ಬೆಡಸಗಾಂವ ರಾಮಲಿಂಗೇಶ್ವರ ದೇಗುಲದಲ್ಲಿ ‘ರುದ್ರನಂದಿ’ ಕಿರು ಚಿತ್ರೀಕರಣ

ಬೆಡಸಗಾಂವ ರಾಮಲಿಂಗೇಶ್ವರ ದೇಗುಲದಲ್ಲಿ ‘ರುದ್ರನಂದಿ’ ಕಿರು ಚಿತ್ರೀಕರಣ Filming of the short film ‘Rudranandi’ at the Bedasagaon Ramalingeshwara Temple


ಲೋಕದರ್ಶನ ವರದಿ  

ಮುಂಡಗೋಡ 27 : ತಾಲೂಕಿನ ಐತಿಹಾಸಿಕ ಬೆಡಸಗಾಂವದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ‘ರುದ್ರನಂದಿ’ ಎಂಬ ಸಸ್ಪೆನ್ಸ್‌ ಹಾಗೂ ಸಾಮಾಜಿಕ ಸಂದೇಶಾಧಾರಿತ ಕಿರುಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಪ್ರಸಿದ್ಧ ಕಲಾವಿದರ ಆಗಮನದಿಂದಾಗಿ ಪವಿತ್ರ ಕ್ಷೇತ್ರವು ಇದೀಗ ಸಿನಿಮಾ ರಂಗಿನ ಕಳೆ ಪಡೆದುಕೊಂಡಿದೆ. ಚಿತ್ರದಲ್ಲಿ ಸ್ಯಾಂಡಲ್ವುಡ್ನ ಹಿರಿಯ ಹಾಸ್ಯ ನಟ ಡಿಂಗ್ರಿ ನಾಗರಾಜ್, ರೇಖಾ ದಾಸ್, ಜಯರಾಮ ಮಂಡ್ಯ ಹಾಗೂ ‘ಟ್ಯಾಟೋ ಗಣಿ’ ಖ್ಯಾತಿಯ ಗಣೇಶ್, ಶ್ರೀದೇವಿ, ಶ್ವೇತಾ, ಆಕಾಶ್, ದಿವ್ಯಾ ಗಣೇಶ್, ಮೈಸೂರು ಅಯ್ಯ ಮತ್ತು ಗೋಪಾಲರಾವ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ರೈತ ಸಂಘದಿಂದ ಶುಭ ಹಾರೈಕೆ: ಚಿತ್ರೀಕರಣ ಸ್ಥಳಕ್ಕೆ ಅಖಂಡ ಕರ್ನಾಟಕ ರೈತ ಸಂಘದ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ನಟರಾಜ್ ಬಿ. ಹೊಸೂರ ಭೇಟಿ ನೀಡಿ ಶುಭ ಹಾರೈಸಿದರು. "ಕೇವಲ ಮನರಂಜನೆಗೆ ಸೀಮಿತವಾಗದೆ, ಸಮಾಜಕ್ಕೆ ಮುಖಾಮುಖಿಯಾಗುವಂತಹ ಉತ್ತಮ ಸಂದೇಶ ಈ ಚಿತ್ರದ ಮೂಲಕ ಮೂಡಿಬರಲಿ" ಎಂದು ಅವರು ಆಶಿಸಿದರು. ದೇವಸ್ಥಾನದ ಆವರಣದಲ್ಲಿ ಶೂಟಿಂಗ್ ಹಬ್ಬದ ವಾತಾವರಣ ನಿರ್ಮಿಸಿದ್ದು, ಮೆಚ್ಚಿನ ನಟ-ನಟಿಯರನ್ನು ನೋಡಲು ಗ್ರಾಮಸ್ಥರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ರೈತ ಸಂಘದ ಬಸವರಾಜ್ ಬಿ. ಹೊಸೂರ, ಪ್ರವೀಣ ರಾಮಾಪುರ, ದೇವಸ್ಥಾನ ಸೇವಾ ಸಮಿತಿಯ ಸದಸ್ಯರು ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು