ಕೆ.ಎಫ್‌. ಪಾಟೀಲರ ಹೆಸರನ್ನು ಎಲ್‌ಐಸಿ ಕಾಲೊನಿಗೆ ನಾಮಕರಣಕ್ಕೆ ಸಹಕಾರ ನೀಡಿ

ಕೆ.ಎಫ್‌. ಪಾಟೀಲರ ಹೆಸರನ್ನು ಎಲ್‌ಐಸಿ ಕಾಲೊನಿಗೆ ನಾಮಕರಣಕ್ಕೆ ಸಹಕಾರ ನೀಡಿ  Extend your support for naming the LIC Colony after K.F. Patil

ಲೋಕದರ್ಶನ ವರದಿ 

ಹಾವೇರಿ, ಆ. 27: ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶ್ರಮಿಸಿದ ಹಾಗೂ ಕನ್ನಡ ನಾಡಿನ ಶ್ರೇಯಸ್ಸಿಗೆ ತಮ್ಮನ್ನು ಅರ​‍್ಿಸಿಕೊಂಡಿದ್ದ ಕಾಕೋಳದ ಕೆ.ಎಫ್‌. ಪಾಟೀಲರ ದೂರದೃಷ್ಟಿಯ ಚಿಂತನೆಗಳು ಇಂದಿಗೂ ನಮಗೆ ಪ್ರೇರಣೆಯಾಗಿವೆ. ಅವರ ಸ್ಮರಣೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ನಗರದ ಎಲ್‌ಐಸಿ ಕಾಲೊನಿಗೆ ಕೆ.ಎಫ್‌. ಪಾಟೀಲ ಕಾಲೊನಿ ಎಂದು ನಾಮಕರಣ ಮಾಡಲು ಸ್ಥಳೀಯ ನಿವಾಸಿಗಳು ಸಹಕಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರ​‍್ಪ ಲಮಾಣಿ ಹೇಳಿದರು.  

ನಗರದ ಎಲ್‌ಐಸಿ ಕಾಲೊನಿಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರ ಕೆ.ಎಫ್‌. ಪಾಟೀಲರ 30ನೇ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  ಶಾಸಕರಾಗಿದ್ದ ಸಂದರ್ಭದಲ್ಲಿ ಕೆ.ಎಫ್‌. ಪಾಟೀಲರು ತುಂಗಾ ಮೇಲ್ದಂಡೆ ಯೋಜನೆಯ ಕುರಿತು ಅದ್ಭುತ ಕನಸು ಕಂಡಿದ್ದರು. ಭವಿಷ್ಯದಲ್ಲಿ ನಮ್ಮ ಭಾಗ ಹೇಗಿರಬೇಕು ಎಂಬುದರ ಬಗ್ಗೆ ಅವರು ದೂರದೃಷ್ಟಿಯಿಂದ ಚಿಂತಿಸಿದ್ದರು. ಅವರ ಕನಸುಗಳನ್ನು ಕಂಡು ತಾನು ಅಚ್ಚರಿಗೊಂಡಿದ್ದೆ ಎಂದು ಸಚಿವರು ಸ್ಮರಿಸಿದರು.  

ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಚ್‌.ಕೆ. ಪಾಟೀಲರು ಜಲಸಂಪನ್ಮೂಲ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಕೆ.ಎಫ್‌. ಪಾಟೀಲರ ತುಂಗಾ ಮೇಲ್ದಂಡೆ ಯೋಜನೆಯ ಕನಸನ್ನು ಸಾಕಾರಗೊಳಿಸುವ ಕಾರ್ಯ ನಡೆದಿರುವುದು ತೃಪ್ತಿದಾಯಕವಾಗಿದೆ ಎಂದು ಅವರು ಹೇಳಿದರು.  

ಇಂತಹ ಮಹನೀಯರನ್ನು ಸದಾ ಸ್ಮರಿಸುವುದು ಅಗತ್ಯ. ಸ್ಥಳೀಯ ಕಾಲೊನಿಗಳು ಹಾಗೂ ಉದ್ಯಾನವನಗಳಿಗೆ ಅವರ ಹೆಸರಿಡುವ ಮೂಲಕ ಅವರ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ಸಚಿವ ರುದ್ರ​‍್ಪ ಲಮಾಣಿ ಹೇಳಿದರು.  

ಹೊಸಮಠದ ಶ್ರೀ ಬಸವಶಾಂತಲಿಂಗ ಮಹಾಸ್ವಾಮೀಜಿ ಮಾತನಾಡಿ, ಜನರು ಹಾಗೂ ಜನಪ್ರತಿನಿಧಿಗಳು ಒಗ್ಗೂಡಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಬೇಕು. ಸ್ವಾತಂತ್ರ್ಯ ಹೋರಾಟಗಾರ ಕೆ.ಎಫ್‌. ಪಾಟೀಲರನ್ನು ಸ್ಮರಿಸುವ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಹಾವೇರಿ ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರನ್ನು ಸ್ಮರಿಸುವ ಇಂತಹ ಕಾರ್ಯಕ್ರಮಗಳು ಮಾದರಿಯಾಗಬೇಕು ಎಂದರು.  

ಅಧ್ಯಕ್ಷತೆ ವಹಿಸಿದ್ದ ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಎಫ್‌.ಎನ್‌. ಗಾಜಿಗೌಡ್ರ ಮಾತನಾಡಿ, ತಮ್ಮ ಅಧಿಕಾರಾವಧಿಯಲ್ಲಿ ಕೆ.ಎಫ್‌. ಪಾಟೀಲ ಉದ್ಯಾನವನ ನಿರ್ಮಾಣಕ್ಕೆ ಪ್ರಾಧಿಕಾರದಿಂದ ಸಾಧ್ಯವಾದಷ್ಟು ಸಹಾಯ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸ್ಥಳೀಯರ ದೇಣಿಗೆ ಹಾಗೂ ಸಹಕಾರ ಪಡೆದು ಉದ್ಯಾನವನದ ಅಭಿವೃದ್ಧಿ ಕೈಗೊಳ್ಳಬೇಕು. ಸ್ವಚ್ಛತೆಗೆ ಆದ್ಯತೆ ನೀಡಿದರೆ ನಿರ್ಮಲ ಹಾಗೂ ಸುಂದರ ವಾತಾವರಣ ನಿರ್ಮಾಣವಾಗುತ್ತದೆ ಎಂದರು.  

ಉದ್ಯಾನವನದಲ್ಲಿ ಅಳವಡಿಸಲು ಪರಮೇಶಪ್ಪ ಶಿವಣ್ಣನವರ, ಮಂಜುನಾಥ ಸಣ್ಣಿಂಗಣ್ಣನವರ ಹಾಗೂ ನಿಂಗಪ್ಪ ಆರೇರ ತಲಾ ಒಂದು ಬೆಂಚ್ ನೀಡುವುದಾಗಿ ಘೋಷಿಸಿದರು.  

ಕಾರ್ಯಕ್ರಮದಲ್ಲಿ ಜಗದೀಶ ಬೆಟಗೇರಿ, ಹನುಮಂತಗೌಡ ಗೊಲ್ಲರ, ಜಗದೀಶ ಮಹಾರಾಜಪೇಟ, ಹರೀಶ ಇಂಗಳಗೊಂದಿ, ಸಿದ್ದಣ್ಣ ಬಾಕಿ, ಪವನ್ ಚಲಾಳ, ಶಿವಣ್ಣ ಮಾಳಶೆಟ್ಟಿ, ರಾಜು ಗುಜ್ಜರ, ಸುಲೋಚನಾ ಮಸಾಳಜಿ, ಸವಿತಾ ಅಗಸಿಬಾಗಿಲು, ವಿದ್ಯಾ ಮಡಿವಾಳರ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

ಕೆ.ಎಫ್‌. ಪಾಟೀಲ ಉದ್ಯಾನವನ ಸಮಿತಿ, ದಿಶಾ ಫೌಂಡೇಶನ್ ಹಾವೇರಿ, ಅಮ್ಮ ಸಂಸ್ಥೆ ಹಿರೇಮುಗಳದೂರ ಹಾಗೂ ಅರಳಿಕಟ್ಟಿ ಪ್ರಕಾಶನ ಹಾವೇರಿ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಗುಳಪ್ಪ ಅರಳಿಕಟ್ಟಿ ನಿರ್ವಹಿಸಿದರು.