1925ರಲ್ಲಿ ಸಾಹಿತ್ಯ ಸಾಧನೆಗಾಗಿ ಪ್ರತಿಷ್ಠಿತ ನೋಬೆಲ್ ಪಾರಿತೋಷಕ ಪಡೆದ ಜಾರ್ಜ್ ಬರ್ನಾರ್ಡ್ ಶಾ ವಿಶ್ವದ ಮಹಾನ್ ನಾಟಕಕಾರರಲ್ಲೊಬ್ಬ. ಆತ ಒಬ್ಬ ಮುಕ್ತವಿಚಾರಧಾರೆಯ ಚಿಂತಕನೂ ಹೌದು. ಮಹಿಳೆಯರ ಹಕ್ಕುಗಳ ಸಮರ್ಥಕನಾಗಿ, ಸಾಹಿತ್ಯ ವಿಮರ್ಶಕ ನಾಗಿ, ಸಾಮಾಜಿಕ ವಕ್ತಾರನಾಗಿ, ಕಾದಂಬರಿಕಾರನಾಗಿ, ಅಷ್ಟೇ ಅಲ್ಲ, ರಾಜಕಾರಣಿಯಾಗಿಯೂ ಆಗಿ ತನ್ನ ಬಹುಮುಖ ಸಾಮರ್ಥ್ಯವನ್ನು ತೋರಿಸಿದ ಶಾ ಹುಟ್ಟಿದ್ದು 1856ರಲ್ಲಿ ಐರ್ಲೆಂಡ್ ನ ಡಬ್ಲಿನ್ ಎಂಬ ನಗರದಲ್ಲಿ. ತಂದೆ ಜಾರ್ಜ್ ಕಾರ್ ಶಾ ಒಬ್ಬ ಸಣ್ಣ ವ್ಯಾಪಾರಿ ಮತ್ತು ತಾಯಿ ಲುಸಿಂಡಾ ಓರ್ವ ವೃತ್ತಿಪರ ಗಾಯಕಿ. ಕುಡಿತದ ಚಟಕ್ಕೆ ಬಿದ್ದ ತಂದೆ ವ್ಯಾಪಾರದಲ್ಲಿ ನಷ್ಟ ಅನುಭವಿಸಿದಾಗ ತಾಯಿ ಸಂಗೀತ ಶಿಕ್ಷಕಿಯಾಗಿ ಕೆಲಸ ಮಾಡಲು ಲಂಡನ್ನಿಗೆ ತೆರಳಿದ್ದರಿಂದ ಶಾ ಮತ್ತು ಅವನ ಇಬ್ಬರು ಸಹೋದರಿ ಯರು ಕೆಲಸದ ಆಳುಗಳ ಕೈಯಲ್ಲಿ ಬೆಳೆಯಬೇಕಾಯಿತು. ಶಾ ಡಾಲ್ಕೆ ಎಂಬಲ್ಲಿ ಶಾಲೆಗೆ ಸೇರಿದ. ಅವನಿಗೆ ಶಾಲೆಗೆ ಹೋಗುವ ಆಸಕ್ತಿ ಇರಲಿಲ್ಲ. ಆದರೆ ಹೋಗಲೇಬೇಕಿತ್ತು. ನಂತರ ಆತ ಸಂಸಾರ ನಿರ್ವಹಣೆಗಾಗಿ ಒಂದು ಎಸ್ಟೇಟ್ ಆಫೀಸಿನಲ್ಲಿ ಕ್ಲಾರ್ಕ್ ಕೆಲಸಕ್ಕೆ ಸೇರಿಕೊಂಡ. ಆತನಿಗೆ ಕೆಲಸದಲ್ಲೂ ಅಷ್ಟೊಂದು ಆಸಕ್ತಿ ಇರಲಿಲ್ಲ. ಆತ ಹೇಗೋ ತನ್ನ ಕಾಲೇಜು ಶಿಕ್ಷಣ ಪೂರ್ತಿಗೊಳಿಸಿದ.
1876ರಲ್ಲಿ ಶಾ ತನ್ನ ಬರವಣಿಗೆಯ ಕಡೆಗೆ ಗಮನ ಕೊಡಲು ನಿರ್ಧರಿಸಿದ. ಆದ್ದರಿಂದ ಆತ ತನ್ನ ಮನೆ ಬಿಟ್ಟು ಲಂಡನ್ನಿಗೆ ತೆರಳಿದ. ಅಲ್ಲಿ ಆತ ತನ್ನ ತಾಯಿ ಮತ್ತು ತಂಗಿಯರ ಜೊತೆ ವಾಸಿಸತೊಡಗಿದ. ಮುಂದೆ 30 ವರ್ಷಗಳ ಕಾಲ ಆತ ಐರ್ಲೆಂಡ್ ಗೆ ಮರಳಲಿಲ್ಲ.
ಲಂಡನ್ನಿನಲ್ಲಿ ಶಾ ಪತ್ರಕರ್ತ ಬರೆಹಗಾರನಾಗಿ ತನ್ನ ಬದುಕು ಆರಂಭಿಸಿದ. ಗ್ರಂಥಾಲಯ ಗಳಿಗೆ ಹೋಗಿ ತನ್ನ ಜ್ಞಾನ ವರ್ಧಿಸಿಕೊಂಡ. ಇದರಿಂದ ಅವನ ಸಾಹಿತ್ಯ ರಚನೆಗೆ ಬಲ ಸಿಕ್ಕಿತು. ಆತ ತನ್ನ ಬರವಣಿಗೆಗೆ ಗದ್ಯವನ್ನು ಆಯ್ಕೆ ಮಾಡಿಕೊಂಡ. ಮೊದಲು ಅವನು ಐದು ಕಾದಂಬರಿಗಳನ್ನು ಬರೆದ. ಆದರೆ ಅವು ಯಾವವೂ ಪ್ರಕಟಗೊಳ್ಳಲಿಲ್ಲ. ಆತನ ಕೃತಿಗಳು ಹೆಚ್ಚಾಗಿ ತಂದೆ ಮಕ್ಕಳ ಸಮಸ್ಯಾತ್ಮಕ ಬದುಕಿನ ಕುರಿತಾಗಿಯೇ ಇರುತ್ತಿದ್ದವು. ತಂದೆ ಮಕ್ಕಳ ನಡುವಿನ ಬಾಂಧವ್ಯದ ಬಗ್ಗೆ ಅವನಲ್ಲಿ ಬಹಳ ಕಾಳಜಿಯಿತ್ತು. ಆತ ವೇದಿಕೆಯ ಮೇಲೆ ಭಾಷಣ ಮಾಡುವದಕ್ಕೆ ಹಿಂಜರಿಯುತ್ತಿದ್ದ. ಆ ಭಯದಿಂದ ಹೊರಬರಲು ಆತ ಪ್ರಯತ್ನ ನಡೆಸಿದ. ಪ್ರಸಿದ್ಧ ಹೈಡ್ ಪಾರ್ಕಿನ ಒಂದು ಮೂಲೆಯಲ್ಲಿ ಸೋಪ್ ಬಾಕ್ಸ್‌ಗಳ ಮೇಲೆ ನಿಂತು ಆತ ಜನರಿಲ್ಲದಾಗಲೂ ತನಗೆ ತಾನೇ ದೊಡ್ಡ ದನಿಯಲ್ಲಿ ಮಾತಾಡುತ್ತಿದ್ದ. ಇದರಿಂದ ಕ್ರಮೇಣ ಅವನಲ್ಲಿ ಭಾಷಣ ಮಾಡುವ ಕಲೆ ಕರಗತವಾಯಿತು.
ಬರ್ನಾರ್ಡ್ ಶಾ ನ ಮತ್ತೊಂದು ಆಸಕ್ತಿ ಸಮಾಜವಾದದ ಕಡೆಗಿತ್ತು. ಆತ ಹೆನ್ರಿ ಜಾರ್ಜ್ ನ ಭೂರಾಷ್ಟ್ರೀಕರಣದ ಮೇಲಿನ ಭಾಷಣಗಳಿಂದ ಪ್ರಭಾವಿತನಾಗಿ ರಾಜಕೀಯ ಒಲವನ್ನೂ ಹೊಂದಿದ. ಮತ್ತು ಆತ ಸೋಶಿಯಲ್ ಡೆಮಾಕ್ರಟಿಕ್ ಫೆಡರೇಶನ್ ಸದಸ್ಯನಾದ. ಅಲ್ಲಿ ಈತನಿಗೆ ಕಾರ್ಲ್ ಮಾರ್ಕ್ಸನ ಕೃತಿಗಳಿಗೆ ಸಂಬಂಧಿಸಿದ ಕೆಲಸ ಒಪ್ಪಿಸಲಾಯಿತು. ಮುಂದೆ ಆತ ಫೇಬಿನ್ ಸೊಸೈಟಿ ಸೇರಿದ. ಬ್ರಿಟನ್ನನ್ನು ಸಮಾಜವಾದಿ ವ್ಯವಸ್ಥೆಗೆ ಒಳಪಡಿಸಲು ಈ ಸೊಸೈಟಿ ಉದ್ದೇಶಿಸಿತ್ತು. ಪ್ರಸಿದ್ಧ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ಮತ್ತು ಲೇಬರ್ ಪಾರ್ಟಿಯನ್ನು ಸ್ಥಾಪಿಸಿದ್ದು ಇದೇ ಸಂಸ್ಥೆ. ಶಾ ಈ ಸಂಸ್ಥೆಯಲ್ಲಿ ಬಹಳ ಮಹತ್ವದ ಪಾತ್ರ ನಿರ್ವಹಿಸಿದ. ಸುಮಾರು 1885 ರಿಂದ 1911 ರವರೆಗೆ ಅದರ ಕಾರ್ಯಕಾರಿಣಿಯಲ್ಲಿ ಆತ ಕಾರ್ಯ ನಿರ್ವಹಿಸಿದ. ಸಂಸ್ಥೆಯ ಪ್ರಕಟನೆಗಳನ್ನೆಲ್ಲ ಅವನೇ ತಯಾರಿಸುತ್ತಿದ್ದ ಮತ್ತು ಭಾಷಣಗಳನ್ನೂ ಮಾಡಿ ಅದರತ್ತ ಜನರ ಗಮನ ಸೆಳೆಯುತ್ತಿದ್ದ. ಆತ ಈ ಮೂಲಕ ಒಬ್ಬ ಪ್ರಸಿದ್ಧ ಸಮಾಜವಾದಿ ನಾಯಕನಾಗಿ ಕಾಣಿಸಿಕೊಂಡ. ಆತ ರಚಿಸಿದ ಮೇಜರ್ ಬಾರ್ಬರಾ ಮತ್ತು ಪಿಗ್ಮೇಲಿನ್ ಮೊದಲಾದ ನಾಟಕಗಳಲ್ಲಿ ಈ ವರ್ಗ ಸಂಘರ್ಷದ ವಿಷಯ ಪ್ರತಿಬಿಂಬಿತವಾಗಿದೆ.
1880ರಲ್ಲಿ ಶಾ "ಸ್ಟಾರ್" ಪತ್ರಿಕೆಯ ಸಂಗೀತ ವಿಮರ್ಶಕನಾಗಿ ಕಾರ್ಯ ನಿರ್ವಹಿಸಿದ. ಆತ ಕೆಲಕಾಲ ಒಂದು ಜಿಲ್ಲಾ ಕೌನ್ಸಿಲರ್ ಆಗಿಯೂ ಕೆಲಸ ಮಾಡಿದ. ಪತ್ರಿಕೆಯಲ್ಲಿ ಆತ ಕೋರ್ನೋ ಡಿ ಬಾಸೆಟ್ಟ್ ಎಂಬ ಹೆಸರಿನಿಂದ ಬರೆಯುತ್ತಿದ್ದ.
ನಂತರ ಶಾನಿಗೆ ಒಂದು ಖಾಸಗಿ ನಾಟಕ ಕಂಪನಿಯಿಂದ ಬಂದ ಕರೆಯಂತೆ ಆತ ಆ ಸಂಸ್ಥೆಗಾಗಿ ನಾಟಕಗಳನ್ನು ಬರೆದುಕೊಡಲು ಒಪ್ಪಿಕೊಂಡ. ಅವನ ಮೊದಲ ನಾಟಕ "ವಿಡೋವರ್ಸ್ ಹೌಸಸ್" ಹೊರಬಂತು. ಮುಂದಿನ ಹನ್ನೆರಡು ವರ್ಷಗಳ ಕಾಲಾವಧಿಯಲ್ಲಿ ಅವನು ಹತ್ತಕ್ಕೂ ಹೆಚ್ಚು ನಾಟಕಗಳನ್ನು ಬರೆದ. ಶಾ ಪತ್ರಿಕೆಯ ನಾಟಕ ವಿಮರ್ಶಕ ನಾಗಿಯೂ ತನ್ನ ಸಾಮರ್ಥ್ಯ ಪ್ರದರ್ಶಿಸಿದ. ಅವೆಲ್ಲ "ಅವರ್ ಥಿಯೇಟರ್ಸ್ ಇನ್ ದಿ ನೈಂಟೀಸ್" ಎಂಬ ಪುಸ್ತಕ ರೂಪದಲ್ಲಿ ಸಂಕಲಿತವಾದವು. ಅದೇರೀತಿ ಸಂಗೀತ ಸಂಬಂಧಿತ ಕೃತಿಯೂ ಪ್ರಕಟಗೊಂಡಿತು.
1898ರಲ್ಲಿ ಶಾ ಐರ್ಲೆಂಡ್ ನ ಶ್ರೀಮಂತ ಮಹಿಳೆ ಚಾರ್ಲೆಟ್ ಎಂಬವಳನ್ನು ವಿವಾಹವಾದ. ನಂತರ ಅವನು ನಾಟಕ ರಚನೆಯತ್ತ ಹೆಚ್ಚಿನ ಗಮನ ಹರಿಸಿದ. ಅವನ ಪ್ರಸಿದ್ಧ ನಾಟಕ ಜಾನ್ ಬುಲ್ಸ್ ಅದರ್ ಐಲ್ಯಾಂಡ್’" ಇಂಗ್ಲೆಂಡ್ ನಲ್ಲಿ ಬಹಳ ಜನಪ್ರಿಯವಾಯಿತು. ಯುನೈಟೆಡ್ ಸ್ಟೇಟ್ಸ್ ಮತ್ತು ಜರ್ಮನಿಗಳಲ್ಲೂ ಅವನು ಜನಪ್ರಿಯ ನಾಗಿದ್ದ. 1904 ರಿಂದ 1907 ರವರೆಗೆ ರಾಯಲ್ ಕೋರ್ಟ್ ಥಿಯೇಟರ್ ಶಾ ನ ಕ್ಯಾಂಡಿಡಾ ಸಹಿತ ಅನೇಕ ನಾಟಕಗಳನ್ನು ಪ್ರದರ್ಶಿಸಿತು. ಆಂಡ್ರೊಕಲ್ಸ್, ದಿ ಲಾಯನ್, ಪಿಗ್ಮೇಲಿಯನ್, ಶಾವಿಯಾನ್, ಮೊದಲಾದ ನಾಟಕಗಳು ಪ್ರದರ್ಶನ ಕಂಡವು.
1914ರಲ್ಲಿ ವಿಶ್ವಯುದ್ಧ ಆರಂಭವಾದಾಗ ಶಾ ಅದರ ವಿರುದ್ಧವೇ ಬರೆಯತೊಡಗಿದ. ಇದರಿಂದ ಸರಕಾರದ ಕೋಪಕ್ಕೂ ಸಿಲುಕಿದ. ಅವನ ಬರವಣಿಗೆ ನಿಂತಿತು. ಆಗ ಆತ ಬರೆದದ್ದು ಹಾಟ್ರ್ಬ್ರಕ್ ಹೌಸ್ ಎಂಬ ಒಂದೇ ನಾಟಕ. ಯುದ್ಧ ಕೊನೆಗೊಂಡ ನಂತರ ಆತ ಮತ್ತೆ ನಾಟಕ ಬರೆಯಲು ಪ್ರಯತ್ನಿಸಿದ. ಆತನ ಇನ್ನೊಂದು ಪ್ರಸಿದ್ಧ ನಾಟಕ "ಸೇಂಟ್ ಜಾನ್" ಅವನ ಶ್ರೇಷ್ಠ ಕೃತಿಗಳಲ್ಲೊಂದೆಂದು ಪರಿಗಣಿಸಲಾಗುತ್ತದೆ. ಆತ ಜೋನ್ ಆಫ್ ಆರ್ಕ್ ಬಗ್ಗೆ ರಚಿಸಿದ ಸಾಹಿತ್ಯ ಅಂತಾರಾಷ್ಟ್ರೀಯ ಖ್ಯಾತಿ ಪಡೆಯಿತು.
1925ರಲ್ಲಿ ಬರ್ನಾರ್ಡ್ ಶಾಗೆ ನೋಬೆಲ್ ಸಾಹಿತ್ಯ ಪಾರಿತೋಷಕ ನೀಡಲಾಯಿತು. ಶಾ ಪ್ರಶಸ್ತಿ ಸ್ವೀಕರಿಸಿದನಾದರೂ ಆ ಹಣವನ್ನು ನಿರಾಕರಿಸಿದ. ಆತ ಆ ವೇಳೆಗಾಗಲೇ ಸಾಕಷ್ಟು ಹಣ ಗಳಿಸಿದ್ದ. ಶಾ ಆ ಹಣವನ್ನು ಇನ್ನೊಬ್ಬ ಸ್ವೀಡಿಶ್ ನಾಟಕಕಾರ ಆಗಸ್ಟ್ ಸ್ಟ್ರಿಂಡ್ ಬರ್ಗನ ನಾಟಕಗಳ ಇಂಗ್ಲೀಷ್ ಆವೃತ್ತಿ ಪ್ರಕಟನೆಗೆ ನೀಡಿ ತನ್ನಹೃದಯ ವೈಶಾಲ್ಯ ಮೆರೆದ. 1920 ರ ವೇಳೆಗೆ ಇಂಗ್ಲೆಂಡ್‌ನಲ್ಲಿ ಶಾ ನಾಟಕೋತ್ಸವವನ್ನು ಏರಿ್ಡಸಲಾಯಿತು. ನ್ಯೂಯಾರ್ಕ್ ನ ಥಿಯೇಟರ್ ಗಿಲ್ಡ್ ಶಾ ನಾಟಕಗಳಿಗೆ ಅಂತಾರಾಷ್ಟ್ರೀಯ ಪ್ರಚಾರ ಒದಗಿಸಿತು. ಜಾಗತಿಕ ಪ್ರಸಿದ್ಧಿ ಪಡೆದ ಶಾನನ್ನು ಸ್ಟಾಲಿನ್ ಆಮಂತ್ರಿಸಿದ. ಸೋಶಲಿಸ್ಟ್ ಶಾ ಸೋವಿಯತ್ ಯೂನಿಯನ್ ಗೆ ಭೆಟ್ಟಿ ನೀಡಿದ.
ಶಾ ತನ್ನ ಉಳಿದ ಜೀವನಾವಧಿ ಪೂರ್ತಿ ನಾಟಕ ರಚನೆ ಮಾಡಿದ. 1943 ರಲ್ಲಿ ಶಾನ ಪತ್ನಿ ನಿಧನ ಹೊಂದಿದಳು. ಶಾ ಸಹ ಅನಾರೋಗ್ಯಕ್ಕೀಡಾದ. ಅತ ತನ್ನ ಉಯಿಲು ಬರೆದ. ತನ್ನ ಆಸ್ತಿಯಲ್ಲಿ ಬಹು ಪಾಲನ್ನು ಆತ ಇಂಗ್ಲಿಷ್ ಅಕ್ಷರಮಾಲೆ ಸುಧಾರಣಾ ಯೋಜನೆಗೆ ದೇಣಿಗೆಯಾಗಿ ನೀಡಿದ. ಶಾ ನ ಸಮಗ್ರ ಕೃತಿಗಳ ಪ್ರಕಟನೆ 36 ಸಂಪುಟಗಳಲ್ಲಿ 1930 ರಿಂದ 50 ರ ಅವಧಿಯಲ್ಲಿ ಪ್ರಕಟಗೊಂಡಿತು.
ಶಾ ಮರಣ ವಿಚಿತ್ರ ರೀತಿಯಲ್ಲಿ ಸಂಭವಿಸಿತು. ಆತ 1950 ರ ನವೆಂಬರ್ 2 ರಂದು ಮನೆ ಹತ್ತಿರದ ಒಂದು ಮರವನ್ನು ಹತ್ತಿ ಅದನ್ನು ಟ್ರಿಮ್ ಮಾಡುತ್ತಿದ್ದಾಗ ಆಯ ತಪ್ಪಿ ಕೆಳಗೆ ಬಿದ್ದು ತೀವ್ರ ಗಾಯಗೊಂಡ. ಕೆಲವು ದಿವಸಗಳಲ್ಲೇ ಅವನು ಕೊನೆಯುಸಿರೆಳೆದ. ಅಗ ಅವನಿಗೆ 94 ವರ್ಷ ವಯಸ್ಸಾಗಿತ್ತು. ಮರಣಾನಂತರ ಅವನ ಬೃಹತ್ ಎಸ್ಟೇಟ್ ಎರಡು ಮೂರು ಸಂಸ್ಥೆಗಳಲ್ಲಿ ಹಂಚಲಾಯಿತು.
ಶಾ ನಾಟಕಗಳು ತಮ್ಮ ಹಾಸ್ಯ, ನಾಟಕೀಯತೆ, ಮತ್ತು ಸಾಮಾಜಿಕ ಚಿಂತನೆಗಳ ಸಂಗಮವಾಗಿ ಇಂದಿಗೂ ಎಲ್ಲೆಡೆ ಮಾನ್ಯತೆ ಪಡೆದಿವೆ. ಅತ ನೆಲೆಸಿದ್ದ ಮನೆ ಇಂದು ರಾಷ್ಟ್ರೀಯ ಟ್ರಸ್ಟ್ ಆಸ್ತಿಯಾಗಿದೆ. ಈ ಸ್ಮಾರಕ ಪ್ರವಾಸೀ ಸ್ಥಳವೂ ಆಗಿದೆ. ಅವನ ನಾಟಕಗಳ ನಿರಂತರ ಪ್ರದರ್ಶನ ನಡೆಯುತ್ತಿದೆ. 1971 ರಲ್ಲಿ ಆತನ ಹೆಸರಿನ ರಂಗಮಂದಿರವೂ ನಿರ್ಮಾಣಗೊಂಡಿದೆ. ಶೇಕ್ಸ್‌ಪಿಯರ್ ನ ನಂತರದಲ್ಲಿ ಬರ್ನಾರ್ಡ್ ಶಾ ನಾಟಕಗಳೇ ಹೆಚ್ಚು ಪ್ರದರ್ಶಿತಗೊಳ್ಳುತ್ತಿವೆ. ಶಾ ತನ್ನ ಕೃತಿಗಳ ಮೂಲಕ ವಿಶ್ವ ಸಾಹಿತ್ಯ ಲೋಕದಲ್ಲಿ ಅಜರಾಮರನಾಗಿದ್ದಾನೆ.
- * * * -