ಚೀನಾದಲ್ಲಿ ತುರ್ತು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯಗಳಿಗೆ ಎಐಐಬಿನಿಂದ ಆರ್ಥಿಕ ನೆರವು

ಬೀಜಿಂಗ್, ಫೆ 10, ಚೀನಾದಲ್ಲಿ ತ್ವರಿತ ಮತ್ತು ದೀರ್ಘಕಾಲೀನ ಸಾರ್ವಜನಿಕ ಆರೋಗ್ಯ ಅಗತ್ಯತೆಗಳನ್ನು ಪೂರೈಸಲು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯಗಳಿಗೆ ಸಾಲಗಳನ್ನು ಒದಗಿಸುವ ಮೂಲಕ ಸಂಕಷ್ಟಕ್ಕೆ ಸಿಲುಕಿರುವ ಆ ದೇಶವನ್ನು ಬೆಂಬಲಿಸಲು ಸಿದ್ಧವಾಗಿರುವುದಾಗಿ ಏಷ್ಯಾ ಮೂಲಸೌಕರ್ಯ ಬಂಡವಾಳ ಹೂಡಿಕೆ ಬ್ಯಾಂಕ್ (ಎಐಐಬಿ) ಸೋಮವಾರ ಹೇಳಿದೆ.

ತುರ್ತು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯಗಳನ್ನು ಬಲಪಡಿಸಲು  ಚೀನಾದ ಅಧಿಕಾರಿಗಳೊಂದಿಗೆ ನಿರಂತರ ಚರ್ಚೆಗಳನ್ನು ನಡೆಸಲಾಗುತ್ತಿದೆ ಎಂದು ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.‘ಕೊರೋನವೈರಸ್ ಹರಡುವಿಕೆಯ ಸಂಪೂರ್ಣ ಪರಿಣಾಮಗಳು ಇನ್ನೂ ತಿಳಿದಿಲ್ಲವಾದರೂ, ಚೀನಾ ದೇಶದ ನಿವಾಸಿಗಳಿಗೆ ಸೋಂಕು ಹರಡುವಿಕೆ ತಡೆಯಲು ಬ್ಯಾಂಕ್ ತನ್ನ ಪಾತ್ರವನ್ನು ನಿರ್ವಹಿಸಲು ಬಯಸುತ್ತದೆ.’ ಎಂದು ಎಐಐಬಿ ಅಧ್ಯಕ್ಷ ಜಿನ್ ಲಿಕ್ವಿನ್ ಹೇಳಿದರು.

ಸಾರ್ವಜನಿಕ  ಆರೋಗ್ಯ ಮೂಲಸೌಕರ್ಯದಲ್ಲಿ ಪರಿಣಾಮಕಾರಿ ಬಂಡವಾಳ ಹೂಡಿಕೆಗಳನ್ನು ಗುರುತಿಸಲು ಬ್ಯಾಂಕ್ ಚೀನಾ ಸರ್ಕಾರದೊಂದಿಗೆ ಕೆಲಸ ಮಾಡಲಿದೆ. ಚೀನಾ ಮತ್ತು ಇತರ ದೇಶಗಳಲ್ಲಿ ಸಾಂಕ್ರಾಮಿಕ ರೋಗ ತಡೆಯಲು ಮತ್ತು ಇತರ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಗಳಿಗೆ ಸ್ಪಂದಿಸಲು ಇತರ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳು, ಖಾಸಗಿ ಪಾಲುದಾರರು ಮತ್ತು ಇತರರೊಂದಿಗೆ ಕೆಲಸ ಮಾಡಲು ಬ್ಯಾಂಕ್ ನಿರೀಕ್ಷಿಸುತ್ತಿದೆ ಎಂದು ಅವರು ಹೇಳಿದರು.

ಇಂತಹ ಬಂಡವಾಳ ಹೂಡಿಕೆಗಳು ಚೀನಾದ ನಾಗರಿಕರ ಆರೋಗ್ಯವನ್ನು ಸುಧಾರಿಸುವುದಲ್ಲದೆ ರೋಗ ತಡೆಗಟ್ಟುವಿಕೆ ಮತ್ತು ಶಿಕ್ಷಣದ ವಿಷಯದಲ್ಲಿ ಜಾಗತಿಕ ಪರಿಣಾಮ ಬೀರುತ್ತದೆ ಎಂದು ಜಿನ್ ಹೇಳಿದ್ದಾರೆ.ಎಐಐಬಿ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ ಆಗಿದ್ದು, ಇದು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಮೂಲಸೌಕರ್ಯಗಳ ನಿರ್ಮಾಣವನ್ನು ಬೆಂಬಲಿಸುವ ಉದ್ದೇಶವನ್ನು ಹೊಂದಿದೆ.