ಡಾ. ಎಲ್. ಜಿ. ಮೀರಾ ಅವರು ಬಹುಮುಖ ವ್ಯಕ್ತಿತ್ವ. ಸ್ತ್ರೀವಾದಿ ಸಾಹಿತ್ಯ ವಿಮರ್ಶೆ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಅವರು ಪ್ರಾಧ್ಯಾಪಕಿ, ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ, ನೃತ್ಯ ಸಂಯೋಜಕಿ. ಅವರು ಸಣ್ಣಕಥೆಗಳು, ಕವನಗಳು, ನಾಟಕಗಳು ಮತ್ತು ವಿಮರ್ಶಾತ್ಮಕ ಪ್ರಬಂಧಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರೆನಿಸಿಕೊಂಡಿದ್ದಾರೆ.
ಡಾ.ಎಲ್.ಜಿ ಮೀರಾ ಅವರು 1972ರ ಜನವರಿ 4ರಂದು ಕೊಡಗಿನ ನೆಮ್ಮಲೆ ಗ್ರಾಮದಲ್ಲಿ ಜನಿಸಿದರು. ತಂದೆ ಎಲ್.ಜಿ ಗುರುರಾಜರಾವ ಸಿವಿಲ್ ಇಂಜಿನಿಯರ್‌ರು. ತಾಯಿ ಯು.ಕೆ ಚಿತ್ರಾವತಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದವರು. ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ ಓದಿದ ಮೀರಾ ಅವರು ಮಂಗಳೂರಿನ ಬೈಕಂಪಾಡಿ ಶಾಲೆಯಲ್ಲಿ 7ನೇ ತರಗತಿ, ಕೆನರಾ ಪ್ರೌಢಶಾಲೆಯಲ್ಲಿ ತಂದೆಯವರ ವರ್ಗಾವಣೆಯಿಂದ ಹತ್ತನೇ ತರಗತಿಯನ್ನು ಪೂರ್ಣಗೊಳಿಸದೇ ಬೆಂಗಳೂರಿನ ವಿಜಯನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿದರು. ನಂತರ ಪಿ.ಯು.ಸಿ ಯನ್ನು ರಾಜಾಜಿನಗರದಲ್ಲಿ ಮತ್ತು ಬಿ.ಎಸ್‌ಸಿ ಪದವಿಯನ್ನು ಬಸವೇಶ್ವರ ನಗರದ ವಿದ್ಯಾವರ್ಧಕ ಸಂಘದ ಕಾಲೇಜಿನಿಂದ ಪಡೆದರು. ಅವರು ಪದವಿ ಮುಗಿಸುವ ಹೊತ್ತಿಗೆ ಭರತನಾಟ್ಯದಲ್ಲಿ ವಿದ್ವತ್ ಹಾಗೂ ಕರ್ನಾಟಕ ಸಂಗೀತದಲ್ಲಿ ಸೀನಿಯರ್ ಪರೀಕ್ಷೆಗಳನ್ನು ಪಾಸಾಗಿದ್ದರು. ಅವರು ದೊಡ್ಡಮ್ಮನ ಪ್ರೇರಣೆಯಿಂದ ಜ್ಞಾನಭಾರತಿಗೆ ಕನ್ನಡ ಎಂ.ಎ ಅಧ್ಯಯನ ಮಾಡಲು ಸೇರಿದರು. ಅವರು ಮೊದಲ ರಾ್ಯಂಕ್ ಪಡೆಯುವುದರೊಂದಿಗೆ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.
ಡಾ.ಎಲ್.ಜಿ.ಮೀರಾ ಅವರು ಪಿಯುಸಿ ಕಾಲೇಜಿನಲ್ಲಿ ಉಪನ್ಯಾಸಕಿ, ಕೇಂದ್ರ ಸರ್ಕಾರದ ಹವಾಮಾನ ಇಲಾಖೆಯಲ್ಲಿ ಕೆಲಸವನ್ನು ಪೂರೈಸಿದ ನಂತರ 1996ರಲ್ಲಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ವೃತ್ತಿಯನ್ನು ಪ್ರಾರಂಭಿಸಿದರು. ನಂತರ ಡಿ. ಆರ.್ ನಾಗರಾಜ ಅವರಲ್ಲಿ ಪಿ.ಎಚ್.ಡಿಯನ್ನು ಪ್ರಾರಂಭಿಸಿದರೂ, ಅವರ ಅಕಾಲಿಕ ಮರಣದಿಂದ ಅದೂ ಪೂರ್ಣಗೊಳ್ಳಲಿಲ್ಲ. ನಂತರ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ಮಾರ್ಗದರ್ಶನದಲ್ಲಿ ‘ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ’ದಲ್ಲಿ ಪಿ.ಹೆಚ್.ಡಿ ಪಡೆದುಕೊಂಡರು. ಅವರು ತಂದೆ-ತಾಯಿಯರ ಇಚ್ಛೆಯಂತೆ ಮದುವೆಯಾಗಿ ಸಂಸಾರ ಲೋಕದಲ್ಲಿ ಮುಳುಗಿದರು. 1993-1999ರ ಅವಧಿಯಲ್ಲಿ ಡಿ.ಆರ್.ನಾಗರಾಜ ಅವರು ಮೂರು ಇಂಗ್ಲೀಷ್ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿಸಿದ್ದರು. ಅವರು ಹೇಳಿದಂತೆ ಅನುವಾದ ಮಾಡುವುದು, ಕಾರ್ಯಕ್ರಮಗಳಲ್ಲಿ ಹಾಡುವುದು, ಪ್ರಬಂಧ ಬರೆಯುವುದು....ಇದೇ ಅವರ ಕೆಲಸವಾಗಿತ್ತು. ಹೀಗಾಗಿ ಸಾಹಿತ್ಯ ಲೋಕದಲ್ಲಿ ಅವರು ಅನುವಾದಕಿ ಎಂದು ಕರೆಯಿಸಿಕೊಂಡರು. ಇದರಿಂದ ಹೊರಬಂದು ಡಾ.ಎಲ್.ಜಿ ಮೀರಾರವರು ‘ಚಿತ್ರಲೇಖಾ’ ಕಾವ್ಯ ನಾಮದಡಿಯಲ್ಲಿ ಕಥೆ, ಕವನಗಳನ್ನು ರಚಿಸಲಾರಂಭಿಸಿದರು. 2007ರಿಂದ ಚಿತ್ರಲೇಖಾ ಹೆಸರಿನಡಿಯಲ್ಲಿ ಕಥೆ, ಕವನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗತೊಡಗಿದವು. ತಮಿಳು ಕಾವ್ಯ ಮೀಮಾಂಸೆ, ಮಾನುಷಿಯ ಮಾತು, ಬಹುಮುಖ, ಆಕಾಶಮಲ್ಲಿಗೆಯ ಘಮ, ಕೆಂಪು ಬಲೂನು ಇತರೆ ಶಿಶುಗೀತೆಗಳು, ರಂಗಶಾಲೆ ಎಂಬ ಮಕ್ಕಳ ನಾಟಕ, ಸ್ತ್ರೀ ಸಂವೇದನೆಗಳಲ್ಲಿ ಕನ್ನಡ ಕಥನ ಸಂಶೋಧನಾ ಮಹಾಪ್ರಬಂಧ, ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ, ಸಂಪಾದನೆ ಕೃತಿ ಮುಂತಾದ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ್ಿಸಿದ್ದಾರೆ. ‘ಆಕಾಶ ಮಲ್ಲಿಗೆಯ ಘಮ, ಕಥಾ ಸಂಕಲದಲ್ಲಿ ಹೆಣ್ಣಿನ ಒಳಮನಸ್ಸನ್ನು ಬಿಚ್ಚಿಡುವ ಕಥೆಗಳಿವೆ. ಪುರುಷನೋಟದ ಲೈಂಗಿಕ ದೃಷ್ಟಿಕೋನದಿಂದ ಅವಳು ಅನುಭವಿಸುವ ಹಿಂಸೆಯ ಕಥೆಗಳಿವೆ. ತಮಿಳು ಕಾವ್ಯ ಮೀಮಾಂಸೆಯು ಡಾ.ಕಾರ್ಲೊಸ ಅವರ ತಮಿಳು ಕೃತಿಯ ಕನ್ನಡ ಅನುವಾದ. ಕೆಂಪು ಬಲೂನು ಇತರೆ ಶಿಶುಗೀತೆಗಳನ್ನು ಅವರೆ ಟ್ಯೂನ್ ಮಾಡಿ, ಹಾಡಿ ಆಡಿಯೋ ಸಿಡಿಯೊಂದನ್ನು ಹೊರತಂದಿದ್ದಾರೆ.
ಡಾ. ಎಲ್. ಜಿ. ಮೀರಾ ಅವರದು ಬಹುಮುಖ ವ್ಯಕ್ತಿತ್ವ. ಅವರು ಕಳೆದ 30 ವರ್ಷಗಳಿಂದ ಭರತನಾಟ್ಯ, ಭಾವನೃತ್ಯ ಮತ್ತು ನೃತ್ಯನಾಟಕಗಳನ್ನು ‘ಚಿತ್ರನಾಟ್ಯ ಫೌಂಡೇಶನ್’ ದಿಂದ ಆರ್ಥಿಕವಾಗಿ ಹಿಂದುಳಿದ ದುರ್ಬಲ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದಾರೆ. ಜನಪದ ರೀತಿಯಲ್ಲಿ ಕಲೆಗಳನ್ನು ಬೆಳೆಸುವ ಈ ಸಂಸ್ಥೆ “ಕಲೆ ಎಲ್ಲರಿಗೂ ಕಲೆ ಬದಲಾವಣೆಗಾಗಿ” ಎಂಬ ಧ್ಯೇಯ ವಾಕ್ಯವನ್ನು ಹೊಂದಿದೆ. 1989ರ ಮೇ 12ರಂದು ಗುರು ಉಷಾ ದಾತರ್ ಅವರ ನೇತೃತ್ವದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗ ಪ್ರವೇಶ ಮಾಡಿದರು. ಅವರ ನೃತ್ಯ ಸಂಯೋಜನೆ ಮತ್ತು ಪ್ರಸ್ತುತ ಪಡಿಸಿದ ನೃತ್ಯ ನಾಟಕಗಳು ಸೃಜನಾತ್ಮಕ ಕಲ್ಪನೆಗಳನ್ನು ಹೊಂದಿದ್ದು ಅದ್ಭುತವಾಗಿವೆ. ಚಿತ್ರನಾಟ್ಯ ಪೌಂಡೇಶನ್‌ವು ಪುಸ್ತಕ ಪ್ರಕಾಶನವನ್ನು ಹೊಂದಿದ್ದು, ಹಲವು ಪುಸ್ತಕಗಳನ್ನು ಹೊರತಂದಿದೆ. “ಸಂಗೀತ, ನೃತ್ಯಗಳು ನನ್ನ ಎರಡು ರೆಕ್ಕೆಗಳಿದ್ದಂತೆ, ಸಾಹಿತ್ಯ ನನ್ನ ಆತ್ಮವಿದ್ದಂತೆ. ಈ ಮೂರು ನನಗೆ ಬೇಕೆ ಬೇಕು. ಅವನ್ನು ನಾನು ಬಿಟ್ಟಿರಲಾರೆ” ಎಂದು ಡಾ.ಎಲ್.ಜಿ ಮೀರಾ ಸಂತಸದಿಂದ ಹೇಳುತ್ತಾರೆ. ಸಧ್ಯ ಅವರು ಪತಿ, ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಅವರ ಬಹುಮುಖ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಕರ್ನಾಟಕ ಲೇಖಕಿಯರ ಸಂಘದಿಂದ ಗುಡಿಬಂಡೆ ಪೂರ್ಣಿಮಾ ದತ್ತಿ ನಿಧಿ ಬಹುಮಾನ, ಪಾಟೀಲ ಪುಟ್ಟಪ್ಪ ಕಥಾ ಪ್ರಶಸ್ತಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಬಹುಮಾನ, ಬುದ್ಧ ಪ್ರಶಸ್ತಿ, ಸಂಕ್ರಮಣ ಕಾವ್ಯ ಬಹುಮಾನ, ರಂಗಶಾಲೆ ಕೃತಿಗೆ ಗುಣಸಾಗರಿ ನಾಗರಾಜು ದತ್ತಿ ಬಹುಮಾನ ಹೀಗೆ ಹತ್ತು ಹಲವು ಪ್ರಶಸ್ತಿಗಳು ಅವರಿಗೆ ಲಭಿಸಿವೆ.
- * * * -