ವೈಜ್ಞಾನಿಕ ಕೃಷಿ ಅಳವಡಿಸಿಕೊಳ್ಳಲು ರೈತರಿಗೆ ಕರೆ

ವೈಜ್ಞಾನಿಕ ಕೃಷಿ ಅಳವಡಿಸಿಕೊಳ್ಳಲು ರೈತರಿಗೆ ಕರೆ  Farmers urged to adopt scientific farming

ಹೂವಿನಹಡಗಲಿ 26: ರೈತರು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಕೃಷಿ ವಿಜ್ಞಾನಿಗಳು ನೀಡುವ ತರಬೇತಿ ಶಿಬಿರಗಳು ಹಾಗೂ ಕಾರ್ಯಾಗಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಶಿಬಿರ ಸಂಯೋಜಕ ಎಂ.ಆರ್‌. ಗೋವಿಂದಪ್ಪ ಹೇಳಿದರು.  ತಾಲೂಕಿನ ಕೊಂಬಳಿ ಗ್ರಾಮದ ಸಮುದಾಯ ಭವನದಲ್ಲಿ ಶುಕ್ರವಾರ ಹಗರಿ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಅವರು ಮಾತನಾಡಿದರು.  

ಕೃಷಿ ಸಂಶೋಧನೆಗಳಿಂದ ದೊರೆಯುವ ಹೊಸ ತಂತ್ರಜ್ಞಾನ ಹಾಗೂ ಮಾಹಿತಿ ರೈತರನ್ನು ತಲುಪುವುದು ಅಗತ್ಯವಾಗಿದೆ. ಕೃಷಿ ಪದವೀಧರರು ಇಂತಹ ಶಿಬಿರಗಳ ಮೂಲಕ ರೈತರಿಗೆ ಉಪಯುಕ್ತ ಮಾಹಿತಿ ನೀಡಿ ಆಧುನಿಕ ಕೃಷಿ ಪದ್ಧತಿಗಳನ್ನು ಪರಿಚಯಿಸಬೇಕು ಎಂದು ಹೇಳಿದರು.  

ಶಿಬಿರದಲ್ಲಿ ವಿದ್ಯಾರ್ಥಿಗಳು ಗ್ರಾಮದ ಸಾಮಾಜಿಕ ಹಾಗೂ ಕೃಷಿ ಸಂಪನ್ಮೂಲಗಳ ಕುರಿತು ಅಧ್ಯಯನ ನಡೆಸಿ, ಗ್ರಾಮದ ನಕ್ಷೆ ಸಿದ್ಧಪಡಿಸಿದರು. ಗ್ರಾಮದ ಬೆಳೆ ಮಾದರಿ, ನೈಸರ್ಗಿಕ ಸಂಪನ್ಮೂಲಗಳು ಹಾಗೂ ಮೂಲಸೌಕರ್ಯಗಳ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.  

ಕಾರ್ಯಕ್ರಮದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಚಂದ್ರಕಾಂತ ಕಾಲಿಬಾವಿ, ಸಹ ಸಂಯೋಜಕ ಸುರೇಶ್, ಪ್ರಗತಿಪರ ರೈತರಾದ ಪ್ರಭು ಸೋಪ್ಪಿನ, ಗಡ್ಡಿ ಗುಡ್ಡಪ್ಪ, ಹುಸೇನ್ ಸಾಬ್, ಸೊರಣಗಿ ವೀರಣ್ಣ, ವಿರೂಪಾಕ್ಷಪ್ಪ, ಈರಣ್ಣ, ಶಿವಕುಮಾರ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.