ನೇರ ಮಾರಾಟ ರೈತರ ಹೋರಾಟ; ಕೃಷಿಯೇ ನಮ್ಮ ಉಸಿರು: ಚುಕ್ಕಿ ನಂಜುಂಡಸ್ವಾಮಿ
Farmers' struggle for direct sales; agriculture is our lifeblood: Chukki Nanjundaswamy
ಬಳ್ಳಾರಿ, ಆ. 27: ಎಲ್ಲ ಸರ್ಕಾರಗಳು ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದ್ದು, ರೈತರ ಜಮೀನುಗಳನ್ನು ಕಬಳಿಸಿ ಮಾರಾಟ ಮಾಡುವಂತಹ ಪರಿಸ್ಥಿತಿ ಸೃಷ್ಟಿಸುತ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚುಕ್ಕಿ ನಂಜುಂಡಸ್ವಾಮಿ ಆರೋಪಿಸಿದರು. ನಗರದ ಗಾಂಧಿ ಭವನದಲ್ಲಿ ಬುಧವಾರ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಆಯೋಜಿಸಿದ್ದ ‘ನಮ್ಮ ಸಂತೇ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿಯನ್ನೇ ತಮ್ಮ ಉಸಿರೆಂದು ನಂಬಿ ಬದುಕುತ್ತಿರುವ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಕೃಷಿ ಭೂಮಿಯನ್ನು ಕಳೆದುಕೊಂಡ ರೈತರು ಬೀದಿಗೆ ಬೀಳುವ ಅಥವಾ ಆತ್ಮಹತ್ಯೆಯಂತಹ ದುಸ್ಥಿತಿಗೆ ತಳ್ಳಲ್ಪಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತರು ಬೆಳೆಯುವ ಬೆಳೆಗಳನ್ನೇ ಸೇವಿಸುವುದರಿಂದ ಕ್ಯಾನ್ಸರ್, ಕಿಡ್ನಿ, ಲಿವರ್ ಸೇರಿದಂತೆ ಹಲವು ಮಾರಕ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ರಾಸಾಯನಿಕ ಹಾಗೂ ಕ್ರಿಮಿನಾಶಕಗಳ ಅತಿಯಾದ ಬಳಕೆಯಿಂದ ಆಹಾರ ವಿಷಪೂರಿತವಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳು ರೈತರ ಹೊಲಗಳಲ್ಲಿ ವಿಷಕಾರಿ ರಾಸಾಯನಿಕಗಳ ಬಳಕೆಗೆ ಪ್ರೇರೇಪಿಸುತ್ತಿವೆ ಎಂದು ಅವರು ದೂರಿದರು. ಈ ಹಿನ್ನೆಲೆಯಲ್ಲಿ ರೈತ ಸಂಘಟನೆ ಸಾವಯವ ಕೃಷಿಯತ್ತ ಮುಖ ಮಾಡಿದ್ದು, ವಿಷಮುಕ್ತ ಆಹಾರ ಉತ್ಪಾದನೆಗೆ ಆದ್ಯತೆ ನೀಡುತ್ತಿದೆ. ಸಾವಯವ ಕೃಷಿಯಿಂದ ನಷ್ಟವಾಗುವುದಿಲ್ಲ. ಬೆಲೆ ಕಡಿಮೆಯಾದರೂ ಗುಣಮಟ್ಟದ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯುವ ಅವಕಾಶವಿದೆ ಎಂದು ಚುಕ್ಕಿ ನಂಜುಂಡಸ್ವಾಮಿ ಹೇಳಿದರು.
ರೈತರು ತಾವು ಬೆಳೆದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ಮಧ್ಯವರ್ತಿಗಳನ್ನು ತಪ್ಪಿಸಿ ಹೆಚ್ಚಿನ ಲಾಭ ಗಳಿಸಬಹುದು. ಈ ಉದ್ದೇಶದಿಂದಲೇ ರೈತ ಸಂಘದ ವತಿಯಿಂದ ‘ನಮ್ಮ ಸಂತೇ’ ಆರಂಭಿಸಲಾಗಿದೆ. ಇಲ್ಲಿ ಯಾವುದೇ ದಲ್ಲಾಳಿಗಳಾಗಲಿ, ‘ಆರ್ಗ್ಯಾನಿಕ್’ ಎಂಬ ಕೃತಕ ಲೇಬಲ್ಗಳಾಗಲಿ ಇಲ್ಲ. ರೈತರು ತಮ್ಮ ಹೊಲಗಳಲ್ಲಿ ಬೆಳೆದ ವಿಷಮುಕ್ತ ಆಹಾರ ಪದಾರ್ಥಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ನೇರ ಮಾರಾಟವೇ ರೈತರ ನಿಜವಾದ ಹೋರಾಟ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ‘ಸಾಲ ಮುಕ್ತ ಕೃಷಿ ಮಹಿಳೆ’ ಸಂಘವನ್ನು ಸಹ ಉದ್ಘಾಟಿಸಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 