ಜಕಾರ್ತ: 188 ಪ್ರಯಾಣಿಕರಿದ್ದ ಲಯನ್ ಏರ್ ವಿಮಾನ ಇಂಡೋನೇಷ್ಯಾದ ಜಾವ ದ್ವೀಪದ ಸಮೀಪ ಪತನಗೊಂಡಿದೆ.
ಏಜೆನ್ಸಿ ವಕ್ತಾರ ಯುಸುಫ್ ಲತಿಫ್ ವಿಮಾನ ಪತನಗೊಂಡಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಜಾವಾ ಸಮುದ್ರ ತೀರದಲ್ಲಿ ಪತನಗೊಂಡ ವಿಮಾನದ ಸೀಟುಗಳು ಪತ್ತೆಯಾದ ಬಗ್ಗೆ ವರದಿಯಾಗಿವೆ. ಸಿಬ್ಬಂದಿ ಸೇರಿದಂತೆ 188 ಪ್ರಯಾಣಿಕರು ವಿಮಾನದಲ್ಲಿದ್ದರು.
ಲಯನ್ ಏರ್ ಟೇಕ್ ಆಫ್ ಆದ 13 ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡಿತ್ತು. ರಾಜಧಾನಿ ಜಕಾರ್ತದ ಬಂದರಿನಿಂದ ತೆರಳುತ್ತಿದ್ದ ಟಗ್ ಬೋಟ್‌ನಲ್ಲಿದ್ದ ಮಂದಿ ಪತನಗೊಂಡ ವಿಮಾನ ಬೀಳುತ್ತಿರುವುದನ್ನು ಕಣ್ಣಾರೆ ಕಂಡಿದ್ದಾರೆ ಎಂದುವರದಿಯಾಗಿದೆ.
ದುರಂತದಲ್ಲಿ ಬದುಕುಳಿದಿರಬಹುದಾದ ಪ್ರಯಾಣಿಕರಿಗಾಗಿ ಶೋಧ ಹಾಗೂ ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಸುಮಾತ್ರ ದ್ವೀಪದಿಂದ ದೂರ ತೀರದಲ್ಲಿರುವ ಪ್ಯಾಂಕಾಲ್ ಪಿನಾಂಗ್ ನಗರಕ್ಕೆ ಜಕಾರ್ತದಿಂದ ಹೊರಟಿದ್ದ ವಿಮಾನ ಇದಾಗಿದ್ದು, ಸಮುದ್ರದಲ್ಲಿ ಪತನಗೊಂಡ ವಿದ್ಯಾಮಾನವನ್ನು ಇಂಡೋನೇಷ್ಯಾದ ಶೋಧ ಮತ್ತು ರಕ್ಷಣಾ ಸಂಸ್ಥೆ ದೃಢಪಡಿಸಿದೆ.