ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಎಂದು ಘೋಷಿಸಲು ರೈತರ ಆಗ್ರಹ
Farmers demand that Vijayapura district be declared completely drought-hit
ವಿಜಯಪುರ, ಸೆ. 09: ವಿಜಯಪುರ ಜಿಲ್ಲೆಯಲ್ಲಿ 2026-27ನೇ ಸಾಲಿನಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ತೀವ್ರವಾಗಿ ಹದಗೆಟ್ಟಿದ್ದು, ಜಿಲ್ಲೆಯ ಎಲ್ಲ 13 ತಾಲೂಕುಗಳನ್ನು ಸಂಪೂರ್ಣ ಬರಪೀಡಿತ ಎಂದು ಘೋಷಿಸಿ ರೈತರಿಗೆ ತಕ್ಷಣ ಪರಿಹಾರ ಒದಗಿಸಬೇಕು ಎಂದು ರೈತ ಸಂಘಟನೆಗಳ ಮುಖಂಡರು ಆಗ್ರಹಿಸಿದರು.
ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಎಂದು ಘೋಷಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಡೆಯುತ್ತಿರುವ ಹೋರಾಟ ಮುಂದುವರಿದಿದ್ದು, ಹೋರಾಟದ ಸಂದರ್ಭದಲ್ಲಿ ರೈತ ಸಂಘದ ಮುಖಂಡರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಚಂದ್ರಗೌಡ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದ್ದರೂ ಕೇವಲ ಮೂರು ತಾಲೂಕುಗಳನ್ನು ಮಾತ್ರ ಸಂಪೂರ್ಣ ಬರಪೀಡಿತ ಹಾಗೂ ಮೂರು ತಾಲೂಕುಗಳನ್ನು ಮಧ್ಯಮ ಬರಪೀಡಿತ ಎಂದು ಪರಿಗಣಿಸಿ, ಉಳಿದ ತಾಲೂಕುಗಳನ್ನು ಕೈಬಿಟ್ಟಿರುವುದು ಖಂಡನೀಯ. ಕೂಡಲೇ ಜಿಲ್ಲೆಯ ಎಲ್ಲ 13 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಎಲ್ಲ ರೈತರನ್ನು ಯಾವುದೇ ಭೇದಭಾವವಿಲ್ಲದೆ ಪರಿಗಣಿಸಿ ಬರ ಪರಿಹಾರ ನೀಡಬೇಕು. ಸರ್ಕಾರ ಚುನಾವಣಾ ಸಂದರ್ಭದಲ್ಲಿ ರೈತರ ಹೆಸರಿನಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಬೇಕು. ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪ್ರತಿ ಎಕರೆಗೆ ?50 ಸಾವಿರ ಪರಿಹಾರ ನೀಡಬೇಕು ಹಾಗೂ ಬೆಳೆ ವಿಮೆ ಮೊತ್ತದ ಶೇ.50ರಷ್ಟು ಮಧ್ಯಂತರ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಎಲ್ಲ ಹಳ್ಳ, ಕೊಳ್ಳ, ಕೆರೆ ಹಾಗೂ ಕಾಲುವೆಗಳನ್ನು ತುಂಬಿಸುವ ಕಾಮಗಾರಿಗಳನ್ನು ಕೈಗೊಳ್ಳಬೇಕು. ಜಾನುವಾರುಗಳಿಗೆ ಮೇವು ಒದಗಿಸಬೇಕು ಹಾಗೂ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.
ಪ್ರಾಂತ ರೈತ ಸಂಘದ ಮುಖಂಡ ಅಣ್ಣರಾಯ ಈಳಗೇರ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹೊಸದಲ್ಲ. ಹಿಂದಿನ ಬರಗಾಲಗಳ ಸಂದರ್ಭದಲ್ಲಿ ಸರ್ಕಾರಗಳು ಕೈಗೊಂಡ ಕ್ರಮಗಳನ್ನು ಅಧ್ಯಯನ ಮಾಡಿ, ಶಾಶ್ವತ ಬರ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ 13 ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಹೇಳಿದರು.
ಬರಪೀಡಿತ ಪ್ರದೇಶಗಳ ಕುರಿತು ಸರ್ಕಾರ ತಕ್ಷಣ ಸಮಗ್ರ ವರದಿ ಪಡೆದು ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು. ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಸೇರಿದಂತೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಸಂಗಮೇಶ ಸಗರ, ಮಹಾದೇವ ಬನಸೋಡೆ, ಸುರೇಖಾ ರಜಪೂತ, ಶ್ರೀಶೈಲ ಮುಳಜಿ, ಬಸವರಾಜ ಹಂದ್ರಾಳ, ಸುರೇಶ, ನರೇಂದ್ರಬಾಬು ಬರಡಿ, ರವಿ ಬರಡಿ ಸೇರಿದಂತೆ ನೂರಾರು ರೈತರು ಹಾಗೂ ರೈತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 