ಬರ ಪ್ರದೇಶ ಘೋಷಣೆಗೆ ರೈತ ಸಂಘದಿಂದ ಸರ್ಕಾರಕ್ಕೆ ಒತ್ತಾಯ

ಬರ ಪ್ರದೇಶ ಘೋಷಣೆಗೆ ರೈತ ಸಂಘದಿಂದ ಸರ್ಕಾರಕ್ಕೆ ಒತ್ತಾಯ Farmers' association urges government to declare drought-hit areas

ಲೋಕದರ್ಶನ ವರದಿ 

ಯರಗಟ್ಟಿ  19: ‘ಯರಗಟ್ಟಿ-ಸವದತ್ತಿ ಅವಳಿ ತಾಲ್ಲೂಕಿನಲ್ಲಿ ಹಸಿರು ಕಂಡರೂ ಬರದ ಛಾಯೆ ಇದೆ. ಸರ್ಕಾರ ಕೂಡಲೇ ಬರ ಪ್ರದೇಶಗಳೆಂದು ಘೋಷಣೆ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಬಸವರಾಜ ಬಿಜ್ಜೂರ ಒತ್ತಾಯಿಸಿದರು. ಭಾನುವಾರ ಪಟ್ಟಣ ಪ್ರವಾಸಿ ಮಂದಿರದಲ್ಲಿ ಜರುಗಿದ ಸಭೆಯಲ್ಲಿ ಹೋರಾಟದ ಮುನ್ಸೂಚನೆ ನೀಡಿ ಮಾತನಾಡಿದರು. 

‘ಬರಗಾಲ ಘೋಷಣೆ ಮಾಡಬೇಕಾದರೆ ಮುಖ್ಯಮಂತ್ರಿಗಳು ಬರ ಎದುರಿಸಲು ಸಿದ್ಧರಾಗಿ ಎಂದು ಈಗಾಗಲೇ ಹೇಳಿದ್ದಾರೆ. ಈ ಹೇಳಿಕೆಗಳನ್ನು ಗಮನಿಸಿದರೆ ಸಚಿವರು ಹಾಗೂ ಸಿಎಂ ಅವರ ನಡುವೆ ತಾಳುಮೇಳ ಇಲ್ಲ ಎನ್ನುವುದು ಗೊತ್ತಾಗುತ್ತದೆ’ ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿದ್ದರು ಅದನ್ನು ಗಮನಿಸದೆ ಕೆಲ ಶಾಸಕರು ಸಚಿವ ಸ್ಥಾನಕ್ಕಾಗಿ ದೆಹಲಿಯತ್ತ ಮುಖಮಾಡಿದ್ದಾರ ಎಂದು ಹೇಳಿದರು. 

‘ವಾಡಿಕೆಯ ಮಳೆ ಲೆಕ್ಕ ಹಾಕಿ ತೀರ್ಮಾನಿಸಬೇಕು. ತಿಂಗಳ ಹಿಂದೆ ಒಂದಿಷ್ಟು ಉತ್ತಮ ಮಳೆಯಾದ ಸಂದರ್ಭದಲ್ಲಿ ರೈತರು ಬಿತ್ತನೆ ಮಾಡಿದ್ದರು, ನಂತರ ಮಳೆ ಇಲ್ಲದೇ ಬೆಳೆಗಳು ಒಣಗಿವೆ. ಇತ್ತೀಚೆಗೆ ಸುರಿದ ಮಳೆಯಿಂದ ರೈತರು ಹಾಕಿದ ಬೀಜ ಭೂಮಿಯೊಳಗೆ ಹುದುಗಿದೆ. ಇಂಥ ಭೀಕರ ಸ್ಥಿತಿಯನ್ನು ಮುಖ್ಯಮಂತ್ರಿಗೆ ಗೊತ್ತು ಮಾಡಲು ಹೋರಾಟದ ಹಾದಿಯೊಂದೇ ಬಾಕಿ’ ಎಂದು ಹೇಳಿದರು. 

‘ತಾಲ್ಲೂಕಿನಲ್ಲಿ ಜೆಜೆಎಂ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ರೈತ ಸಂಘದ ಜಿಲ್ಲಾಕಾರ್ಯಾಧ್ಯಕ್ಷ ಸಿಂಧೂರ ತೆಗ್ಗಿ ಇದರಿಂದ ಸಾವಿರಾರು ಕೋಟಿ ಅನುದಾನದ ಕೆಲಸ ಕಾಣದಂತಾಗಿದೆ. ರಾಜಕೀಯ ಮುಖಂಡರು ಮತ್ತು ಹಾಲಿ ಶಾಸಕರು ಹೊಂದಾಣಿಕೆಯ ರಾಜಕೀಯ ಮಾಡಿಕೊಂಡು ತಿರುಗಾಡುತ್ತಿದ್ದಾರೆ’ ಎಂದು ದೂರಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಂಜುನಾಥ ವಣ್ಣೂರ, ಯಲ್ಲನಾಯ್ಕ ನಾಯ್ಕರ, ಅಶೋಕ ನಂದಿ, ಶಂಕರ ಬಗನಾಳ, ರಂಗಪ್ಪ ಗಂಗರಡ್ಡಿ, ರಾಮಕೃಷ್ಣ ಎಳ್ಳಮ್ಮಿ, ಗೌಡಪ್ಪ ಕಳಸಪ್ಪನ್ನವರ, ಪ್ರಭುಲಿಂಗ ಕುರುಬಗಟ್ಟಿಮಠ, ವಿರೇಶ ಮಲ್ಲಕನ್ನವರ, ಗಂಗಮ್ಮ ವಿಭೂತಿ, ರೇಣುಕಾ ಯಡಳ್ಳಿ, ಶೋಭಾ ಮಾರಡ್ಡಿ, ಬಸವ್ವ ತೊಂಡಿಕಟ್ಟಿ, ಮುತ್ತವ್ವ ಶಿಂಗಾಡಿ, ಮಲ್ಲವ್ವ ನಂದಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.