ಶಿವಳ್ಳಿಯಲ್ಲಿ ಭರದಿಂದ ಸಾಗುತ್ತಿರುವ ್ಲ ‘ಪಂಚಾಯಿತಿ’ ಚಿತ್ರೀಕರಣ

ಶಿವಳ್ಳಿಯಲ್ಲಿ ಭರದಿಂದ ಸಾಗುತ್ತಿರುವ ್ಲ ‘ಪಂಚಾಯಿತಿ’ ಚಿತ್ರೀಕರಣ  Filming of the movie ‘Panchayiti’ is proceeding briskly in Shivalli

ಲೋಕದರ್ಶನ ವರದಿ 

ಶಿವಳ್ಳಿ 09 : ನೇಟಿವ್ ಕ್ರಿಯೇಷನ್ಸ್‌ ಅಡಿಯಲ್ಲಿ ದೊಡ್ಡ ನಾಗಯ್ಯ ನಿರ್ಮಿಸುತ್ತಿರುವ, ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ನಿರ್ದೇಶನದ ‘ಪಂಚಾಯಿತಿ’ ಕನ್ನಡ ಚಲನಚಿತ್ರದ ಚಿತ್ರೀಕರಣ ಧಾರವಾಡ ಸಮೀಪದ ಶಿವಳ್ಳಿಯಲ್ಲಿ ಭರದಿಂದ ಸಾಗುತ್ತಿದೆ.  

ಹುಬ್ಬಳ್ಳಿ, ಶಿವಳ್ಳಿ, ಹೆಬಸೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದೊಂದು ವಾರದಿಂದ ಚಿತ್ರೀಕರಣ ನಡೆಯುತ್ತಿದೆ. ಉತ್ತರ ಕರ್ನಾಟಕದ ಗ್ರಾಮೀಣ ಬದುಕು, ಸ್ಥಳೀಯ ರಾಜಕೀಯ ಹಾಗೂ ಸಾಮಾಜಿಕ ಪರಿಸ್ಥಿತಿಗಳನ್ನು ಕಥೆಯ ಮೂಲಕ ಕಟ್ಟಿಕೊಡುವ ಪ್ರಯತ್ನ ಚಿತ್ರದಲ್ಲಿದೆ.  

ಹಾಲಹಳ್ಳಿ ಗ್ರಾಮದ ಪಂಚಾಯಿತಿ ಚುನಾವಣೆ ಸುತ್ತ ಕಥೆ ಸಾಗಲಿದ್ದು, ರಾಜಕೀಯ, ಹಣ, ಜಾತಿ-ಸಾಮಾಜಿಕ ಸಮೀಕರಣಗಳು ಹಾಗೂ ಸ್ಥಳೀಯ ಸಮಸ್ಯೆಗಳು ಪ್ರಮುಖವಾಗಿ ಮೂಡಿಬರಲಿವೆ. ಪಂಚಾಯಿತಿ ಅಧ್ಯಕ್ಷನ ಹಠಾತ್ ನಿಧನದ ಬಳಿಕ ಆರಂಭವಾಗುವ ಸಂಘರ್ಷ ಕ್ರಮೇಣ ಗ್ರಾಮದ ರಾಜಕೀಯ ಚಿತ್ರಣವನ್ನೇ ಬದಲಾಯಿಸುತ್ತದೆ.  

ಚಿತ್ರಕ್ಕೆ ಕಥೆ ಅರವಿಂದ ಮಿತ್ರ, ಛಾಯಾಗ್ರಹಣ ಗುರುಪ್ರಸಾದ್ ಕಾಶಿ ಹಾಗೂ ಸಂಕಲನ ಕೆಂಪರಾಜ್ ಅವರದು. ಡಾ. ಪ್ರಭು ಗಂಜಿಹಾಳ್, ಡಾ. ವೀರೇಶ್ ಹಂಡಗಿ ಸೇರಿದಂತೆ ಹಲವರು ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  

ಚಿತ್ರದಲ್ಲಿ ಉತ್ತರ ಕರ್ನಾಟಕದ ಹಲವು ಸ್ಥಳೀಯ ಕಲಾವಿದರು ಅಭಿನಯಿಸುತ್ತಿದ್ದು, ಗೋಕೂಲ್ ರಾಜ್, ಬಿಂದು, ಜಗದೀಶ್ ಮೂಕಿ, ಶ್ರುತಿ ಬಿಸರಹಳ್ಳಿ, ಬಸವರಾಜ್ ತಿಲ್ರಾಪುರ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.