ಆಹ್ಲಾದಕರ ವಾತಾವರಣದ ಬೆಳಗಾವಿ ಜಿಲ್ಲೆಯ ವೈಶಿಷ್ಟ್ಯಗಳು

ಇಂದಿನ ಬೆಳಗಾವಿ ಜಿಲ್ಲೆ ರೂಪುಗೊಳ್ಳಲು ಪ್ರಾರಂಭವಾದದ್ದು ಬ್ರಿಟಿಷರ ಆಳ್ವಿಕೆಯಲ್ಲಿ. ಎರಡನೆಯ ಬಾಜೀರಾವ್ ಪೇಶ್ವೆಯ ಆಧೀನದಲ್ಲಿದ್ದ ದಕ್ಷಿಣ ಮಹಾರಾಷ್ಟ್ರದ "ದುವಾಬ" ಎಂಬ ಪ್ರದೇಶವನ್ನು ವಶಪಡಿಸಿಕೊಂಡು 1838ರಲ್ಲಿ ಅದನ್ನು ಎರಡು ಭಾಗ ಮಾಡಿ ಒಂದನ್ನು ಧಾರವಾಡ ಜಿಲ್ಲೆ ಎಂದು ಮತ್ತು ಇನ್ನೊಂದನ್ನು ಬೆಕಗಾವಿ ಜಿಲ್ಲೆ ಎಂದು ಹೆಸರಿಸಲಾಯಿತು. ಆಗಿನ ಬೆಳಗಾವಿ ಜಿಲ್ಲೆಯಲ್ಲೂ  ಹತ್ತು ತಾಲೂಕುಗಳೇ ಇದ್ದವು. ಆದರೆ ಅವು ಈಗ ಇರುವ ತಾಲೂಕುಗಳಾಗಿರಲಿಲ್ಲ. ಪಾಚ್ಛಾಪುರ, ಸಂಪಗಾವಿ, ಬೀಡಿ, ಚಿಕ್ಕೋಡಿ, ಪರಸಗಡಗಳೊಂದಿಗೆ ಬಾಗಲಕೋಟ, ಬಾದಾಮಿ, ಹುನಗುಂದ, ಇಂಡಿ ಮತ್ತು ಮುದ್ದೇಬಿಹಾಳಗಳು ಸೇರಿಕೊಂಡಿದ್ದವು. ಮುಂದೆ ಹಲವು ಬದಲಾವಣೆಗಳನ್ನು ಕಾಣುತ್ತ ಸ್ವಾತಂತ್ರ್ಯಾನಂತರದಲ್ಲಿಯೂ ಕೆಲವು ಬದಲಾವಣೆಯಾಗಿ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ ನವೀನ ಬೆಳಗಾವಿಯಲ್ಲಿ ಈಗ ಇರುವ ಹತ್ತು ತಾಲೂಕುಗಳನ್ನೊಳಗೊಂಡ ಜಿಲ್ಲೆ ರೂಪುಗೊಂಡಿತು. (ಈಚೆಗೆ ಮತ್ತೆ ಕೆಲ ಹೊಸ ತಾಲೂಕುಗಳು ರಚನೆಯಾಗಿವೆ).   

ಆದರೆ ವಾಸ್ತವವಾಗಿ ಬೆಳಗಾವಿ ಪ್ರದೇಶದ ಇತಿಹಾಸ ಸಾಕಷ್ಟು ದೀರ್ಘವಾದದ್ದೂ, ಅನೇಕ ಸ್ವಾರಸ್ಯಕರ ಅಂಶಗಳಿಂದಲೂ ಕೂಡಿದೆ.  ಬೇರೆ ಬೇರೆ ಹೆಸರುಗಳನ್ನು ಪಡೆದುಕೊಳ್ಳುತ್ತ ಬಂದ ಈ ಪ್ರದೇಶ ಪ್ರಾಗೈತಿಹಾಸ ಕಾಲದ ನಂಟನ್ನೂ ಹೊಂದಿರುವದು ಹಲವು ಉತ್ಖನನಗಳಿಂದ ಸ್ಪಷ್ಟವಾಗಿದೆ. ಇಲ್ಲಿಯ ಘಟಪ್ರಭಾ ಮತ್ತು ಮಲಪ್ರಭಾ ನದೀತೀರದಲ್ಲಿ ಹಳೆಯ ಶಿಲಾಯುಗದ ಶಿಲಾಯುಧಗಳು, ಪ್ರಾಣಿಗಳ ಪಳೆಯುಳಿಕೆಗಳು ದೊರಕಿವೆ. ಪೌರಾಣಿಕ ಹಿನ್ನೆಲೆಯಲ್ಲೂ ಕಾಣಿಸಿಕೊಳ್ಳುವ ಬೆಳಗಾವಿಯಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಐದು ರಾಮತೀರ್ಥಗಳು, ರಾಮದುರ್ಗ, ಶಬರಿಕೊಳ್ಳ,, ರೇಣುಕಾದೇವಿಗೆ ಸಂಬಂಧಿಸಿದ ಯಲ್ಲಮ್ಮನಗುಡ್ಡ, ಜಾಂಬವಂತೆಯ ಕತೆಗೆ ಸಂಬಂಧಿಸಿದ ಜಾಂಬೋಟಿ ಮೊದಲಾದವುಗಳನ್ನಿದಕ್ಕೆ ಉದಾಹರಿಸಬಹುದು.   

ಬೆಳಗಾವಿಯ ವಡಗಾಂವ-ಮಾಧವಪುರಗಳು ಎರಡು ಸಾವಿರ ವರ್ಷಗಳ ಹಿಂದೆಯೇ ಬಹು ದೊಡ್ಡ ವ್ಯಾಪಾರ ಕೇಂದ್ರವಾಗಿತ್ತೆನ್ನುವುದು ಅಲ್ಲಿ ದೊರಕಿದ ಪ್ರಾಕೃತ ಶಾಸನದಿಂದ ತಿಳಿದುಬರುತ್ತದೆ. ಇದು ಕ್ರಿ.ಶ. 1ನೆಯ ಶತಮಾನದ ಶಾಸನ.  ಇಲ್ಲಿಯ ಶಹಾಪುರ ಪುರಾತನ ಕಾಲದಲ್ಲೇ ದಕ್ಷಿಣ ಭಾರತದ ಬೆಳ್ಳಿ ಬಂಗಾರದ ವ್ಯಾಪಾರ ಕೇಂದ್ರವೆನಿಸಿತ್ತು. ಇದೇ ಶಹಾಪುರದ ಸುತ್ತ 1550ರ ಸುಮಾರಿಗೆ ಸರದಾರ ಶೇರಖಾನ್ ಎಂಬಾತ ನಗರ ಗೋಡೆ ಕಟ್ಟಿದ್ದನೆಂದು ಮುಂಬೈ ಗೆಜೆಟ್ (1893) ಹೇಳಿದೆ.  

ಬೆಳಗಾವಿ ಹಲವು ರಾಜಮನೆತನಗಳ ಆಳ್ವಿಕೆಯನ್ನು ಕಂಡಿದೆ. ಇದಕ್ಕೆ ಕುಂತಳನಾಡು ಎಂಬ ಹೆಸರೂ ಇತ್ತು. ಕುಂತಳಾಧೀಶ್ವರರಾದ ಶಾತವಾಹನರ ಆಡಳಿತಕ್ಕೆ ಒಳಪಟ್ಟ ಈ ಪ್ರದೇಶವನ್ನು ಐದನೇ ಶತಮಾನದಿಂದೀಚೆ ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಕಳಚೂರ್ಯರು, ದೇವಗಿರಿ ಯಾದವರು, ರಟ್ಟರು, ವಿಜಯನಗರದರಸರು ಇವರೆಲ್ಲ ಆಳಿದ್ದಾರೆ. 1422ರ ನಂತದ ಬಹಮನಿ ಸುಲ್ತಾನರು, ವಿಜಾಪುರ ಆದಿಲಶಾಹಿಗಳು, ಮರಾಠಾ ಪೇಶ್ವೆಗಳು ಇವರೆಲ್ಲ ಬೆಳಗಾವಿಯ ಮೇಲೆ ಆಧಿಪತ್ಯ ಸ್ಥಾಪಿಸಿದರು. ಖಾನಾಪುರದ ಹತ್ತಿರವಿರುವ ಹಲಸಿ (ಪಲಶಿ/ ಪಲಾಶಿಕಾ) ಕದಂಬರ ಎರಡನೆ ರಾಜಧಾನಿಯೂ ಆಗಿತ್ತು. ಈಗ ಬೆಳಗಾವಿ ನಗರದ ನಡುವೆ ಕಾಣಸಿಗುವ ಕಲ್ಲಿನ ಕೋಟೆ ಸುಗಂಧವರ್ತಿ ರಟ್ಟರ ಕಾಲದಲ್ಲಿ ನಿರ್ಮಾಣಗೊಂಡಿದ್ದು ರಟ್ಟ ರಾಜ ಗೋವಾ ಕದಂಬರನ್ನು ಸೋಲಿಸಿ ವೇಣುಗ್ರಾಮ-70ನ್ನು ತನ್ನ ರಾಜಧಾನಿಯನ್ನಾಗಿಸಿಕೊಂಡ. 1204ರ ರಟ್ಟರ ಶಾಸನ ಬೆಳಗಾವಿ ಅವರ ವಾಣಿಜ್ಯ ರಾಜಧಾನಿಯಾಗಿತ್ತೆಂದು ತಿಳಿಸುತ್ತದೆ.  ಬಹಮನಿ ಆಡಳಿತ ಕಾಲದಲ್ಲಿ ಮುಸ್ತಫಾ ಎಂಬ ಸರದಾರನು ಕೋಟೆಯ ರಕ್ಷಕನಾಗಿದ್ದಾಗ ಬೆಳಗಾವಿಯನ್ನು ಮುಸ್ತಫಾಬಾದ ಎಂದು ಮತ್ತು ಓರಂಗಜೇಬನ ಎರಡನೆಯ ಮಗ ಆಜಂ ಕಾಲದಲ್ಲಿ ಅಜಂನಗರ ಎಂದು ಕರೆಯಲಾಗುತ್ತಿತ್ತೆನ್ನಲಾಗಿದೆ.  

ಬೆಳಗಾವಿ ಬೇರೆ ಬೇರೆ ಕಾಲಘಟ್ಟದಲ್ಲಿ ಬೇರೆಬೇರೆ ಹೆಸರುಗಳಿಂದ ಕರೆಯಲ್ಪಡುತ್ತಬಂದು ಕೊನೆಗೆ ಬೆಳಗಾವಿ ಎಂಬ ಹೆಸರು ಪಡೆದುಕೊಂಡಿತು. ದಟ್ಟ ಕಾಡಿನಿಂದ ಕೂಡಿದ್ದ ಈ ಭಾಗದಲ್ಕಿ ಬಿದಿರು ಮೆಳೆಗಳು ಬಹಳ ದೊಡ್ಡ ಪ್ರಮಾಣದಲ್ಲಿದ್ದುದರಿಂದ ಇದಕ್ಕೆ ವೇಣು (ಕೊಳಲು ಮಾಡುವ ಬಿದಿರು)ಗ್ರಾಮ/ವೇಳುಗ್ರಾಮ/ ವೇಳುಗಾಮೆ/ಬೆಳಗುಗ್ರಾಮ/ ಬೆಳುಗಾಮ/ ಬೆಳಗಾವಿ ಈ ರೀತಿ ಹೆಸರಿನ ಬೆಳವಣಿಗೆ- ಬದಲಾವಣೆ ಕಂಡಿದೆಯೆನ್ನಬಹುದು.  

18ನೆಯ ಶತಮಾನದ ಉತ್ತರಾರ್ಧದಲ್ಲಿ ಬೆಳಗಾವಿಯ ರಾಜಕೀಯ ಇತಿಹಾಸ ಸಂಕೀರ್ಣ ಸ್ವರೂಪ ಪಡೆಯುತ್ತ ಪೇಶ್ವೆ, ಸಾಂಗ್ಲಿ ಪಟವರ್ಧನರು, ಕೊಲ್ಲಾಪುರದ ಛತ್ರಪತಿಗಳು, ಸವಣೂರಿನ ನವಾಬರು, ಹೈದರಾಲಿ, ಟಿಪ್ಪು ಮೊದಲಾದವರ ಕೈಯಿಂದ ಕಯಗೆ ಬದಲಾಗಿ ನಂತರ ಸಂಸ್ಥಾನಿಕರ, ವತನದಾರರ, ದೇಶಪಾಂಡೆ/ ದೇಸಾಯಿಗಳ ಪ್ರಾಬಲ್ಯವನ್ನೂ ಕಂಡಿತು. ಕಿತ್ತೂರು, ನಿಪ್ಪಾಣಿ, ವಂಟಮೂರಿ, ಚಚಡಿ, ನನದಿ, ತಲ್ಲೂರು, ಸಿರಸಂಗಿ, ಬೆಳವಡಿ, ರಾಮದುರ್ಗ ಮೊದಲಾದ ದೇಸಗತಿ ಮನೆತನಗಳು ಕಾಣಿಸಿಕೊಂಡವು. ಸಣ್ಣಸಣ್ಣ ಸಂಸ್ಥಾನಗಳು ತಲೆಯೆತ್ತಿದವು. ಅಂದಿನ ಹಲವು ವಾಡೆಗಳು ಇಂದಿಗೂ ಬೆಳಗಾವಿ ಜಿಲ್ಲೆಯ ವೈಶಿಷ್ಟ್ಯಗಳಾಗಿ ಆಕರ್ಷಣೆ ಹೊಂದಿವೆ.   

1818 ರಿಂದ ಬೆಳಗಾವಿ ಬ್ರಿಟಿಷರ ಆಡಳಿತಕ್ಕೊಳಗಾಯಿತು. 1859ರಲ್ಲಿ ಬೆಳಗಾವಿ ಮುನಸಿಪಾಲಿಟಿ ರಚನೆಯಾಗಿ 1877ರಲ್ಲಿ ಇದರ ಮೊದಲ ಚುನಾವಣೆ ನಡೆಯಿತು. 1977ರಲ್ಲಿ ಬೆಳಗಾವಿ ಮಹಾನಗರಸಭೆ ರಚನೆಯಾಯಿತು. ಸ್ವಾತಂತ್ರ್ಯದ ನಂತರ ಮೊದಲು ಬೆಳಗಾವಿ ಮುಂಬಯಿ ಪ್ರಾಂತದ ಭಾಗವೇ ಆಗಿತ್ತು. 1956ರಲ್ಲಿ ಭಾಷಾವಾರು ಪ್ರಾಂತಗಳು ರಚನೆಗೊಂಡ ನಂತರ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿ ಉಳಿದುಕೊಂಡಿತು. 

ಬೆಳಗಾವಿಯ ಕುರಿತು ಹೆಮ್ಮೆ ಪಡುವಂತಹ ಹಲವು ಸಂಗತಿಗಳಿವೆ. 1857ರಲ್ಲಿ ಝಾಂಸಿ ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಕ್ಕಿಂತ 33 ವರ್ಷ ಮೊದಲು ಕಿತ್ತೂರು ರಾಣಿ ಚೆನ್ನಮ್ಮ 1824 ರಲ್ಲಿಯೇ ಬ್ರಿಟಿಷರ ವಿರುದ್ಧ ಹೋರಾಡಿದ ವಿಷಯ ರಾಷ್ಟ್ರೀಯ ಇತಿಹಾಸದಲ್ಲಿ ದಾಖಲಾಗಬೇಕಾಗಿದೆ. ಬೆಳವಡಿಯ ಮಲ್ಲಮ್ಮ ರಾಣಿ ಮೊದಲ ಮಹಿಳಾ ಸೈನ್ಯ ಕಟ್ಟಿ ಛತ್ರಪತಿ ಶಿವಾಜಿಯ ಸಯನ್ಯವನ್ನೇ ಹಿಮ್ಮೆಟ್ಟಿಸಿ ಶಿವಾಜಿಯ ಮೆಚ್ಚುಗೆ ಪಡೆದ ಸಂಗತಿ ಸಣ್ಣದೇನಲ್ಲ. ಮುಂದೆ ಸರಿಯಾಗಿ ನೂರು ವರ್ಷಗಳ ನಂತರ 1924ರಲ್ಲಿ ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯ ಏಕೈಕ ಕಾಂಗ್ರೆಸ್ ಮಹಾಧಿವೇಶನ ಬೆಳಗಾವಿಯಲ್ಲಿ ಜರುಗಿತು. ಗಾಂಧಿಯವರು  ಕಾಂಗ್ರೆಸ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದುದೂ ಅದೊಂದೇ ಸಲ. ಈ ಅಧಿವೇಶನ ಹಲವು ವೈಶಿಷ್ಟ್ಯಗಳನ್ನು ಹೊಂದಿತ್ತು. ಅಧಿವೇಶನ ನಡೆದ ಸ್ಥಳಕ್ಕೆ ವಿಜಯನಗರವೆಂದೂ, ಅ ಸಂದರ್ಭಕ್ಕೆಂದೇ ನಿರ್ಮಿಸಲಾದ ಬೃಹದಾಕಾರದ ಬಾವಿಗೆ ಪಂಪಾಸರೋವರವೆಂದೂ ಹೆಸರಿಡಲಾಗಿತ್ತು. ಅಧಿವೇಶನದ ಸ್ವಾಗತ ಗೀತೆಯನ್ನು ಹಾಡುವವರಲ್ಲಿ ಆಗಿನ್ನೂ ಹನ್ನೆರಡು ವರುಷದವರಾದ ಖ್ಯಾತ ಸಂಗೀತ ಕಲಾವಿದರಾದ ಡಾ. ಗಂಗೂಬಾಯಿ ಹಾನಗಲ್ ಅವರೂ ಒಬ್ಬರಾಗಿದ್ದರು ಮತ್ತು ಹುಯಿಲಗೋಳ ನಾರಾಯಣರು ತಾವು ಬರೆದ.  “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎಂಬ ಹಾಡನ್ನು ತಾವೇ ಮೋಹನ ರಾಗದಲ್ಲಿ ಪ್ರಸ್ತುತ ಪಡಿಸಿದ್ದರು. ಹಿರಿಯ ಕನ್ನಡ ಮುಖಂಡರೂ ಸ್ವಾತಂತ್ರ್ಯ ಹೋರಾಟಗಾರೂ ಆಗಿದ್ದ ಕರ್ನಾಟಕ ಸಿಂಹ ಗಂಗಾಧರರರಾವ್ ದೇಶಪಾಂಡೆ ಮತ್ತು ಯಾಳಗಿ ಕುಟುಂಬದವರ ನೇತೃತ್ವದಲ್ಲಿ  ಆ ಅಧಿವೇಶನ ಅಭೂತಪೂರ್ವ ರೀತಿಯಲ್ಲಿ ನಡೆದು ಬೆಳಗಾವಿಗೆ ಕೀರ್ತಿ ತಂದಿತು. ಅಧಿವೇಶನಕ್ಕಾಗಿ ತೋಡಿದ ಬಾವಿಯನ್ನು ಕಾಂಗ್ರೆಸ್ ಬಾವಿಯೆಂದೇ ಕರೆಯಲಾಗುತ್ತಿದೆ. ಅಲ್ಲದೇ ಮಹಾತ್ಮಾ ಗಾಂಧೀಜಿಯವರು ಬೆಳಗಾವಿ ಸಮೀಪದ ಹುದಲಿಯಲ್ಲಿ ವಾಸ್ತವ್ಯವನ್ನು ಹೂಡಿದ ನೆನಪಿಗಾಗಿ ಅಲ್ಲಿ ಗಾಂಧೀಜಿಯವರ ಸ್ಮಾರಕವನ್ನೂ ನಿರ್ಮಿಸಲಾಗಿದೆ. ಗಾಂಧಿಜಿಯವರ ಧ್ಯೇಯೋದ್ದೇಶಗಳ ಅನುಷ್ಠಾನಕ್ಕೆ ದೇಶದ ಆರು ಕಡೆ ಆಶ್ರಮಗಳನ್ನು ನಿರ್ಮಿಸಲಾಗಿತ್ತುಅವುಗಳಲ್ಲಿ ಹುದಲಿ ಸಮೀಪದ ಕುಮರಿ ಆಶ್ರಮವೂ ಒಂದು ಎನ್ನುವುದು ಗಮನಾರ್ಹ.   

ಬೆಳಗಾವಿ ನಗರ ಪ್ರವೇಶಿಸುತ್ತಿದ್ದಂತೆಯೇ ವಿಶಾಲವಾದ ಕೆರೆಯ ಮನೋಹರ ದೃಶ್ಯ ಆಗಂತುಕರನ್ನು ಸ್ವಾಗತಿಸಿದರೆ, ಅದರ ಎದುರಿಗೇ ಬೆಳಗಾವಿಯ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತ ಕಲ್ಲಿನ ಕೋಟೆ ನೂರು ಎಕರೆಯಷ್ಟು ಸುತ್ತಳತೆಯಲ್ಲಿ ಕಾಣಸಿಗುತ್ತದೆ. ಜಕ್ಕರಾಜನೆಂಬ ಜೈನ ಅರಸನು ಕಟ್ಟಿಸಿದ ಈ ಕೋಟೆಯನ್ನು ನಂತರ ಅದನ್ನು ಆಕ್ರಮಿಸಿಕೊಂಡ ಆದಿಲಶಾಹಿಗಳು, ರಟ್ಟರು ಪುನರುಜ್ಜೀವನಗೊಳಿಸಿದರೆನ್ನಲಾಗಿದೆ. ಈ ಕೋಟೆಯಲ್ಲಿರುವ ಪುರಾತನ ಕಮಲ ಬಸದಿ ಆಕರ್ಷಕವಾಗಿದೆ. ಕೋಟೆಯ ಸುತ್ತ ಸದಾ ನೀರು ತುಂಬಿರುವ ಕಂದಕ, ಪ್ರವೇಶ ದ್ವಾರದಲ್ಲಿ ದುರ್ಗಿ ಅಥವಾ ದ್ಯಾಮವ್ವನ ಮೂರ್ತಿ, ಅಸದಖಾನ್ ಕಟ್ಟಿಸಿದ ಸೋಫಾ ಮಸೀದೆಗಳೆಲ್ಲ ಇವೆ. ಎರಡು ದಶಕಗಳೀಚೆ ಕೋಟೆಯ ಒಳಭಾಗದಲ್ಲೇ ಶ್ರೀ ರಾಮಕೃಷ್ಣಾಶ್ರಮದ ಸುಂದರ ಮಂದಿರ ನಿರ್ಮಾಣವಾಗಿದೆಯಲ್ಲದೆ 1892ರಲ್ಲಿ ಬೆಳಗಾವಿಗೆ ಬಂದಿದ್ದ ಸ್ವಾಮಿ ವಿವೇಕಾನಂದರು ಒಂಬತ್ತು ದಿವಸಗಳ ಕಾಲ ನೆಲೆಸಿದ್ದ ನಿವಾಸವನ್ನು ಸ್ಮಾರಕವಾಗಿ ಕಾದಿರಿಸಲಾಗಿದ್ದು ಈಗ ಅದು ಸಂದರ್ಶನೀಯ ಸ್ಥಳವೆನಿಸಿದೆ. ನಗರದ ವಿವಿಧೆಡೆ ಇರುವ ದೇವಾಲಯಗಳಲ್ಲಿ ದಕ್ಷಿಣದ ಕಾಶಿಯೆಂದೇ ಹೇಳಲಾಗುವ ಕಪಿಲೇಶ್ವರ ಮಂದಿರ, ಕ್ಯಾಂಪ್ ಪ್ರದೇಶದ ಮಿಲಿಟರಿ ಮಹಾದೇವ ಮಂದಿರ, ವೀರಭದ್ರ ಗುಡಿ, ಬಸವೇಶ್ವರ ದೇವಾಲಯಗಳು, ವೆಂಕಟರಮಣ ದೇವಾಲಯ, ರಾಮದೇವ ಮಂದಿರ, ಮಾರುತಿ ಗುಡಿ, ವಿಠೋಬನ ಗುಡಿ, ಶನಿಮಂದಿರ ಮೊದಲಾದವು ಹಿಂದೂ ಆಸ್ತಿಕರಿಗೆ ಪೂಜನೀಯವಾಗಿವೆ. ಇವಲ್ಲದೆ ಹಲವು ವೀರಶೈವ ಮಠಗಳು, ರಾಘವೇಂದ್ರಸ್ವಾಮಿ ಮಠಗಳು, ಗ್ರಾಮದೇವತೆಗಳ ಗುಡಿಗಳೂ ಇವೆ.  

1869ರಲ್ಲಿ ನಿರ್ಮಾಣವಾದ ಸೇಂಟ್ ಮೇರಿ ಚರ್ಚ್‌ ಸಹಿತ ಹಲವು ಚರ್ಚುಗಳು ಆಕರ್ಷಣೀಯವಾಗಿವೆ. ಹಲವು ದರ್ಗಾ ಮಸೀದೆಗಳೂ ಇವೆ. 1848ರಲ್ಲಿ ನಿರ್ಮಾಣಗೊಂಡ ಬೆಳಗಾವಿ ನೇಟಿವ್ ಜನರಲ್ ಲೈಬ್ರರಿ ನಗರ ಮಧ್ಯದ ಗಣಪತಿ ಬೀದಿಯಲ್ಲಿದ್ದು ಗಡಿಯಾರದ ಗೋಪುರವುಳ್ಳ ಹಳೆಯ ಮಾದರಿ ಕಟ್ಟಡ ಗಮನ ಸೆಳೆಯುತ್ತದೆ. 1880ಕ್ಕಿಂತ ಮೊದಲೇ ಕಟ್ಟಿಸಿದ್ದೆನ್ನಲಾಗುವ ಬೃಹತ್ ಹಿಂಡಲಗಾ ಜೈಲು ಸಹ ಐತಿಹಾಸಿಕ ಮಹತ್ವ ಪಡೆದಿದೆ. ಇಲ್ಲಿ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಅನೇಕ ರಾಷ್ಟ್ರ ನಾಯಕರನ್ನೊಳಗೊಂಡು ಸಹಸ್ರಾರು ಜನರನ್ನು ಇಲ್ಲಿಡಲಾಗಿತ್ತು. ಏಕಕಾಲಕ್ಕೆ ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡುವ ವ್ಯವಸ್ಥೆಯೂ ಇಲ್ಲಿದೆ. ಈಗ ಹಿಂಡಾಲ್ಕೊ ಎಂದು ಕರೆಯಲ್ಪಡುವ ಬೃಹತ್  ಇಂಡಾಲ ಅಲ್ಯುಮಿನಿಯಮ್ ಕಾರಖಾನೆ ಬೆಳಗಾವಿಯ ಉದ್ಯಮ ಕ್ಷೇತ್ರದಲ್ಲಿ ಶಿಖರಾ​‍್ರಯವಾಗಿದೆ. ವಡಗಾಂವ, ಖಾಸಬಾಗ, ಶಹಾಪೂರ ಭಾಗಗಳು ಬಟ್ಟೆ ತಯಾರಿಕೆ ಉದ್ಯಮಕ್ಕೆ ಹೆಸರಾಗಿದ್ದು ಸಾವಿರಾರು ಕೈಮಗ್ಗಗಳು, ವಿದ್ಯುಚ್ಚಾಲಿತ ಮಗ್ಗಗಳ ಮೂಲಕ ಬಹುದೊಡ್ಡ ನೇಕಾರ ಸಮುದಾಯ ಇಲ್ಲಿ ಕೆಲಸ ಮಾಡುತ್ತಿದೆ. ಇದಕ್ಕೆ ಕರ್ನಾಟಕದ ಲುಧಿಯಾನಾ ಎಂದೂ ಕರೆಯಲಾಗುತ್ತದೆ. ಬೆಳಗಾವಿಯ ವಿಶಿಷ್ಟ  ಸಿಹಿತಿಂಡಿ ಕುಂದಾ ಈ ನಗರಕ್ಕೆ ಕುಂದಾನಗರಿಯೆಂಬ ಹೆಸರು ತಂದುಕೊಟ್ಟಿದೆ.   

ಶೈಕ್ಷಣಿಕ ರಂಗದಲ್ಲಿ ಬೆಳಗಾವಿಯದು ಬಹಳ ದೊಡ್ಡ ಹೆಸರು. (ಪ್ರತ್ಯೇಕ ಲೇಖನದಲ್ಲಿ ವಿವರಗಳಿವೆ). ಪತ್ರಿಕಾ ರಂಗದಲ್ಲಿಯೂ ಬೆಳಗಾವಿಗೆ ಮಹತ್ವದ ಸ್ಥಾನವಿದ್ದು 1849 ರಲ್ಲಿ  ಹೊರತಂದ “ಸುಬುದ್ಧಿ ಪ್ರಕಾಶ “ ಕನ್ನಡದ ಮೊದಲ ವಾರಪತ್ರಿಕೆಯೆನಿಸಿಕೊಂಡಿದೆ. ಇಲ್ಲಿ ಆರಂಭವಾದ ಮಠ ಪತ್ರಿಕೆ ನೂರಯವತ್ತು ವರ್ಷಗಳ ನಂತರವೂ ಜೀವನ ಶಿಕ್ಷಣವೆಂಬ ಹೆಸರಿನಿಂದ ಮುಂದುವರಿದಿದೆ. ಸಾಹಿತ್ಯ ಕ್ಷೇತ್ರಕ್ಕೆ  ಬೆಳಗಾವಿ ಜಿಲ್ಲೆಯ ಕೊಡುಗೆ ಬಹಳ ದೊಡ್ಡದು. ಕನ್ನಡದ ಪ್ರಮುಖ ಲೇಖಕರ ಅಗ್ರಪಂಕ್ತಿಯಲ್ಲಿ ಬೆಟಗೇರಿ ಕೃಷ್ಣ ಶರ್ಮ, ಬಸವರಾಜ ಕಟ್ಟೀಮನಿ, ಕೃಷ್ಣಮೂರ್ತಿ ಪುರಾಣಿಕ, ಆ. ನೆ. ಉಪಾಧ್ಯೆ, ಕೆ. ಜಿ. ಕುಂದಣಗಾರ, ಮಿರ್ಜಿ ಅಣ್ಣಾರಾಯರು, ಡಿ. ಎಸ್‌. ಕರ್ಕಿ, ಎಸ್‌. ಡಿ. ಇಂಚಲ, ಚಂದ್ರಶೇಖರ್ ಕಂಬಾರ ಮೊದಲಾದ ಹೆಸರುಗಳು ಕಂಡುಬರುತ್ತವೆ. ಕುಮಾರ ಗಂಧರ್ವ,  ಜಾನಕಿ ಅಯ್ಯರ್, ಸಂಗಮೇಶ ಗುರವ, ಜಯಶ್ರೀ ಪಾಟಣೇಕರ, ಪಂ. ರಾಮಭಾವೂ ಬಿಜಾಪುರೆ ಮೊದಲಾದವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಯೂ ಬಹಳ ದೊಡ್ಡದು.     

ಇನ್ನು ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳ ಪ್ರೇಕ್ಷಣೀಯ ಸ್ಥಳಗಳಲ್ಲಿ ಸವದತ್ತಿಯ ಯಲ್ಲಮ್ಮನ ಗುಡ್ಡ, ನವಿಲುತೀರ್ಥ ಜಲಾಶಯ, ಸೊಗಲ ಸೋಮೇಶ್ವರ ಮಂದಿರ, ರಾಮದುರ್ಗದ ಶಬರಿಕೊಳ್ಳ, ಗೋಕಾಕ ಬಳಿಯ ಸಾವಳಗಿ ಮಠ, ಪ್ರಸಿದ್ಧ ಗೋಕಾಕ ಜಲಪಾತ, ತೂಗುಸೇತುವೆ, ಗೊಡಚಿನಮಲ್ಕಿ ಜಲಪಾತ, ಖಾನಾಪುರ ಬಳಿಯ ಹಲಶಿ, ಬೆಳಗಾವಿ ಹತ್ತಿರದ ವೈಜನಾಥ, ಪಂತ ಬಾಳೇಕುಂದ್ರಿ, ಸುಳೇಭಾವಿಯ ಲಕ್ಷ್ಮೀಗುಡಿ, ನಂದಗಡದ ಸಂಗೊಳ್ಳಿ ರಾಯಣ್ಣ ಸಮಾಧಿ, ಕಾಕತಿ ಬಳಿಯ ರಾಣಿ ಚೆನ್ನಮ್ಮ ಜನಿಸಿದ ಸ್ಥಳ, ಬೈಲಹೊಂಗಲದಲ್ಲಿರುವ ಚೆನ್ನಮ್ಮನ ಸಮಾಧಿ, ಕೋಥಳಿ ಜೈನ ಬಸದಿಗಳು, ಶಿರಸಂಗಿ ಕಾಳಿಕಾ ದೇವಾಲಯ, ಮುನವಳ್ಳಿಯ ಪಂಚಲಿಂಗೇಶ್ವರ ಕ್ಷೇತ್ರ,  ಕಿತ್ತೂರು ರಾಣಿ ಚೆನ್ನಮ್ಮನ ಕೋಟೆ, ಚಿಂಚಲಿ ಮಾಯಕ್ಕನ ದೇವಸ್ಥಾನ, ನಿಸರ್ಗರಮ್ಯ ಸ್ಥಳ ಅಸೋಗಾ, ಗೊಡಚಿ ವೀರಭದ್ರೇಶ್ವರ ದೇವಾಲಯ, ಇಂತಹ ಅಸಂಖ್ಯಾತ ಪ್ರೇಕ್ಷಣೀಯ ಸ್ಥಳಗಳಿಂದಾಗಿ ಬೆಳಗಾವಿ ಜಿಲ್ಲೆ ಪ್ರವಾಸಿಗರ ಸ್ವರ್ಗವೆನಿಸಿದೆ.  

 ಒಂದು ರೀತಿಯಲ್ಲಿ ಬೆಳಗಾವಿಯನ್ನು “ಮಠಪೀಠಗಳ ಜಿಲ್ಲೆ” ಎಂದೂ ಕರೆಯಬಹುದು. ಪ್ರತಿ ತಾಲೂಕಿನಲ್ಲಿಯೂ ವಿಶೇಷವಾಗಿ ಇರುವ ಲಿಂಗಾಯತ ವೀರಶೈವ ಮಠಗಳು ಬಹಳ ಪ್ರಸಿದ್ಧವಾಗಿವೆಯಲ್ಲದೆ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಅದ್ಭುತ ಬೆಳವಣಿಗೆಗೆ ಕಾರಣವಾಗಿವೆ. ವಿದ್ಯಾದಾನ ಅನ್ನದಾನಗಳ ಮೂಲಕ  ಲಕ್ಷಾಂತರ. ಬಡ, ಅಶಕ್ತ ಮಕ್ಕಳ ಬದುಕಿಗೆ ಬೆಳಕಾಗುತ್ತಬಂದಿವೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬೆಳಗಾವಿ ಜಿಲ್ಲೆ ಮುಂಚೂಣಿಯಲ್ಲಿತ್ತು. ಲೋಕಮಾನ್ಯ ಬಾಲಗಂಗಾಧರ ಟಿಳಕರ ಶಿಷ್ಯರಾದ ಗಂಗಾಧರರಾವ್ ದೇಶಪಾಂಡೆಯವರು 1905-06ರಲ್ಲಿಯೇ ಕರ್ನಾಟಕದಲ್ಲಿ ಹೋರಾಟದ ಕಿಡಿ ಹೊತ್ತಿಸಿದರು. ಬೆಳಗಾವಿ ಜಿಲ್ಲೆಯಲ್ಲಿ ಬ್ರಿಟಿಷರೇ ನಡುಗುವಂತೆ ಉಗ್ರ ಚಳವಳಿ ನಡೆಯಿತು. ಸಹಸ್ರಾರು ಜನ ಜೈಲು ಶಿಕ್ಷೆ ಅನುಭವಿಸಿದರು. ಟಿಳಕರ ಕರೆಯಂತೆ ಅಂದು ಬೆಳಗಾವಿಯಲ್ಲೂ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲಾಯಿತು ಮತ್ತು ಅದು ಶತಮಾನದ ನಂತರವೂ ಮುಂದುವರಿದು ಬೆಳಗಾವಿಯ ಆಕರ್ಷಣೆಗಳಲ್ಲೊಂದಾಗಿದೆ.   

ಬ್ರಿಟಿಷರ ಅವಧಿಯಲ್ಲಿ ಬೆಳಗಾವಿಯಲ್ಲಿ ಸ್ಥಾಪಿಸಿದ ವ್ಯಾಕ್ಸಿನ ಡಿಪೋ ಒಂದು ವಿಶೇಷ ತಾಣ. 1904ರಲ್ಲಿ ಟಿಳಕವಾಡಿ ಭಾಗದಲ್ಲಿ ಆರಂಭವಾದ ಈ ಡಿಪೋದಲ್ಲಿ ಅಗಿನ ಭಯಾನಕ ಮೈಲಿ ರೋಗಕ್ಕೆ ಇಂಜಕ್ಷನ್ ತಯಾರಿಸುವ ಕೆಲಸ ನಡೆದು ಲಕ್ಷಾಂತರ ಜನರ ಪ್ರಾಣ ಉಳಿಸಲು ನೆರವಾಯಿತು. ಅಲ್ಲಿ 40 ದಶಲಕ್ಷದಷ್ಟು ಮೈಲಿ ಇಂಜಕ್ಷನ್‌ಗಳನ್ನು ತಯಾರಿಸಲಾಗಿದೆ. ಆ ಪ್ರದೇಶದಲ್ಲಿ ಉಪಯುಕ್ತ ಓಷಧೀಯ ಸಸ್ಯಗಳನ್ನು ಬೆಳೆಸಲಾಯಿತು. ಈಗಲೂ ಆ ಪ್ರದೇಶವನ್ನು ಕಾದಿಡಲಾಗಿದೆ. ಹಾಗೆಯೇ ಕ್ಯಾಂಪ್ ಪ್ರದೇಶದ ಮರಾಠಾ ಲೈಟ್ ಇನ್ಫೆಂಟ್ರಿ ಮತ್ತು ಸ ಅಂಬ್ರಾ ಬಳಿಯ ಏರ್ ಫೋರ್ಸ್‌ ವಿಮಾನ ತರಬೇತಿ ಕೇಂದ್ರಗಳು ಬೆಳಗಾವಿಯ ಮಹತ್ವ ಹೆಚ್ಚಿಸಿವೆ. ಸುಮಾರು ಬೆಳಗಾವಿ ನಗರದ ಅರ್ದ ಭಾಗದಲ್ಲಿ ವ್ಯಾಪಿಸಿಕೊಂಡಿರುವ ಕ್ಯಾಂಪ್ ಏರಿಯಾ ಮಿಲಿಟರಿಯಿಂದ ಸಂರಕ್ಷಿತ ಪ್ರದೇಶವಾಗಿದ್ದು ದಟ್ಟ ಗಿಡಮರಗಳಿಂದ ಕೂಡಿ ಬೆಳಗಾವಿಯ ವಾತಾವರಣವನ್ನು ಆಹ್ಲಾದಕರವಾಗಿಸಿದೆ. 1961ರಲ್ಲಿ ನಡೆದ ಗೋವಾ ವಿಮೋಚನಾ ಹೋರಾಟದಲ್ಲೂ ಬೆಳಗಾವಿಯಿಂದ ಅಸಂಖ್ಯಾತ ಜನರು ಪಾಲ್ಗೊಂಡು ಹೋರಾಡಿದ್ದು ಸ್ಮರಣಾರ್ಹ.  

ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠ , ಗೋಕಾಕದ ಸಾವಳಗಿ ಭಾವೈಕ್ಯ ಮಠ, ಅರಭಾವಿ ಮಠ, ಅಥಣಿ ಮೋಟಗಿ ಮಠ, ಗಚ್ಚಿನ ಮಠ,  ಚಿಂಚಣಿ ಮಠ, ನಿಡಸೋಸಿ ಮಠ, ಮುಗಳಕೋಡ ಮಠ, ಮುಕ್ತಿಮಠ, ಮುರಗೋಡ ಮಠ, ಅಂಕಲಗಿ ಮಠ, ಹುಕ್ಕೇರಿಯ ಹಿರೇಮಠ, ವಿರಕ್ತಮಠ, ಅಡವಿ ಸಿದ್ಧೇಶ್ವರ ಮಠ  ಮೊದಲಾದವುಗಳು ವೀರಶೈವ ಲಿಂಗಾಯತ ಮಠಗಳಾಗಿ ಪ್ರಸಿದ್ಧಿ ಪಡೆದಿದ್ದು, ತವನಿಧಿ (ಸ್ತವನಿಧಿ)ಯಲ್ಲಿರುವ ಜೈನ ಧರ್ಮದ ಕ್ಷೇತ್ರವೆನಿಸಿದೆ. ರಾಯಬಾಗದ ಜೈನಗಲ್ಲಿಯಲ್ಲಿರುವ ಆದಿನಾಥ ಬಸದಿ, ಬೆಳಗಾವಿ ಕೊಟೆಯಲ್ಲಿರುವ ಕಮಲ ಬಸದಿ ಸಹಿತ ಹಲವು ಜೈನ ಬಸದಿಗಳು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿವೆ. ಬೆಳಗಾವಿಯನ್ನು ಮಲೆನಾಡ ಸೆರಗು ಎಂದು ಬಣ್ಣಿಸಲಾಗುತ್ತದೆ. ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ, ಕೃಷ್ಣಾ, ದೂದಗಂಗಾ, ವೇದಗಂಗಾ, ಹಿರಣ್ಯಕೇಶಿ ಈ ಸಪ್ತನದಿಗಳಿಂದ  ಜಿಲ್ಲೆ ನಿಸರ್ಗರಮ್ಯ ಸ್ಥಳವಾಗುವದರೊಡನೆ, ಮಳೆಬೆಳೆಗಳ ಸಮೃದ್ದಿಯನ್ನೂ ತಂದುಕೊಟ್ಟಿದೆ. ವಜ್ರಪೋ ಜಲಪಾತ, ಕಳಸಾ ಜಲಪಾತ, ಗೋಕಾಕ ಜಲಪಾತ, ಗೊಡಚಿನಮಲ್ಕಿ ಜಲಪಾತ, ಅಂಬೋಲಿ ಜಲಪಾತ ಸಹಾಯ  ಹಲವು ಜಲಪಾತಗಳು ಜಿಲ್ಲೆಗೆ ಸೊಗಸು ತಂದುಕೊಟ್ಟಿವೆ. ನವಿಲುತೀರ್ಥ, ಹಿಡಕಲ್  ಮತ್ತು ರಾಕಸಕೊಪ್ಪ ಜಲಾಶಯಗಳು ಕುಡಿಯುವ ನೀರು, ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿವೆ. ಇಡೀ ಭಾರತದಲ್ಲೇ ಮೊದಲ ಜಲವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣವಾದದ್ದು ಗೋಕಾಕ ಜಲಪಾತದಿಂದ. 1887 ರಲ್ಲಿ ಅದು ನಿರ್ಮಾಣವಾಯಿತಲ್ಲದೇ ಅತಿದೊಡ್ಡ ನೂಲಿನ ಗಿರಣಿಯೂ ಅದೇ ಸ್ಥಳದಲ್ಲಿ ಸ್ಥಾಪಿತವಾಯಿತು. ಅಲ್ಲಿಯ ತೂಗು ಸೇತುವೆಗೂ ಶತಮಾನದ ಇತಿಹಾಸವಿದ್ದು ಪ್ರೇಕ್ಷಣೀಯ ತಾಣವೆನಿಸಿದೆ. ಬೆಳಗಾವಿ ಜಿಲ್ಲೆಯನ್ನು ಸಕ್ಕರೆ ಜಿಲ್ಲೆಯೆಂದೇ ಕರೆಯಬಹುದಾಗಿದ್ದು  ಬಹಳ ದೊಡ್ಡ ಪ್ರಮಾಣದ ಕಬ್ಬು ಉತ್ಪಾದನೆಯಿಂದಾಗಿ ಇಪ್ಪತ್ತಕ್ಕೂ ಹೆಚ್ಚು ಸಕ್ಕರೆ ಕಾರಖಾನೆಗಳು ತಲೆಯೆತ್ತಿವೆ. ಅಥಣಿಯಲ್ಲಿ ತಯಾರಾಗುವ ಚಪ್ಪಲಿಗಳು ಕಾಪಸೆ/ ಕೊಲ್ಲಾಪುರ ಚಪ್ಪಲಿ ಗಳೆಂಬ ಹೆಸರಲ್ಲಿ ಪ್ರಸಿದ್ಧವಾಗಿವೆ. ಚೆನ್ಮ್ಮನ ಕಿತ್ತೂರಿನಲ್ಲಿ ಬಾಲಕಿಯರ ವಸತಿ ಸೈನಿಕ ಶಾಲೆಯಿದೆ. ಚಂದರಗಿಯೆಂಬಲ್ಲಿ ಸಹಕಾರಿ ತತ್ವದ ಮೇಲೆ ರೂಪುಗೊಂಡ ವಸತಿ ಕ್ರೀಡಾಶಾಲೆಯಿದೆ.   

2011ರಲ್ಲಿ ಮೂರು ದಿವಸಗಳ ವಿಶ್ವ ಕನ್ನಡ ಸಮ್ಮೇಳನ ಬೆಳಗಾವಿಯಲ್ಲಿ ಜರುಗಿದ್ದು ಒಂದು ಮಹತ್ವದ ಸಂದರ್ಭ. (ಮೊದಲ ವಿಶ್ವ ಕನ್ನಡ ಸಮ್ಮೇಳನ ಮೈಸೂರಲ್ಲಿ ನಡೆದಿತ್ತು.).  ಅಲ್ಲದೆ ಬೆಳಗಾವಿಯಲ್ಲಿ  ಈತನಕ ಐದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದಿವೆ.  ಆರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಬೆಳಗಾವಿ ಜಿಲ್ಲೆಯ ಸಾಹಿತಿಗಳೇ ಅಧ್ಯಕ್ಷರಾಗಿದ್ದಾರೆ.   

ಇಂತಹ ಅಸಂಖ್ಯಾತ ಹೆಮ್ಮೆಯ ವಿಷಯಗಳಿಂದ ತುಂಬಿದ ಬೆಳಗಾವಿ ಜಿಲ್ಲೆ ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಗಡಿ ಭಾಷಾ ವಿವಾದಕ್ಕೆ ಸಿಲುಕಿಕೊಂಡು ಕೆಲಮಟ್ಟಿಗೆ ಇದರ ಪ್ರಗತಿ ಕುಂಠಿತಗೊಂಡಿದ್ದರೂ ಜಿಲ್ಲೆಯ ಸಹಜ ಬೆಳವಣಿಗೆಯು ಅಬಾಧಿತವಾಗಿದೆ. ಒಂದೂವರೆ ದಶಕದ ಹಿಂದೆ ಬೆಳಗಾವಿಯಲ್ಲಿ ನಿರ್ಮಾಣಗೊಂಡ ಸುವರ್ಣ ಸೌಧ ಈ ಜಿಲ್ಲೆಗೆ ಅನಧಿಕೃತವಾಗಿಯಾದರೂ ಎರಡನೇ ರಾಜಧಾನಿಯ ಸ್ಥಾನಮಾನ ತಂದುಕೊಟ್ಟಿದೆ. ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ವಿಧಾನ ಮಂಡಳದ ಚಳಿಗಾಲದ ಅಧಿವೇಶನ ಈ ಸೌಧದಲ್ಲಿ ಜರುಗುತ್ತಿದೆ. ಈಗ ಹದಿಮೂರು ತಾಲುಕುಗಳಿಂದ ಕೂಡಿದ ಬಹುದೊಡ್ಡ ಜಿಲ್ಲೆಯೆನಿಸಿರುವ ಬೆಳಗಾವಿ ಅದಕ್ಕೆ ತಕ್ಕಂತೆ ದೊಡ್ಡ ರಾಜಕೀಯ ಪ್ರಾತಿನಿಧ್ಯವನ್ನೂ ಹೊಂದಿದೆ. ಕೆಲವು ಭಾಷಾಂಧ ಶಕ್ತಿಗಳ ಕಿಡಿಗೇಡಿತನದ ಹೊರತಾಗಿಯೂ ಇಲ್ಲಿ ಕನ್ನಡಿಗರು ಮತ್ತು ಮರಾಠಿಗರ ನಡುವಿನ ಬಾಂಧವ್ಯ, ಸಹಬಾಳ್ವೆಗೆ ಧಕ್ಕೆಯುಂಟಾಗಿಲ್ಲ. ಎಲ್ಲ ಬಗೆಯಿಂದ ಸಮೃದ್ಧವೂ ಸುಂದರವೂ, ವಿಶಿಷ್ಟವೂ ಆದ ಬೆಳಗಾವಿ ಜಿಲ್ಲೆ ಅಚ್ಚಗನ್ನಡ ನೆಲ. ಆದ್ದರಿಂದಲೇ  ಕವಿ ಡಾ. ಡಿ. ಎಸ್‌. ಕರ್ಕಿಯವರು “ ಹಚ್ಚೇವು ಕನ್ನಡದ ದೀಪ” ಎಂದು ಕನ್ನಡದ ದೀಪ ಶಾಶ್ವತವಾಗಿ ಬೆಳಗುವಂತೆ ಮಾಡಿದ್ದಾರೆ. ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ಬೆಳಗಾವಿ ಆರು ಕೋಟಿ ಕನ್ನಡಿಗರ ಅಭಿಮಾನದ ನೆಲ!  

-  ಎಲ್‌. ಎಸ್‌. ಶಾಸ್ತ್ರಿ 

ಹಿರಿಯ ಸಾಹಿತಿಗಳು, ಪತ್ರಕರ್ತರು 

         ಬೆಳಗಾವಿ  


- * * * -