಗಾ ಯೋಜನೆಯ ಕಾಮಗಾರಿಗಳ ನಿಗದಿತ ಭೌತಿಕ ಗುರಿಯನ್ನು ನಿಯಮಾನುಸಾರ ಕಾಲಮಿತಿಯಲ್ಲಿ ಸಾಧಸಬೇಕೆಂದು ಸಚಿವ ಸಂತೋಷ ಲಾಡ್ ಅವರು ಹೇಳಿದರು.
ಕಲಘಟಗಿ, ಧಾರವಾಡ, ಹುಬ್ಬಳ್ಳಿ ಭಾಗದ ರೈತರು ಪರ್ಯಾಯ ಬೆಳೆಯಾಗಿ ಅಡಿಕೆ ತೋಟ ಹಾಗೂ ರೇಷ್ಮೆ ಸಾಕಾಣಿಕೆ ಮಾಡುತ್ತಿದ್ದಾರೆ. ಪ್ರಸಕ್ತ ಸಾಲಿಗೆ ರೇಷ್ಮೆ ಬೆಳೆ ಹಾಗೂ ರೇಷ್ಮೆ ಹುಳು ಸಾಕಾಣಿಕೆ ಕೃಷಿಯನ್ನು ವಿಸ್ತರಣೆ ಮಾಡಲು ಗ್ರಾಮವಾರು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಇಲಾಖೆಯ ಅಧಿಕಾರಿಗಳಗೆ ಸಚಿವರು ನಿರ್ದೇಶಿಸಿದರು
ಅತಿಯಾದ ಮಳೆಯಿಂದಾಗಿ ಗ್ರಾಮಗಳ ಮುಖ್ಯ ರಸ್ತೆಗಳು ಹಾಗೂ ಸಂಪರ್ಕ ಸೇತುವೆ, ರಸ್ತೆಗಳು ಹಾಳಾಗಿವೆ. ಸಾರ್ವಜನಿಕರ ಅನುಕೂಲಕ್ಕಾಗಿ ತಕ್ಷಣ ಅವುಗಳನ್ನು ದುರಸ್ತಿ ಮಾಡಿ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಸಚಿವರು ಸೂಚಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಪ್ರಗತಿ ಪರೀಶೀಲನೆ ಮಾಡಿ, ಶೂನ್ಯ ಫಲಿತಾಂಶ ಮತ್ತು ಶೂನ್ಯ ವಿದ್ಯಾರ್ಥಿ ದಾಖಲಾತಿ ಹೊಂದಿರುವ ಶಾಲೆಗಳಿಗೆ ನೋಟಿಸ್ ನೀಡಿ, ನಿಯಮಾನುಸಾರ ಬಂದ್ ಮಾಡಬೇಕು. ಅಲ್ಲಿನ ಸಿಬ್ಬಂದಿಗಳನ್ನು ಸಿಬ್ಬಂದಿ ಅಗತ್ಯಿವಿರುವ ಸರ್ಕಾರಿ ಶಾಲೆಗಳಿಗೆ ತಕ್ಷಣ ವರ್ಗಾಹಿಸಬೇಕು. ಇದರಿಂದ ಸರ್ಕಾರದ ಅನುದಾನದ ಅಪವ್ಯಯ ತಪ್ಪುತ್ತದೆ. ಕಳೆದ ಎರಡು ವರ್ಷಗಳಿಂದ ಈ ಕುರಿತು ಗಂಭೀರ ಕ್ರಮ ವಹಿಸಿದ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಧೋರಣೆ ವಿರುದ್ಧ ಕೋಪಗೊಂಡ ಸಚಿವರು ತಕ್ಷಣ ಕ್ರಮವಹಿಸಿ, ವರದಿ ಸಲ್ಲಿಸುವಂತೆ ಸೂಚಿಸಿದರು.
ಸಭೆಯಲ್ಲಿ ಶಾಸಕಾರದ ಎನ್.ಎಚ್.ಕೋನರಡ್ಡಿ ಅವರು ಮಾತನಾಡಿ, ಜಿಲ್ಲೆಗೆ ವಿವಿಧ ರೀತಿಯ ರಾಸಾಯನಿಕ ಗೊಬ್ಬರಗಳು ಬಂದಿದ್ದರೂ, ರೈತರ ಬೇಡಿಕೆ ಹೆಚ್ಚಾಗಿರುವದರಿಂದ ಒತ್ತಡ ಉಂಟಾಗಿದೆ. ಅತಿಯಾದ ಹಾಗೂ ನಿರಂತರ ಮಳೆಯಿಂದಾಗಿ ಹೆಸರು, ಗೋವಿನಜೋಳ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳಲ್ಲಿ ಹಳದಿ ಬಣ್ಣ ಬರುತ್ತಿದೆ. ಇದಕ್ಕಾಗಿ ರೈತರು ಯೂರಿಯಾ ಹಾಗೂ ಇತರ ರಾಸಾಯನಿಕ ಗೊಬ್ಬರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲು ಮುಂದಾಗುತ್ತಿದ್ದಾರೆ. ಈ ಕುರಿತು ಕೃಷಿ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ವಹಿಸಿ, ರೈತರಿಗೆ ತೊಂದರೆಯಾಗದಂತೆ ಮತ್ತು ಸಕಾಲಕ್ಕೆ ಅವರ ಬೇಡಿಕೆ ಅನುಗುಣವಾಗಿ ಗೊಬ್ಬರ ಪೂರೈಸಬೇಕೆಂದು ಹೇಳಿದರು.
ಶಾಲಾ ತರಗತಿಗಳು ಪ್ರಾರಂಭವಾಗಿ ಎರಡು ತಿಂಗಳು ಆಗುತ್ತಾ ಬಂದರೂ ಕೆಲವು ವಸತಿ ನಿಲಯಗಳಲ್ಲಿ ಇನ್ನೂ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡುತ್ತಿಲ್ಲ. ಶಾಸಕರು ಶಿಫಾರಸ್ಸು ಮಾಡಿದ ಹಾಗೂ ಸ್ಥಳೀಯವಾಗಿ ಶೇ. 25 ರಷ್ಟು ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಪ್ರವೇಶದಲ್ಲಿ ಮೀಸಲಾತಿ ಇದ್ದರೂ, ಸರ್ಕಾರದ ಈ ನಿಯಮ ಸರಿಯಾಗಿ ಪಾಲನೆಯಾಗುತ್ತಿಲ್ಲ. ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಿ, ಆದಷ್ಟು ಬೇಗ ವಿದ್ಯಾರ್ಥಿಗಳಿಗೆ ವಸತಿ ನಿಲಯ ಕಲ್ಪಿಸಬೇಕೆಂದು ಶಾಸಕ ಎನ್.ಎಚ್.ಕೋನರಡ್ಡಿ ಅವರು ಹೇಳಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಕೃಷಿ ಇಲಾಖೆಯ ಅಧಿಕಾರಿಗಳು ಬೆಳೆ ಹಾನಿ ಪರಿಹಾರ, ಬೀಜ ಮತ್ತು ಗೊಬ್ಬರ ವಿತರಣೆಯಲ್ಲಿ ಸಮಸ್ಯೆಗಳು ಉಂಟಾಗದಂತೆ ಮುಂಜಾಗ್ರತೆ ವಹಿಸಬೇಕು. ಇಲಾಖೆಯ ಅಧಿಕಾರಿಗಳಿಗೆ ಗ್ರಾಮ ಮಟ್ಟದಲ್ಲಿ ಸರ್ಕಾರದ ಕೃಷಿ ಇಲಾಖೆಯ ಯೋಜನೆಗಳು, ಉತ್ತಮ ಇಳುವರಿ ಸೇರಿದಂತೆ ವಿವಿಧ ಕೃಷಿ ಕಾರ್ಯಕ್ರಮಗಳ ಕುರಿತು ಜನಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.
ವಿವಿಧ ಯೋಜನೆ ಮತ್ತು ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಎಷ್ಟು ಖರ್ಚು ಮಾಡಲಾಗಿದೆ ಮತ್ತು ಕಾಮಗಾರಿಗಳ ಗುಣಮಟ್ಟ ಹೇಗಿದೆ ಎಂಬ ಬಗ್ಗೆ, ಕೈಗೊಂಡ ಕ್ರಮಗಳ ವರದಿಯನ್ನು ಸಲ್ಲಿಸಲು ಅವರು ತಿಳಿಸಿದರು.
ಶಾಲಾ ಕಟ್ಟಡಗಳ ದುರಸ್ತಿ, ಮಧ್ಯಾಹ್ನದ ಬಿಸಿಯೂಟದಲ್ಲಿನ ದೋಷಗಳ ಬಗ್ಗೆ ಚರ್ಚಿಸಿ, ಶಿಕ್ಷಣ ಇಲಾಖೆಯವರಿಂದ ಮಾಹಿತಿ ಪಡೆದುಕೊಂಡು ಸರಿಪಡಿಸಬೇಕು. ವಿದ್ಯಾರ್ಥಿ ವೇತನವು ವಿದ್ಯಾರ್ಥಿಗಳಿಗೆ ಸರಿಯಾದ ಸಮಯದಲ್ಲಿ ತಲುಪಬೇಕೆಂದು ಅವರು ತಿಳಿಸಿದರು.
ಹಳ್ಳಿಗಳಲ್ಲಿನ ನೀರಿನ ಸಮಸ್ಯೆಯಾಗದ ಹಾಗೆ ನೋಡಿಕೊಳ್ಳಿ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಪರೀಶೀಲಿಸಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ನರೇಗಾ ಯೋಜನೆ ಬಡವರಿಗೆ ತಲುಪಬೇಕು. ವಯಸ್ಸಾದವರು ಶಹರಕ್ಕೆ ಹೋಗಿ ಕೆಲಸ ಮಾಡಲು ಆಗುವುದಿಲ್ಲ. ಅಂತವರಿಗೆ ಈ ಯೋಜನೆ ಸೂಕ್ತವಾಗಿದೆ. ಆದ್ದರಿಂದ ಈ ಯೋಜನೆಯಿಂದ ಯಾರೂ ವಂಚಿತರಾಗದಂತೆ ಮುನ್ನೆಚ್ಚರಿಕೆ ವಹಿಸಿ, ಸರ್ಕಾರದ ಯೋಜನೆಗಳನ್ನು ಅವರು ಪಡೆದುಕೊಳ್ಳುವಂತೆ ಮಾಡಬೇಕೆಂದು ಅವರು ತಿಳಿಸಿದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ., ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಅವರು ಇದ್ದರು.
ಕೆಡಿಪಿ ಸಭೆಯಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಲೋಕೋಪಯೋಗಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಆರೋಗ್ಯ, ಶಾಲಾ ಶಿಕ್ಷಣ, ಪಶುಸಂಗೋಪನೆ, ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲನೆ ಮಾಡಿ, ಅಧಿಕಾರಿಗಳಿಂದ ಸಚಿವರು ಪ್ರಗತಿ ವರದಿ ಪಡೆದುಕೊಂಡರು.
ಸಭೆಯಲ್ಲಿ ಜಿಲ್ಲಾ ಕೆಡಿಪಿ ಸಭೆಯ ನಾಮನಿರ್ದೇಶಿತ ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಮನೆ ಬಾಗಲಿಗೆ ಆರೋಗ್ಯ ಸೇವೆ ಪ್ರಚಾರ ಸಾಮಗ್ರಿ ಬಿಡಿಗಡೆ: ಗೃಹ ಆರೋಗ್ಯ ಯೋಜನೆಯು ಮನೆ ಬಾಗಿಲಿಗೆ ಆರೋಗ್ಯ ಸೇವೆಗಳನ್ನು ತಲುಪಿಸುವ ಕರ್ನಾಟಕ ಸರ್ಕಾರದ ಒಂದು ಮಹತ್ವದ ಯೋಜನೆಯಾಗಿದೆ. ಸಮುದಾಯ ಆರೋಗ್ಯಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ, ಆರೋಗ್ಯ ತಪಾಸಣೆ ಮಾಡುತ್ತಾರೆ. ಆಸ್ಪತ್ರೆಗೆ ಬರಲು ಸಾಧ್ಯವಾಗದ ವೃದ್ಧರು, ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಮತ್ತು ಗರ್ಭಿಣಿಯರಿಗೆ ಅವರ ಮನೆಯಲ್ಲಿಯೇ ಆರೋಗ್ಯ ತಪಾಸಣೆ ನಡೆಸುವ ಸದುದ್ದೇಶವನ್ನು ಈ ಯೋಜನೆ ಹೊಂದಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಮ್.ಹೊನಕೇರಿ ಅವರು ಯೋಜನೆ ಕುರಿತು ಸಭೆಯಲ್ಲಿ ವಿವರಿಸಿದರು.
ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಇಂದಿನ ಕೆಡಿಪಿ ಸಭೆಯಲ್ಲಿ ಈ ಯೋಜನೆಯ ಕರಪತ್ರ, ಬಿತ್ತಿಪತ್ರದ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿದರು.
ಅವರು ಮಾತನಾಡಿ, ತಂಡವು ನಿಗದಿತ ದಿನದಂದು ಗ್ರಾಮದ ಪ್ರತಿ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರ ಆರೋಗ್ಯ ತಪಾಸಣೆ ಮಾಡುತ್ತಾರೆ. ದೀರ್ಘಕಾಲದ ಕಾಯಿಲೆಗಳಿರುವವರಿಗೆ ಉಚಿತವಾಗಿ ಓಷಧಿಗಳನ್ನು ವಿತರಿಸಲು ಈ ಯೋಜನೆ ಸಹಕಾರಿಯಾಗಿದೆ ಎಂದು ಸಚಿವರು ತಿಳಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 