ಮೈಸೂರು, ಜ. 22,ರಾಜ್ಯ ಸರ್ಕಾರದಿಂದ ಬಲವಂತವಾಗಿ ರೈತರ ಸಾಲ ವಸೂಲಿ ಮಾಡಬಾರದು. ಬರದಿಂದ ತತ್ತರಿಸಿರುವ ರೈತರಿಂದ ಬಲವಂತವಾಗಿ ಯಾವುದೆ ಕಾರಣಕ್ಕೂ ಸಾಲ ವಸೂಲಿ ಮಾಡಬಾರದು. ರೈತರು ತಾವಾಗಿಯೇ ಸಾಲ ಮರುಪಾವತಿಸಿದರೆ ತಗೆದುಕೊಳ್ಳಿ. ಆದರೆ ಯಾವುದೇ ಕಾರಣಕ್ಕೂ ಬಲವಂತವಾಗಿ ವಸೂಲಿ ಮಾಡಬಾರದು. ಒಂದು ವೇಳೆ ವಸೂಲಿ ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ಕಾಶ್ಮೀರ ಪ್ಲೇ ಕಾರ್ಡ್ ಪ್ರದರ್ಶಿಸಿದ ಪ್ರಕರಣ ವಿಚಾರದಲ್ಲಿ ನಳಿನಿ ಪರ ವಕಾಲತ್ತು ವಹಿಸದಂತೆ ಮೈಸೂರು ವಕೀಲರ ಸಂಘದ ನಿರ್ಧಾರ ಅಸಂವಿಧಾನಿಕ. ಈ ರೀತಿ ನಿರ್ಧಾರ ತೆಗೆದುಕೊಳ್ಳಲು ವಕೀಲರ ಸಂಘಕ್ಕೆ ಅವಕಾಶವೇ ಇಲ್ಲ. ಫ್ರೀ ಕಾಶ್ಮೀರ ಪ್ಲೇ ಕಾರ್ಡ್ ಪ್ರದರ್ಶಿಸಿದ್ದು ದೇಶ ದ್ರೋಹದ ಕೆಲಸವಲ್ಲ. ಕಾಶ್ಮೀರದಲ್ಲಿ ಇಂದಿಗೂ ತುರ್ತುಸ್ಥಿತಿ ಇದೆ. ಅದರಿಂದ ಮುಕ್ತಗೊಳಸಬೇಕೆಂಬ ಭಾವನೆಯಿಂದ ನಳಿನಿ ಪ್ಲೇ ಕಾರ್ಡ್ ಪ್ರದರ್ಶಿಸಿದ್ದಾಳೆ. ಇದರ ವಿರುದ್ಧ ಮೈಸೂರು ವಕೀಲರ ಸಂಘ ವಕಾಲತ್ತು ಹಾಕದೆ ನಿರ್ಣಯ ಕೈಗೊಂಡಿರುವುದು ಸರಿಯಲ್ಲ. ಇದನ್ನು ಪ್ರಶ್ನೆ ಮಾಡಿದ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಮೇಲೆ ವಕೀಲರಿಂದ ಹಲ್ಲೆಗೆ ಯತ್ನ ನಡೆಸಲಾಗಿದೆ.ಇಂತಹ ಗೂಂಡಾಗಿರಿಯನ್ನು ಖಂಡಿಸುವುದಾಗಿ ಹೇಳಿದರು.
ಬಾಂಗ್ಲಾ ವಲಸಿಗರ ಶೆಡ್ಡುಗಳ ತೆರವು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಕ್ರಮ ವಲಸಿಗರಿಗೆ ಮೊದಲು ಉಳಿದುಕೊಳ್ಳಲು ಸ್ಥಳ ಕೊಟ್ಟವರು ಇದೇ ಇವರೇ. ಸಿಎಎ ಕಾಯ್ದೆಯಡಿ ಬಾಂಗ್ಲಾ ದಿಂದ ಬಂದವರಿಗೆ ಪೌರತ್ವ ಕೊಡುತ್ತೇವೆ ಎನ್ನುತ್ತಾರೆ. ಈಗ ಅವರನ್ನೆ ಓಡಿಸುತ್ತಿದ್ದಾರೆ. ಈಗ ಇವರೇ ಓಡಿಸುತ್ತಿರುವುದು ಯಾವ ರೀತಿಯ ನೀತಿ ಎಂದು ಪ್ರಶ್ನಿಸಿದರು.